ಸಮೂಹ ಸನ್ನಿಗೆ ವೈರಾಣು ಸ್ಪರ್ಶ

Update: 2020-03-24 17:41 GMT

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಜನಸಂಪರ್ಕ ಹೆದ್ದಾರಿ, ಸಾರಿಗೆ ವಾಹನದ ಮೂಲಕ ನಡೆಯುವುದಿಲ್ಲ. ಹಳ್ಳಿಯಿಂದ ಹಳ್ಳಿಗೆ ನಡೆದಾಡುವ ರೈತಾಪಿ ಸಮುದಾಯಕ್ಕೆ ತಮ್ಮ ಸ್ವಗ್ರಾಮಗಳಲ್ಲಿ ಯಾವ ರೀತಿಯ ರಕ್ಷಣೆ ನೀಡಬೇಕು ಎಂದು ಸರಕಾರ ಯೋಚಿಸಬೇಕಿದೆ. ಮೂಲ ಸೌಕರ್ಯಗಳೂ ಇಲ್ಲದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೇ ಅವಲಂಬಿಸುವ ಗ್ರಾಮೀಣ ಜನತೆಗೆ ಇಂದು ಹೆಚ್ಚಿನ ರಕ್ಷಣೆ ಬೇಕಿದೆ. ಹೆಚ್ಚಿನ ಜಾಗೃತಿಯೂ ಬೇಕಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕ್ಷೇತ್ರದ ಇತರ ಕಾರ್ಯಕರ್ತರೊಡನೆ ಸಾರ್ವಜನಿಕರನ್ನೂ ಒಳಗೊಂಡ ಕಾರ್ಯಪಡೆಯ ಮೂಲಕ ಇದು ಸಾಧ್ಯವಾಗಬಹುದು. ಆದರೆ ಈ ಕಾರ್ಯಪಡೆಗೆ ಆರೋಗ್ಯ ರಕ್ಷಣೆ ನೀಡುವ ಹೊಣೆಯನ್ನೂ ಸರಕಾರ ಹೊರಬೇಕಾಗುತ್ತದೆ. ಕೊರೋನ ಜನರಿಂದ ಜನಕ್ಕೆ ಹರಡುವ ರೋಗವಾಗಿರುವುದರಿಂದ ಹೆಚ್ಚಿನ ಜನಸಂದಣಿಯನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದೇ ವೇಳೆ ತಮ್ಮ ನಿತ್ಯ ವ್ಯಾಪಾರವನ್ನೇ ನಂಬಿ ಬದುಕುವ, ನಿತ್ಯ ಕೂಲಿಯನ್ನೇ ಆಧರಿಸಿ ಬದುಕುವ ಕಾಯಕ ಜೀವಿಗಳ ಬದುಕು ಬೀದಿಗೆ ಬರದಂತೆ ಎಚ್ಚರವಹಿಸುವುದೂ ಸರಕಾರದ ಆದ್ಯತೆಯಾಗಬೇಕಿದೆ.


