ಕೊರೋನದಿಂದಾದ ಲಾಭ

Update: 2020-04-05 17:25 GMT

ಮಾನ್ಯರೇ,

ಇಡೀ ವಿಶ್ವ ತಾಪಮಾನ ಏರಿಕೆಯನ್ನು ಎದುರಿಸುವ ಸಂದರ್ಭ ಇದು. ಅಷ್ಟೇ ಅಲ್ಲ, ವಾಯು ಮಾಲಿನ್ಯ, ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ. ಇದನ್ನು ತಡೆಯುವ ಯಾವ ಮಾರ್ಗವೂ ಸರಕಾರದ ಬಳಿ ಇಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ. ಗಂಗೆಯನ್ನು ಈ ಶತಮಾನದಲ್ಲಿ ಶುದ್ಧೀಕರಿಸುವುದು ಸಾಧ್ಯವಿಲ್ಲ ಎಂದು ಈಗಾಗಲೇ ಸರಕಾರ ಅನಧಿಕೃತವಾಗಿ ಹೇಳಿಕೆ ನೀಡಿದೆ. ದಿಲ್ಲಿಯಂತೂ ಉಸಿರಾಟಕ್ಕೆ ಯೋಗ್ಯವಲ್ಲದ ನಗರ ಎಂದು ಘೋಷಿಸಲ್ಪಟ್ಟಿದೆ. ದೇಶದ ಹಲವು ನಗರಗಳು ಇಂತಹ ಮಾಲಿನ್ಯಗಳಿಂದ ತುಂಬಿ ತುಳುಕುತ್ತಿವೆ. ಇದಕ್ಕೆ ಸರಕಾರ ಪರ್ಯಾಯ ಮಾರ್ಗಗಳನ್ನು ಹುಡುಕುವಲ್ಲಿ ಸೋತಿರುವಾಗಲೇ ಕೊರೋನ ದೇಶಕ್ಕೆ ಕಾಲಿಟ್ಟಿದೆ.

ಕೊರೋನದಿಂದ ಮನುಷ್ಯ ಮನೆಯೊಳಗೆ ಅವಿತು ಕೂರುವಂತಾಗಿದೆ. ವಾಹನಗಳು ಮನೆಯ ಹಿತ್ತಲಲ್ಲಿ ಧೂಳು ತಿನ್ನುತ್ತಿವೆ. ಬೀದಿಯಲ್ಲಿ ಜನರೇ ಇಲ್ಲ. ಕಳೆದ 12 ದಿನಗಳಿಂದ ದೇಶಾದ್ಯಂತ ಲಾಕ್‌ಡೌನ್‌ನಿಂದ ಮನುಷ್ಯನಿಗೆ ತುಂಬಾ ತೊಂದರೆಯಾಗಿರಬಹುದು. ಆದರೆ ಪ್ರಾಣಿ, ಪಕ್ಷಿಗಳಿಗೆ, ಪರಿಸರಕ್ಕೆ ತುಂಬಾ ಲಾಭವಾಗಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಗಂಗಾ ನದಿ ಮತ್ತು ಯುಮುನೆಯರ ಮಾಲಿನ್ಯ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನುವುದು ವರದಿಯಾಗಿದೆ. ನಗರಗಳು ಮಾಲಿನ್ಯ ಮುಕ್ತವಾಗಿವೆ. ಗಾಳಿ ಸೇವಿಸುವುದಕ್ಕೆ ಅರ್ಹವಾಗಿದೆ. ಪ್ರಾಣಿ ಪಕ್ಷಿಗಳು ನಗರಗಳ ಗದ್ದಲದಿಂದ ಒಂದಿಷ್ಟು ನಿಟ್ಟುಸಿರು ಬಿಟ್ಟಿವೆ. ಇವೆಲ್ಲವೂ ಈ ಜಗತ್ತಿನ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊರೋನ ಬಂದಿರುವುದೇ ಮನುಷ್ಯನಿಂದ ಪರಿಸರವನ್ನು ರಕ್ಷಿಸುವುದಕ್ಕಾಗಿರಬಹುದೇ? ಪ್ರಕೃತಿಗೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಬಗೆ ಚೆನ್ನಾಗಿ ಗೊತ್ತು. ಕೊರೋನ ಕೂಡ ಅದರ ಒಂದು ಭಾಗವಾಗಿರಬಹುದೇ?

Writer - ಭಾಗ್ಯಶ್ರೀ, ಬೆಂಗಳೂರು

contributor

Editor - ಭಾಗ್ಯಶ್ರೀ, ಬೆಂಗಳೂರು

contributor

Similar News