ನಾಯಕ, ಕೋಚ್ ನನ್ನ ಆಟದ ಶೆಲಿಯ ಮಹತ್ವಅರ್ಥ ಮಾಡಿಕೊಂಡಿದ್ದಾರೆ : ಪೂಜಾರ

Update: 2020-03-19 18:16 GMT

ಹೊಸದಿಲ್ಲಿ, ಮಾ.19: ಭಾರತ ಟೆಸ್ಟ್ ತಂಡದ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಅವರು ತನ್ನ ಬ್ಯಾಟಿಂಗ್ ಶೈಲಿ ಪ್ರಾಮುಖ್ಯತೆಯನ್ನು ನಾಯಕ ಮತ್ತು ಕೋಚ್ ಅರ್ಥ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ.

32ರ ಹರೆಯದ ಪೂಜಾರ ಬಂಗಾಳ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ 237 ಎಸೆತಗಳಲ್ಲಿ 66 ರನ್ ಗಳಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಟೀಕೆಗೆ ಗುರಿಯಾಗಿದ್ದರು.

  

  ಜ್ವರ ಮತ್ತು ಗಂಟಲಿನ ನೋವಿನಿಂದ ಬಳಲುತ್ತಿದ್ದರೂ, ಅರ್ಪಿತ್ ವಸವಾಡ ಅವರೊಂದಿಗೆ ಆಟವನ್ನು ಬದಲಾಯಿಸುವ ಜೊತೆಯಾಟ ನೀಡಿ ಸೌರಾಷ್ಟ್ರ ತಂಡಕ್ಕೆ ಸಹಾಯ ಮಾಡಿದ್ದರು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಸೌರಾಷ್ಟ್ರ ಅಥವಾ ಭಾರತಕ್ಕಾಗಿ ಆಡುತ್ತಿರುವ ಪೂಜಾರ ಅವರ ಸ್ಟ್ರೈಕ್ ರೇಟ್ ಬಗ್ಗೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ‘‘ನನ್ನ ಸ್ಟ್ರೈಕ್‌ರೇಟ್ ಬಗ್ಗೆ ತಂಡದೊಳಗೆ ಹೆಚ್ಚು ಚರ್ಚೆ ನಡೆಯುತ್ತದೆ ಎಂದು ನಾನು ಭಾವಿಸುವುದಿಲ್ಲ . ಮಾಧ್ಯಮಗಳಲ್ಲಿ ವಿಭಿನ್ನ ವರದಿ ಪ್ರಕಟವಾಗುತ್ತದೆ. ಆದರೆ ತಂಡದ ಮ್ಯಾನೇಜ್‌ಮೆಂಟ್ ಸಂಪೂರ್ಣವಾಗಿ ಬೆಂಬಲಿಸುತ್ತಿದೆ. ನಾಯಕ , ಕೋಚ್ ಅಥವಾ ಬೇರೆಯವರಿಂದ ಯಾವುದೇ ಒತ್ತಡವಿಲ್ಲ’’ಎಂದು ಪೂಜಾರ ಹೇಳಿದರು.

 ‘‘ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ತಂಡದ ನಿರ್ವಹಣೆ ನನ್ನ ಆಟದ ಶೈಲಿ ಮತ್ತು ಅದರ ಮಹತ್ವವನ್ನು ಟೀಮ್ ಮ್ಯಾನೇಜ್‌ಮೆಂಟ್ ಅರ್ಥಮಾಡಿಕೊಂಡಿದೆ.ನಾನು ಅದರ ಬಗ್ಗೆ ಗಮನ ಹರಿಸುವುದಿಲ್ಲ. ತಂಡವು ಎಲ್ಲ ಸಮಯದಲ್ಲೂ ಗೆಲ್ಲುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನನ್ನ ಕೆಲಸ. ಜನರು ಒಬ್ಬ ವ್ಯಕ್ತಿಯನ್ನು ಗುರುತಿಸುವ ಪ್ರವೃತ್ತಿಯನ್ನು ಹೊಂದಿದ್ದಾರೆ ಆದರೆ ಅದು ನನ್ನ ಬಗ್ಗೆ ಮಾತ್ರವಲ್ಲ. ನಾನು ಆಡಿರುವ ಯಾವುದೇ ಟೆಸ್ಟ್ ಸರಣಿಯನ್ನು ನೀವು ನೋಡಿದರೂ ನಾನು ರನ್ ದಾಖಲಿಸಿರುವುದನ್ನು ಗುರುತಿಸಬಹುದಾಗಿದೆ ಎಂದು ಪೂಜಾರ ಹೇಳಿದ್ದಾರೆ. ನಾನು ಡೇವಿಡ್ ವಾರ್ನರ್ ಅಥವಾ ವೀರೇಂದ್ರ ಸೆಹ್ವಾಗ್ ಆಗಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಆದರೆ ಸಾಮಾನ್ಯ ಬ್ಯಾಟ್ಸ್‌ಮನ್ ಬ್ಯಾಟಿಂಗ್‌ಗೆ ಹೆಚ್ಚು ಸಮಯ ತೆಗೆದುಕೊಂಡರೆ ಅದರಲ್ಲಿ ಯಾವುದೇ ತಪ್ಪಿಲ್ಲ’’ಎಂದರು.