ಕೊರೋನ ವೈರಾಣು ಭಾರತದ ಮೇಲೆ ದಾಳಿ ನಡೆಸಿ ಒಂದು ತಿಂಗಳು ಕಳೆದಿದೆ. ಈ ಒಂದು ತಿಂಗಳ ಅವಧಿಯಲ್ಲಿ ನೂರಾರು ಕೊರೋನಸೋಂಕಿತರು ತಪಾಸಣೆಗೊಳಪಟ್ಟಿದ್ದು ಕೆಲವು ಸಾವುಗಳು ಸಂಭವಿಸಿವೆ. ಮಾರಣಾಂತಿಕ ವೈರಾಣು ಎಲ್ಲಿ ಉಗಮಿಸಿದೆ, ಎಲ್ಲಿಂದ ದಾಳಿ ಮಾಡುತ್ತಿದೆ ಎನ್ನುವುದರ ಬಗ್ಗೆ ಈಗಾಗಲೇ ಸಾಕಷ್ಟು ವಾದ ಪ್ರತಿವಾದ ಮಂಡನೆಯಾಗಿದೆ. ವಾಸ್ತವ ಎಂದರೆ ಕೋವಿಡ್-19 ನಮ್ಮ ದೇಶದ ಹೊಸ್ತಿಲಲ್ಲಿ ನಿಂತಿದೆ. ಮನೆಮನೆಯನ್ನು ಪ್ರವೇಶಿಸುತ್ತಿದೆ. ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸುತ್ತಿದೆ. ಕರ್ನಾಟಕವನ್ನೂ ಸೇರಿದಂತೆ ಹಲವು ರಾಜ್ಯಗಳು ಮಾರ್ಚ್ 31ರವರೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕ ವಲಯದಲ್ಲಿ ವೈರಾಣು ಹರಡುವುದನ್ನು ತಡೆಗಟ್ಟಲು ಯತ್ನಿಸುತ್ತಿವೆ. ಶಾಪಿಂಗ್ ಮಾಲ್‌ಗಳು, ಚಿತ್ರಮಂದಿರಗಳು, ಬೃಹತ್ ವಾಣಿಜ್ಯ ಮಳಿಗೆಗಳು, ಸಭೆ ಸಮಾರಂಭಗಳು ನಿಷಿದ್ಧವಾಗಿವೆ, ಶಾಲಾ ಕಾಲೇಜುಗಳು ಮುಚ್ಚಿವೆ, ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶುಚಿತ್ವ ಕಾಪಾಡಿಕೊಳ್ಳುವ ದೃಷ್ಟಿಯಿಂದ ಬೀದಿ ಬದಿಯ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ.ಕೋವಿಡ್-19 ಭಾರತದಲ್ಲಿ ಎರಡನೇ ಹಂತದಲ್ಲಿದ್ದು, ಮೂರನೇ ಹಂತ ತಲುಪುವುದರಲ್ಲಿದೆ.

ಹಾಗಾದಲ್ಲಿ ದೇಶದಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ.ಆದರೆ ಇದಕ್ಕೆ ಕೋವಿಡ್-19 ಕಾರಣವಲ್ಲ. ನಮ್ಮ ಆಡಳಿತ ವ್ಯವಸ್ಥೆ ಮತ್ತು ಸರಕಾರಗಳ ನಿಷ್ಕ್ರಿಯತೆ ಕಾರಣ. ಸಾವಿನ ಸಂಖ್ಯೆಯನ್ನೇ ಮಾಪಕವಾಗಿ ಬಳಸಿ ನೋಡಿದರೆ, ಕೋವಿಡ್-19 ವೈರಾಣುವಿನಿಂದ ಸಾಯುತ್ತಿರುವ ಅಥವಾ ಬಳಲುತ್ತಿರುವವರ ಸಂಖ್ಯೆಗಿಂತಲೂ ನೂರು ಪಟ್ಟು ಹೆಚ್ಚು ಜನರು ದಿನನಿತ್ಯ ಸಾಯುತ್ತಿದ್ದಾರೆ. ಕಾರಣ ಮಲೇರಿಯ, ಕಾಲರಾ, ಅಪೌಷ್ಟಿಕತೆ, ಹಸಿವು ಇತ್ಯಾದಿ. ಭಾರತದಲ್ಲಿ ಹಸಿವನ್ನು ರೋಗ ಎಂದೇ ಭಾವಿಸಲಾಗುತ್ತದೆ. ಚಿಕಿತ್ಸೆ ದೊರೆಯದೆ ಇರುವುದರಿಂದ ಜನರು ಹಸಿವಿನಿಂದ ಸಾಯುತ್ತಾರೆ. ಹಸಿವು ನಿವಾರಿಸಲು ಬೇಕಿರುವ ಒಂದೇ ಲಸಿಕೆ ಎಂದರೆ ಅನ್ನ. ಅದು ನಮ್ಮ ಸರಕಾರಗಳ ಬಳಿ ದೊರೆಯುತ್ತಿಲ್ಲ. ಇರಲಿ, ಕೋವಿಡ್-19ರ ನಡುವೆ ಇವೆಲ್ಲವೂ ಬೇಕೇ ಎಂಬ ಪ್ರಶ್ನೆ ಉದ್ಭವಿಸಿದಾಗ, ಮರುಪ್ರಶ್ನೆ ಹುಟ್ಟುತ್ತದೆ. ಹಲವಾರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಭಾರತದ ಬಡ ಜನತೆಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಿ ಆರೋಗ್ಯವಂತರನ್ನಾಗಿ ಮಾಡುವುದರಲ್ಲಿ ಸರಕಾರಗಳು ಯಶಸ್ವಿಯಾಗಿದ್ದರೆ ಇಂದು ಇದೇ ಜನತೆ ಕೋವಿಡ್-19 ಎದುರಿಸುವ ದೈಹಿಕ ಸಾಮರ್ಥ್ಯ ಹೊಂದಿರುತ್ತಿದ್ದರು. ಅಲ್ಲವೇ ?

