ಮದ್ಯ ಪೂರೈಕೆ: ಕೇರಳ ಸರಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

Update: 2020-04-02 15:45 GMT

ತಿರುವನಂತಪುರಂ, ಎ.2: ವೈದ್ಯರು ಶಿಫಾರಸು ಮಾಡಲ್ಪಟ್ಟವರಿಗೆ ಮದ್ಯ ಮಾರಾಟ ಮಾಡಲು ಅನುಮತಿ ನೀಡುವ ಕೇರಳ ಸರಕಾರದ ಆದೇಶಕ್ಕೆ ರಾಜ್ಯದ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ರಾಷ್ಟ್ರವ್ಯಾಪಿಯಾಗಿ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕೇರಳಾದ್ಯಂತ ಮದ್ಯ ಮಾರಾಟದ ಅಂಗಡಿಗಳನ್ನು ಮುಚ್ಚಲಾಗಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರಕಾರವು ವೈದ್ಯರಿಂದ ಶಿಫಾರಸು ಪಡೆದವರಿಗೆ ಮದ್ಯ ವನ್ನು ಮಾರಾಟ ಮಾಡಲು ಅನುಮತಿ ನೀಡಿತ್ತು.

ಆದರೆ ಕೇರಳ ಸರಕಾರದ ಈ ಕ್ರಮವನ್ನು ಪ್ರಶ್ನಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ನೀಡಿದೆ. ಮದ್ಯಪಾನ ತೊರೆದಾಗ ಅಸೌಖ್ಯದ ಲಕ್ಷಣಗಳನ್ನು ಪ್ರದರ್ಶಿಸುವ ಮದ್ಯಪಾನ ವ್ಯಸನಿಗಳಿಗೆ ವೈದ್ಯರುಗಳು ಮದ್ಯವನ್ನು ಶಿಫಾರಸು ಮಾಡುವುದು ವೈದ್ಯಶಾಸ್ತ್ರದ ಮೂಲಭೂತ ಆದರ್ಶಗಳಿಗೆ ವಿರುದ್ಧವಾದುದಾಗಿದೆ ಎಂದು ಅದು ವಾದಿಸಿತ್ತು.

ಆದರೆ ಕೇರಳ ಸರಕಾರದ ನ್ಯಾಯವಾದಿ ಕೆ.ವಿ.ಸೋಹನ್ ಅವರು ಮದ್ಯವ್ಯಸನಿಗಳು ಮದ್ಯಪಾನ ತೊರೆದಾಗ ಅವರು ಅಸೌಖ್ಯದ ಲಕ್ಷಣಗಳನ್ನು ಪ್ರದರ್ಶಿಸಿದಲ್ಲಿ ಅವರಿಗೆ ಸೀಮಿತ ಪ್ರಮಾಣದಲ್ಲಿ ಅಲ್ಕೋಹಾಲ್ ನೀಡುವುದು ವೈದ್ಯಕೀಯ ರಂಗದ ಅಂಗೀಕೃತ ಪದ್ಧತಿಯಾಗಿದೆ ಎಂದರು.

ಲಾಕ್‌ಡೌನ್‌ನಿಂದಾಗಿ ಮದ್ಯ ಲಭ್ಯವಾಗದೆ ಇರುವುದರರಿಂದ, ವೈದ್ಯರ ಶಿಫಾರಸುಪತ್ರ ಇರುವವರಿಗೆ ಮಾತ್ರ ಮದ್ಯವನ್ನು ಖರೀದಿಸಲು ಅವಕಾಶ ನೀಡಲಾಗುವುದು ಎಂದು ಕೇರಳ ಸರಕಾರ ಈ ವಾರದ ಆರಂಭದಲ್ಲಿ ತಿಳಿಸಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಮುಚ್ಚುಗಡೆಗೊಳಿಸಿದ ಬಳಿಕ ಮದ್ಯ ದೊರೆಯದ ಖಿನ್ನತೆಯಿಂಕೇರಳದಲ್ಲಿ ಕನಿಷ್ಠ 9 ಮಂದಿ ಆತ್ಮಹತ್ಯಾ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News