ಇಂದೋರ್ ನಲ್ಲಿ ವೈದ್ಯರ ಮೇಲಿನ ದಾಳಿಗೆ ವಾಟ್ಸ್ಯಾಪ್ ನಲ್ಲಿ ವೈರಲ್ ಆದ ನಕಲಿ ವಿಡಿಯೋ ಕಾರಣ: ವರದಿ

Update: 2020-04-03 14:44 GMT
ಹಲ್ಲೆ ಘಟನೆಯ ಬಳಿಕ ತತ್ಪಟ್ಟಿ ಬಖಾಲ್ ನಿವಾಸಿಗಳು ವೈದ್ಯರ ತಂಡದ ಕ್ಷಮೆ ಯಾಚಿಸುತ್ತಿರುವುದು

ಹೊಸದಿಲ್ಲಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ತಪಾಸಣೆಗೆಂದು ಬಂದ ವೈದ್ಯರ ಮೇಲೆ ದಾಳಿ ನಡೆದ ಇಂದೋರ್ ನಲ್ಲಿ ಘಟನೆ ನಡೆಯುವುದಕ್ಕೂ ಮೊದಲು 'ಅಧಿಕಾರಿಗಳು ಮುಸ್ಲಿಮರಿಗೆ ಕೊರೋನ ವೈರಸ್ ಇರುವ ಚುಚ್ಚುಮದ್ದನ್ನು ನೀಡುತ್ತಿದ್ದಾರೆ' ಎನ್ನುವ ಸುಳ್ಳು ವಿಡಿಯೋವೊಂದು ಹರಿದಾಡಿತ್ತು ಎಂದು indianexpress.com ವರದಿ ತಿಳಿಸಿದೆ.

ವೈದ್ಯರ ತಂಡದ ಮೇಲೆ ನಡೆದ ದಾಳಿಗೆ ಈ ನಕಲಿ ವಿಡಿಯೋ ಪ್ರಮುಖ ಕಾರಣವಾಗಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

"ಆರೋಗ್ಯವಂತ ಮುಸ್ಲಿಮರನ್ನು ಕರೆದೊಯ್ದು ವೈರಸ್ ಇರುವ ಚುಚ್ಚುಮದ್ದನ್ನು ನೀಡಲಾಗುತ್ತಿದೆ ಎನ್ನುವ ನಕಲಿ ವಾಟ್ಸ್ಯಾಪ್ ವಿಡಿಯೋವೊಂದು ತಟ್ಪಟ್ಟಿಭಖಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಿದಾಡಿತ್ತು" ಎಂದು ಈ ವಿಶೇಷ ವರದಿಯಲ್ಲಿ ತಿಳಿಸಲಾಗಿದೆ.

ಕೊರೋನ ವೈರಸ್ ನಿಂದ ಮೃತಪಟ್ಟ 65 ವರ್ಷದ ವ್ಯಕ್ತಿಯ ಮನೆಯವರ ತಪಾಸಣೆಗೆ ವೈದ್ಯರ ತಂಡ, ಮತ್ತು ಆಶಾ ಕಾರ್ಯಕರ್ತೆಯರು ತೆರಳಿದ್ದ ವೇಳೆ ದಾಳಿ ನಡೆದಿತ್ತು.

"ಮೊದಮೊದಲು ಸ್ಥಳೀಯರು ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ದಾಳಿ ನಡೆಯಿತು" ಎಂದು ತಂಡದಲ್ಲಿದ್ದ ಒಬ್ಬರು ಘಟನೆಯ ಬಗ್ಗೆ ವಿವರಿಸಿದ್ದಾರೆ. ನಕಲಿ ವಿಡಿಯೋಗಳು ವೈರಲ್ ಆದ ಬಳಿಕ ವೈದ್ಯರ ತಂಡದ ಬಗ್ಗೆ ಜನರು ಅನುಮಾನ ಹೊಂದಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಈಗಾಗಲೇ 4 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ.

ಜನರು ಅಮಾಯಕರು, ಅವರ ದಾರಿ ತಪ್ಪಿಸಲಾಗಿದೆ: ವೈದ್ಯರು

"ನಾವು ಈ ಘಟನೆಯಿಂದ ಹೆದರಿಲ್ಲ . ನಾವು ಕರ್ತವ್ಯ ಮುಂದುವರಿಸಿದ್ದೇವೆ. ನಾವು ಅದೇ ಪ್ರದೇಶಕ್ಕೆ ಗುರುವಾರ ಹೋಗಿದ್ದು, ಯಾವುದೇ ಸಮಸ್ಯೆ ಎದುರಾಗಿಲ್ಲ" ಎಂದು ತಂಡದಲ್ಲಿದ್ದ ವೈದ್ಯೆ ಡಾ. ತೃಪ್ತಿ ಕಟ್ದಾರೆ ಹೇಳಿದ್ದಾಗಿ theprint.in  ವರದಿ ಮಾಡಿದೆ.

ದಾಳಿ ನಡೆದ ನಂತರ ಗುರುವಾರ ಅಲ್ಲಿನ ನಿವಾಸಿಗಳು ಸಹಕಾರ ನೀಡಿದ್ದಾರೆಯೇ ಎಂದು ಪ್ರಶ್ನಿಸಿದಾಗ ಉತ್ತರಿಸಿದ ತೃಪ್ತಿ, "ಅಲ್ಲಿನ ನಿವಾಸಿಗಳದ್ದು ತಪ್ಪಿಲ್ಲ. ಕೆಲ ಸಮಾಜವಿರೋಧಿ ಶಕ್ತಿಗಳು ಅವರ ದಾರಿ ತಪ್ಪಿಸಿವೆ. ಅಲ್ಲಿನ ನಿವಾಸಿಗಳು ಅಮಾಯಕರು" ಎಂದಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News