ಭಾರತದ ಆಡಳಿತ ವ್ಯವಸ್ಥೆ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವೇಳೆಗೆ ಸಮಸ್ಯೆಯ ಆಳ ಪಾತಾಳಕ್ಕಿಳಿದಿರುತ್ತದೆ.ಇದು ದಶಕಗಳಿಂದಲೂ ಕಾಣುತ್ತಿರುವ ಸತ್ಯ. ಇಂದೂ ಬದಲಾಗಿಲ್ಲ. ಕೋವಿಡ್-19 ಚೀನಾ, ಇಟಲಿ, ಫ್ರಾನ್ಸ್ ಮತ್ತಿತರ ದೇಶಗಳಲ್ಲಿ ಕಾಣಿಸಿಕೊಂಡಾಗಲೇ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೂ ಎಚ್ಚರಿಕೆ ನೀಡಿತ್ತು. ಈ ವೈರಾಣು ಯಾವ ವೇಗದಲ್ಲಿ ಹರಡುತ್ತದೆ, ಹೇಗೆ ಹರಡುತ್ತದೆ, ಮುನ್ನೆಚ್ಚರಿಕೆಯ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು, ವೈದ್ಯಕೀಯ ಚಿಕಿತ್ಸೆಯ ವಿಧಾನಗಳೇನು ಹೀಗೆ ಹಲವು ಮಾರ್ಗದರ್ಶಿ ಸೂತ್ರಗಳನ್ನು ಎಲ್ಲ ದೇಶಗಳಿಗೂ ಒದಗಿಸಿತ್ತು. ಹೊರದೇಶದಿಂದ ಬರುವ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸುವುದು, ಆಂತರಿಕವಾಗಿ ಸೋಂಕು ತಗಲಿರುವವರನ್ನು ತಪಾಸಣೆಗೊಳಪಡಿಸುವುದು, ಸೋಂಕಿತರನ್ನು ಪ್ರತ್ಯೇಕಿಸುವುದು ಇವೆಲ್ಲವೂ ಯುದ್ಧ ಕಾಲದ ಶಸ್ತ್ರಾಭ್ಯಾಸ ಮತ್ತು ಪರಿಹಾರ ಮಾರ್ಗಗಳು. ಇದಕ್ಕೂ ಮುನ್ನ ಸರಕಾರ ಏನು ಮಾಡಬೇಕಿತ್ತು? ಕೊರೋನ ಒಂದು ರಾಜ್ಯ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾಗುವಂತಹ ಸೋಂಕು ಅಲ್ಲ ಎಂಬ ಅರಿವು ಇದ್ದಿದ್ದರೆ, ಸೋಂಕು ತಗಲಿದ ಮಾಹಿತಿ ದೊರೆತ ಕೂಡಲೇ ಕೇಂದ್ರ ಸರಕಾರ ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳೊಡನೆ ಸಮಾಲೋಚನೆ ನಡೆಸಬೇಕಿತ್ತು.