  ಇಡೀ ಬ್ಯಾಟಿಂಗ್ ಘಟಕವು ನ್ಯೂಝಿಲ್ಯಾಂಡ್‌ನಲ್ಲಿ ಕಠಿಣ ಸವಾಲನ್ನು ಎದುರಿಸಿತ್ತು. ಇದರಲ್ಲಿ ಭಾರತ 0-2 ಅಂತರದಲ್ಲಿ ಸೋಲನುಭವಿಸಿತು. ಪೂಜಾರ ಈ ಋತುವಿನಲ್ಲಿ ಐದು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಒಂದು ಅರ್ಧಶತಕ ಸೇರಿದೆ. ಆದರೆ ಅವರಿಗೆ 18ನೇ ಶತಕದ ದಾಖಲೆಗೆ ಇನ್ನೊಂದು ಶತಕ ಸೇರಿಸಲು ಸಾಧ್ಯವಾಗಲಿಲ್ಲ.

 ‘‘ಜನರು ನನ್ನಿಂದ ದೊಡ್ಡ ಸ್ಕೋರ್‌ನ್ನು ನಿರೀಕ್ಷಿಸುತ್ತಾರೆ. ನಾನು ನನಗೆ ಯಾವಾಗಲೂ ಶತಕ ದಾಖಲಿಸುವ ಸವಾಲು ಹಾಕುತ್ತೇನೆ . ಆದರೆ ಟೆಸ್ಟ್‌ನಲ್ಲಿ ಸರಾಸರಿ 50 ಗಳಿಸಲು ಸಾಧ್ಯವಾಗುತ್ತದೆ. ನನ್ನ ಮಾನದಂಡಗಳು ಯಾವಾಗಲೂ ಹೆಚ್ಚಿರುತ್ತವೆ. ಈ ಋತುವಿನಲ್ಲಿ ಪ್ರದರ್ಶನ ನನಗೆ ತೃಪ್ತಿಯಿಲ್ಲ. ನಾನು ಕೆಟ್ಟ ಪ್ರದರ್ಶನ ನೀಡಿದ್ದೇನೆ ಎಂದು ಹೇಳುವುದಿಲ್ಲ. ಆದರೆ ಕೆಲವು ಅಭಿಮಾನಿಗಳಿಗೆ ಇದು ಸಮಾಧಾನ ತಂದಿರಲಿಕ್ಕಿಲ್ಲ’’ ಎಂದು ಪೂಜಾರ ಹೇಳಿದರು. ‘‘2018-19ನೇ ಸಾಲಿನಲ್ಲಿ ನಾವು ಆಸ್ಟ್ರೇಲಿಯದಲ್ಲಿ ಆಡಿದ್ದೇವೆ. ಅದು ನಮಗೆ ದೊಡ್ಡ ಯಶಸ್ಸು ತಂದು ಕೊಟ್ಟಿದೆ ಎಂದು ನಾನು ಭಾವಿಸುತ್ತೇನೆ. ಭಾರತ ಸೇರಿದಂತೆ ಯಾವುದೇ ತಂಡವು ವಿದೇಶದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿಲ್ಲ ಎಂದು ಪೂಜಾರ ಒಪ್ಪಿಕೊಂಡಿದ್ದಾರೆ . ಈ ಪ್ರವೃತ್ತಿಗೆ ಟೆಸ್ಟ್ ಕ್ರಿಕೆಟಿಗರು ಕಾರಣ’’ ಎಂದು ಹೇಳಿದ್ದಾರೆ. ‘‘ಸೀಮಿತ ಓವರ್‌ಗಳ ಕ್ರಿಕೆಟ್‌ನ ಪ್ರಾಮುಖ್ಯತೆ ಗಮನಾರ್ಹವಾಗಿ ಹೆಚ್ಚಾಗಿದೆ. ನೀವು ಹೆಚ್ಚು ಗುಣಮಟ್ಟದ ಟೆಸ್ಟ್ ಆಟಗಾರರನ್ನು ಪಡೆಯುತ್ತಿಲ್ಲ. ಈ ಮೊದಲು ಟೆಸ್ಟ್ ಸರಣಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಅದಕ್ಕೂ ಮೊದಲು ಆಟಗಾರರು ಸಾಕಷ್ಟು ವಿಶ್ರಾಂತಿ ಪಡೆಯುತ್ತಿದ್ದರು. ಈಗ ಆ ರೀತಿ ಇಲ್ಲ ಈ ಕಾರಣದಿಂದಾಗಿ ನಾವು ಅನೇಕ ಗಾಯಗಳನ್ನು ನೋಡುತ್ತಿದ್ದೇವೆ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News