ಕೂಡಲೇ ಪರಿಣತ ವೈದ್ಯರು, ವೈರಾಣು ತಜ್ಞರು ಮತ್ತು ವಿಜ್ಞಾನಿಗಳನ್ನೊಳಗೊಂಡ ಒಂದು ತಂಡವನ್ನು ಸ್ಥಾಪಿಸಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಇಂತಹ ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕಿತ್ತು. ಭಾರತದಂತಹ ದೇಶದಲ್ಲಿ ನೈರ್ಮಲ್ಯ ಕಾಪಾಡುವುದು ಮಹತ್ತರವಾದ ಸಾಹಸ ಎಂಬ ಅರಿವು ಇದ್ದಿದ್ದರೆ ಸ್ವಚ್ಛ ಭಾರತ ಅಭಿಯಾನದ ನಿಧಿಯಿಂದಲೇ ರಾಜ್ಯ ಸರಕಾರಗಳಿಗೆ ಧನ ಸಹಾಯ ನೀಡಿ ಎಲ್ಲ ಗ್ರಾಮಗಳನ್ನು, ಪಟ್ಟಣಗಳನ್ನು, ನಗರಗಳನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕಿತ್ತು. ಕೊರೋನ ಕುರಿತು ಮತ್ತು ನೈರ್ಮಲ್ಯ ಕಾಪಾಡಲು ಅನುಸರಿಸಬೇಕಾದ ಮಾರ್ಗಗಳ ಕುರಿತು ಜನಜಾಗೃತಿ ಮೂಡಿಸಲು ಪ್ರತಿಯೊಂದು ಮೊಹಲ್ಲಾಗಳಲ್ಲೂ ಪರಿಣತರ ತಂಡಗಳನ್ನು ರಚಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಆರೋಗ್ಯ ಕಾರ್ಯಕರ್ತರು, ಶುಶ್ರೂಷಕರು, ಪೌರ ಕಾರ್ಮಿಕರು ಮತ್ತು ಸಾರ್ವಜನಿಕರನ್ನು ಒಳಗೊಂಡಂತಹ ಸಣ್ಣ ಸಮಿತಿಗಳನ್ನು ನೇಮಿಸಿ ಪ್ರತಿಯೊಂದು ಬಡಾವಣೆಗಳಲ್ಲೂ ನೈರ್ಮಲ್ಯ ಮತ್ತು ಸ್ವಚ್ಛತೆಯ ಜಾಗೃತಿ ಮೂಡಿಸಬೇಕಿತ್ತು. ದುರಂತ ಎಂದರೆ ಸ್ವಚ್ಛ ನಗರಿ ಪ್ರಶಸ್ತಿಗಾಗಿ ಹಾತೊರೆಯುತ್ತಿರುವ ಅನೇಕ ನಗರಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಪ್ರಥಮ ಸ್ಥಾನಕ್ಕಾಗಿ ಶ್ರಮಿಸುತ್ತಿರುವ ಮೈಸೂರು ಹೊರತೇನಲ್ಲ.

 ಈ ಕ್ರಮಗಳಿಗಿಂತಲೂ ಮುಖ್ಯವಾದದ್ದು ನಮ್ಮ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ. ಕೊರೋನ ಸೋಂಕು ಕಂಡುಹಿಡಿಯಲು ಅಗತ್ಯವಾದ ವೈದ್ಯಕೀಯ ಉಪಕರಣಗಳು ಇಂದಿಗೂ ಎಲ್ಲ ಆಸ್ಪತ್ರೆಗಳಲ್ಲಿ ದೊರೆಯುತ್ತಿಲ್ಲ. ಮೂಲತಃ ಪ್ರಾಥಮಿಕ ಆರೋಗ್ಯ ಕೇಂದ್ರಗಳು ದಶಕಗಳಿಂದ ನಿರ್ಲಕ್ಷಕ್ಕೊಳಗಾಗಿದ್ದು ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಸ್ಪಂದಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಿವೆ. ಕೊರೋನ ದಾಳಿಯ ಸಂದರ್ಭದಲ್ಲಿ ಇದು ಅಪಾಯಕಾರಿಯಾಗಿ ಕಾಣುತ್ತದೆ. ಅನೇಕ ಆಸ್ಪತ್ರೆಗಳು ಅನೈರ್ಮಲ್ಯದ ತಾಣಗಳಂತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ.ಕೊರೋನ ಸೋಂಕು ತಗಲಿರುವ ಹತ್ತು ದೇಶಗಳ ಪೈಕಿ ವೈದ್ಯಕೀಯ ಸಂಪನ್ಮೂಲಗಳಲ್ಲಿ ಭಾರತ ಬಹಳ ಹಿಂದುಳಿದಿದೆ. ಆದರೆ ಭಾರತದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಸಿಗೆಗಳ ಕೊರತೆ ತೀವ್ರವಾಗಿದೆ. ಪ್ರತಿ ಒಂದು ಸಾವಿರ ರೋಗಿಗಳಿಗೆ ಭಾರತದಲ್ಲಿ 0.7 ಹಾಸಿಗೆಗಳಿವೆ. ದೇಶದಲ್ಲಿ ವೈದ್ಯಕೀಯ ಸಂಸ್ಥೆಗಳು ಹೇರಳವಾಗಿದ್ದರೂ ವೈದ್ಯರ ಸಂಖ್ಯೆಯೂ ಸಹ 1,000 ರೋಗಿಗಳಿಗೆ 0.8ರಷ್ಟಿದೆ. ಭಾರತದ ಬಹುಪಾಲು ಗ್ರಾಮೀಣ ಪ್ರದೇಶಗಳಲ್ಲಿ ಕೈತೊಳೆಯುವ ಸೌಲಭ್ಯಗಳೂ ಲಭ್ಯವಿರುವುದಿಲ್ಲ.

ಚಿಕಿತ್ಸಾ ವೆಚ್ಚಗಳು ಹೆಚ್ಚಾದಂತೆಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನತೆ ಮತ್ತಷ್ಟು ಬಡತನಕ್ಕೆ ತಳ್ಳಲ್ಪಡುತ್ತಾರೆ. ದೇಶದ ಶೇ. 50.7ರಷ್ಟು ಗ್ರಾಮೀಣ ಜನತೆಗೆ ಸೋಪು ಬಳಸಿ ಕೈ ತೊಳೆಯುವ ಮೂಲಭೂತ ಸೌಕರ್ಯಗಳಿಲ್ಲ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಪಟ್ಟಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇ.20.2ರಷ್ಟಿದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ.40.5ರಷ್ಟು ಕೊರತೆ ಇದೆ. ಈ ಪರಿಸ್ಥಿತಿಗೆ ಮೂಲ ಕಾರಣ ಭಾರತ ಸರಕಾರದ ಆರೋಗ್ಯ ಕ್ಷೇತ್ರದ ಅತೀ ಕಡಿಮೆ ವೆಚ್ಚ. ವಿಶ್ವಬ್ಯಾಂಕ್ ವರದಿಯೊಂದರ ಅನುಸಾರ ಭಾರತ ತನ್ನ ಸಾಮಾನ್ಯ ವೆಚ್ಚದ ಶೇ.3.14ರಷ್ಟನ್ನು ಮಾತ್ರ ಆರೋಗ್ಯ ನಿರ್ವಹಣೆಗೆ ವ್ಯಯ ಮಾಡುತ್ತದೆ. ಚೀನಾದಲ್ಲಿ ಇದು ಶೇ.9.05ರಷ್ಟಿದ್ದರೆ ಇಟಲಿಯಲ್ಲಿ ಶೇ.13.47ರಷ್ಟಿದೆ. ಮುಖ ಗವಸು ಮತ್ತು ಕೃತಕ ಉಸಿರಾಟದ ಉಪಕರಣಗಳ ಕೊರತೆ ಭಾರತವನ್ನು ಹೆಚ್ಚು ಕಾಡಲಿದೆ. ಏಕೆಂದರೆ ಈ ಉಪಕರಣಗಳಿಗೆ ಭಾರತ ಹೆಚ್ಚಾಗಿ ಚೀನಾವನ್ನೇ ಅವಲಂಬಿಸಿತ್ತು.ಜಾಗತಿಕ ಬೇಡಿಕೆಯನ್ನು ಗಮನಿಸಿದರೆ ಈಗಾಗಲೇ 47 ದೇಶಗಳಿಗೆ 5 ಲಕ್ಷ ಮುಖಗವಸುಗಳನ್ನು ಪೂರೈಸಿದ್ದರೂ ಇನ್ನೂ ಶೇ.40ರಷ್ಟು ಹೆಚ್ಚು ಉತ್ಪಾದನೆ ಮಾಡುವುದು ಕಡ್ಡಾಯವಾಗಿರುತ್ತದೆ.

  ಈ ಮೂಲಭೂತ ಸಮಸ್ಯೆಯ ಕುರಿತು ಹತ್ತಾರು ವೈರಾಣು ತಜ್ಞರು, ವಿಜ್ಞಾನಿಗಳು, ವೈದ್ಯರು ಮತ್ತು ಸಮಾಜಮುಖಿ ಬರಹಗಾರರು ಲೇಖನಗಳನ್ನು ಪ್ರಕಟಿಸಿದ್ದಾರೆ. ಸರಕಾರ ಕೈಗೊಳ್ಳಬೇಕಿರುವ ವೈದ್ಯಕೀಯ ಮುನ್ನೆಚ್ಚರಿಕೆಯ ಕ್ರಮಗಳ ಕುರಿತು ಹಲವು ರೀತಿಯ ಸಲಹೆ, ಮಾರ್ಗದರ್ಶನವನ್ನು ನೀಡಿದ್ದಾರೆ. ಸರಕಾರ ಇದನ್ನು ಗಮನಿಸುತ್ತಿದೆಯೋ ಇಲ್ಲವೋ ಹೇಳಲಾಗುವುದಿಲ್ಲ.ಆದರೆ ರಾಷ್ಟ್ರ ಮಟ್ಟದಲ್ಲಿ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕೊರೋನ ಸೋಂಕು ತಡೆಗಟ್ಟಲು ಬೇಕಾಗುವ ಕಾರ್ಯಪಡೆಗಳನ್ನು ಇಂದಿಗೂ ರೂಪಿಸಿಲ್ಲ ಎನ್ನುವುದು ದಿಟ. ಜನತಾ ಕರ್ಫ್ಯೂ ವಿಧಿಸುವ ಮೂಲಕ ವೈರಾಣುವಿನ ಹರಡುವಿಕೆಗೆ ಕಡಿವಾಣ ಹಾಕಬಹುದೇ ಹೊರತು ಸೋಂಕಿತರ ಸಮಸ್ಯೆ ಬಗೆಹರಿಯುವುದಿಲ್ಲ. ಮಾರ್ಚ್ 22ರ ಜನತಾ ಕರ್ಫ್ಯೂ ಈ ನಿಟ್ಟಿನಲ್ಲಿ ಸ್ವಾಗತಾರ್ಹ ಎನಿಸಿದ್ದರಿಂದಲೇ ದೇಶದ ಸಮಸ್ತ ಜನತೆ ಸ್ಪಂದಿಸಿ ಯಶಸ್ವಿಯಾಗಿಸಿದ್ದಾರೆ. ಆದರೆ ಇಂತಹ ವೈಜ್ಞಾನಿಕ ಎನ್ನಬಹುದಾದ ಕ್ರಮವನ್ನು ಅವೈಚಾರಿಕ ಚಪ್ಪಾಳೆಯ ಮೂಲಕ ಭಂಗಗೊಳಿಸಿದ ಕೀರ್ತಿ ಸರಕಾರಕ್ಕೆ ಸಲ್ಲಬೇಕು. ಜಾಗಟೆ, ಶಂಖನಾದದ ಮೂಲಕ ಭಗ್ನಗೊಳಿಸಿದ ಕೀರ್ತಿ ಉನ್ಮತ್ತ ಕಾರ್ಯಕರ್ತರಿಗೆ ಸಲ್ಲಬೇಕಾಗಿದೆ.

ಜನತಾ ಕರ್ಫ್ಯೂ ವಿಧಿಸುವ ನಿಟ್ಟಿನಲ್ಲಿ ದೇಶದ ಜನತೆಗೆ 25 ನಿಮಿಷಗಳ ಭಾಷಣ ನೀಡಿದ ಪ್ರಧಾನಿ ಮೋದಿ ಕೊರೋನ ವಿರುದ್ಧದ ಸಮರ ಸಾರಲು ಸರ್ವ ಸಿದ್ಧತೆ ನಡೆಸಿದ್ದರೂ ದೇಶದ ಪ್ರಾಥಮಿಕ ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ನಿವಾರಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಕೆಲವು ನಗರಗಳನ್ನು ಲಾಕ್ ಡೌನ್ ಮಾಡುವ ಮೂಲಕ ಜನಸಾಮಾನ್ಯರ ನಿತ್ಯ ಜೀವನವನ್ನೇ ಕಂಗೆಡಿಸುವ ತೀರ್ಮಾನ ತಪ್ಪುಎನ್ನಲಾಗುವುದಿಲ್ಲ. ಆದರೆ ಲಾಕ್ ಡೌನ್‌ಮಾಡುವುದರಿಂದಲೇ ಸಮಸ್ಯೆ ಪರಿಹಾರವಾಗುವುದಿಲ್ಲ. ಇದಕ್ಕೆ ಪೂರಕವಾಗಿ ಪ್ರತಿಯೊಂದು ಗ್ರಾಮ, ಪಟ್ಟಣ, ನಗರಗಳಲ್ಲೂ, ಪ್ರತಿಯೊಂದು ಬಡಾವಣೆ, ಮೊಹಲ್ಲಾಗಳಲ್ಲೂ ಕಾರ್ಯಪಡೆಯನ್ನು ರೂಪಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸರಕಾರ ಮುಂದಾಗಬೇಕಿದೆ.ಜನ ಜಾಗೃತಿಗೂ, ಜಾಹೀರಾತಿಗೂ, ವ್ಯಕ್ತಿ ವೈಭವೀಕರಣಕ್ಕೂ ವ್ಯತ್ಯಾಸವನ್ನೇ ಅರಿಯದ ಕನ್ನಡದ ವಿದ್ಯುನ್ಮಾನ ಮಾಧ್ಯಮಗಳಿಂದ ಜನರಲ್ಲಿ ಹೆಚ್ಚಿನ ಭೀತಿ ಉಂಟಾಗುತ್ತಿದೆ. ಮಾಧ್ಯಮಗಳಿಗೆ ಕೋವಿಡ್-19 ಕುರಿತು ಅನಗತ್ಯ ಮಾಹಿತಿಯನ್ನು ನೀಡದಂತೆ ನಿರ್ಬಂಧ ಹೇರಿ,ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ ಉತ್ತೇಜನ ನೀಡುವುದು ಸರಕಾರದ ಆದ್ಯತೆಯಾಗಬೇಕಿದೆ.

ಸೋಂಕಿಗೆ ಹೆದರಿ ಜನರು ಮನೆಯೊಳಗೇ ಇರಬೇಕು ಎನ್ನುವುದು ಇಂದಿನ ಪರಿಸ್ಥಿತಿಯಲ್ಲಿ ತಪ್ಪೇನಲ್ಲ, ಆದರೆ ಸೋಂಕಿತ ಜನರ ಶುಶ್ರೂಷೆ ಮಾಡುತ್ತಿರುವ ವೈದ್ಯರು, ಶುಶ್ರೂಷಕಿಯರು, ಆಸ್ಪತ್ರೆಯ ಸಿಬ್ಬಂದಿ, ಕಾನೂನು ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಪೊಲೀಸ್ ಮತ್ತು ಗೃಹರಕ್ಷಣಾ ದಳದ ಸಿಬ್ಬಂದಿ ಇವರ ಆರೋಗ್ಯದ ಬಗ್ಗೆಯೂ ಸರಕಾರ ಗಮನ ಹರಿಸಬೇಕಿದೆ. ಸಣ್ಣ ಪುಟ್ಟ ಕಿರಾಣಿ ಅಂಗಡಿಗಳನ್ನು ಮುಚ್ಚಿಸುವ ಮೂಲಕ, ಬೀದಿ ಬದಿ ವ್ಯಾಪಾರವನ್ನು ನಿರ್ಬಂಧಿಸುವ ಮೂಲಕ ಕೆಳ ಮಧ್ಯಮ ವರ್ಗದ ಲಕ್ಷಾಂತರ ಕುಟುಂಬಗಳ ಬದುಕು ಹೈರಾಣಾಗುವಂತೆ ಮಾಡುತ್ತಿರುವ ಸರಕಾರ, ಮದುವೆ, ಮುಂಜಿ ಮುಂತಾದ ಸಮಾರಂಭಗಳು ನಡೆಯುತ್ತಲೇ ಇದ್ದರೂ ಕಣ್ಣುಮುಚ್ಚಿ ಕುಳಿತಿರುವುದು ದುರಂತ. ಸರಕಾರಿ ಬಸ್‌ಗಳನ್ನು ರದ್ದುಪಡಿಸಲಾಗಿದ್ದರೂ ಖಾಸಗಿ ವಾಹನಗಳ ಮೂಲಕ ಪ್ರಯಾಣಿಸುವವರನ್ನು ತಡೆಗಟ್ಟಲಾಗುವುದಿಲ್ಲ ಎನ್ನುವ ಪರಿಜ್ಞಾನ ಸರಕಾರಕ್ಕೆ ಇರಬೇಕು.ಇನ್ನು ಜನತಾ ಕರ್ಫ್ಯೂ ಯಶಸ್ವಿಯಾಗಿದೆ ಎಂದು ಬಿಂಬಿಸಲು ಕೇವಲ ನಗರ ದೃಶ್ಯಗಳನ್ನೇ ಬಿತ್ತರಿಸಿದ ಮಾಧ್ಯಮಗಳಿಗೆ ಗ್ರಾಮೀಣ ಪ್ರದೇಶಗಳು ನೆನಪಾಗದೆ ಇದ್ದುದು ಅಚ್ಚರಿಯ ಸಂಗತಿ.

ದೇಶದ ಚುನಾಯಿತ ಪ್ರಧಾನಿಯಾಗಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರವನ್ನು ಜನತೆ ಸ್ವಾಗತಿಸಿದ್ದಾರೆ. ಇದು ಅವರ ನೈತಿಕ ಹೊಣೆಗಾರಿಕೆಯಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಇನ್ನೂ ಏನೇನು ಕ್ರಮಗಳನ್ನು ಕೈಗೊಳ್ಳಬಹುದಿತ್ತು, ವೈದ್ಯಕೀಯ ಸಿಬ್ಬಂದಿಗೆ ಇನ್ನೂ ಯಾವ ರೀತಿಯ ರಕ್ಷಣಾ ಸೌಲಭ್ಯಗಳನ್ನು ಒದಗಿಸಬಹುದಿತ್ತು.ವೈದ್ಯಕೀಯ ಸೌಲಭ್ಯಗಳನ್ನು ಇನ್ನೂ ಹೇಗೆ ಹೆಚ್ಚಿಸಬಹುದಿತ್ತು ಎಂದು ಯೋಚಿಸುವ ವಿವೇಚನೆಯನ್ನು ನಾವು ಕಳೆದುಕೊಂಡರೆ, ಮೋದಿ ಭಜನಾ ಮಂಡಲಿಯ ಕೇಂದ್ರ ಬಿಂದು ಆಗಿಬಿಡುತ್ತಾರೆ. ನೂರಾರು ವರ್ಷಗಳ ತಪಸ್ಸು ಮಾಡಿದ ಋಷಿಮುನಿಯಂತೆ ಮೋದಿಯನ್ನು ವೈಭವೀಕರಿಸುವ ವಂದಿಮಾಗಧ ಮಾಧ್ಯಮಗಳ ಆಟಾಟೋಪವನ್ನು ನೋಡಿದರೆ ಕೋವಿಡ್-19ಕ್ಕಿಂತಲೂ ಹೆಚ್ಚಿನ ಅಪಾಯ ಇಲ್ಲಿ ಕಾಣುತ್ತದೆ.ಈ ವೈಭವೀಕರಣ ಮತ್ತು ಆತ್ಮರತಿಯ ಪರಿಣಾಮವನ್ನು ಮಾರ್ಚ್ 22ರ ಘಂಟೆ, ಜಾಗಟೆಯ ಮೆರವಣಿಗೆಗಳಲ್ಲಿ ಕಂಡಿದ್ದೇವೆ.ಸಾರ್ವಜನಿಕರಲ್ಲಿ ಯಾವುದೇ ವಿಚಾರದಲ್ಲಿ ಉನ್ಮಾದ ಸೃಷ್ಟಿಸಿದರೆ ಅದರಿಂದ ಭೀತಿ ಸೃಷ್ಟಿಯಾಗುತ್ತದೆ. ಭೀತಿ ಹೆಚ್ಚಾದಂತೆಲ್ಲಾ ರಕ್ಷಣೆಗೆ ಬರುವವರ ಆರಾಧನೆ ಹೆಚ್ಚಾಗುತ್ತದೆ. ಆರಾಧನೆ ತೀವ್ರವಾದಂತೆಲ್ಲಾ ನೈಜ ಸಮಸ್ಯೆ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಈ ವ್ಯೆಹವನ್ನು ಭೇದಿಸಿ ರಾಜ್ಯ ಸರಕಾರ ಮತ್ತು ನಾಗರಿಕ ಸಮಾಜ ತನ್ನ ಹೊಣೆಯನ್ನು ಅರಿತು ಮುನ್ನಡೆಯಬೇಕಾಗಿದೆ.
ಸಮೂಹ ಸನ್ನಿ ವೈರಾಣುವಿಗಿಂತಲೂ ಅಪಾಯಕಾರಿ ಎಂಬ ಎಚ್ಚರಿಕೆ ಇದ್ದರೆ ಸಾಕು.

Writer - ನಾ ದಿವಾಕರ

contributor

Editor - ನಾ ದಿವಾಕರ

contributor

Similar News