ಸೂಕ್ತ ಚಿಕಿತ್ಸೆ ಲಭಿಸದೆ ಮೂವರು ಭೋಪಾಲ್ ಅನಿಲ ದುರಂತ ಸಂತ್ರಸ್ತರ ಸಾವು

Update: 2020-04-10 11:38 GMT

ಭೋಪಾಲ್: ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ಒದಗಿಸಲೆಂದು 1998ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸ್ಥಾಪಿಸಲಾಗಿದ್ದ 350 ಹಾಸಿಗೆ ಸಾಮರ್ಥ್ಯದ ಭೋಪಾಲ್ ಮೆಮೋರಿಯಲ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್(ಬಿಎಂಎಚ್‍ಆರ್‍ಸಿ) ಅನ್ನು ಮಧ್ಯ ಪ್ರದೇಶ ಸರಕಾರ ಕೋವಿಡ್-19 ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಯಾಗಿ ಪರಿವರ್ತಿಸಿದ್ದರಿಂದ ಸೂಕ್ತ ಚಿಕಿತ್ಸೆ ದೊರೆಯದೆ ಇಲ್ಲಿಯ ತನಕ ಕನಿಷ್ಠ ಮೂವರು ಅನಿಲ ದುರಂತ ಸಂತ್ರಸ್ತರು ಮೃತಪಟ್ಟಿದ್ದಾರೆ ಎಂದು thequint.com ವರದಿ ಮಾಡಿದೆ.

ಸರಕಾರ ಬಿಎಂಎಚ್‍ಆರ್‍ ಸಿಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿಸಿದ ನಂತರ ಅಲ್ಲಿದ್ದ ರೋಗಿಗಳಿಗೆ ಬೇರೆ ಕಡೆ ಚಿಕಿತ್ಸೆ ಪಡೆಯುವಂತೆ ಆಸ್ಪತ್ರೆಯ ಆಡಳಿತ ಹೇಳಿದ್ದರಿಂದ ಅವರು ಅನಿವಾರ್ಯವಾಗಿ ಅಲ್ಲಿಂದ ತೆರಳಬೇಕಾಗಿತ್ತು.

ಹೀಗೆ ಈ ಆಸ್ಪತ್ರೆಯಿಂದ  ಮಾರ್ಚ್ 24ರಂದು ಹಮೀದಿಯಾ ಆಸ್ಪತ್ರೆಗೆ ದಾಖಲಾದ 55 ವರ್ಷದ ಶಹಜಾನಬಾದ್ ನಿವಾಸಿ ಕಾಲುರಾಂ ಮಾರ್ಚ್ 28ರಂದು ಮೃತಪಟ್ಟಿದ್ದರು. ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.

ಎಪ್ರಿಲ್ 2ರಂದು ಆಸ್ಪತ್ರೆಯಿಂದ ತೆರಳಬೇಕಾಗಿ ಬಂದ 70 ವರ್ಷದ ಮಹಿಳೆಯ ಕುಟುಂಬಕ್ಕೆ ಏನು ಮಾಡುವುದೆಂದು ತಿಳಿಯದೆ ಆಕೆಯನ್ನು ಮನೆಗೆ ಕರೆತಂದಿದ್ದರಿಂದ ಆಕೆ ಅಲ್ಲಿ ಕಳೆದ ಗುರುವಾರ ಮೃತಪಟ್ಟಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಇನ್ನೋರ್ವ 55 ವರ್ಷದ ವ್ಯಕ್ತಿಯನ್ನು  ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು,. ಆದರೆ ಆತನನ್ನು ನಂತರ ತಪಾಸಣೆಗೊಳಪಡಿಸಿದಾಗ ಕೊರೋನ ಸೋಂಕು ಉಂಟಾಗಿರುವುದು ದೃಢವಾಗಿತ್ತಲ್ಲದೆ ಆತನೇ ಭೋಪಾಲ್‍ ನಲ್ಲಿ ಮೃತಪಟ್ಟ  ಮೊದಲ ಕೊರೋನ ರೋಗಿಯಾಗಿದ್ದ.

ಆದರೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 68 ವರ್ಷದ ಮುನ್ನಿ ಬೀ ಎಂಬವರನ್ನೂ ಹೊರನಡೆಯುವಂತೆ ಹೇಳಿದ್ದ ಸಂದರ್ಭ ಆಕೆ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದರು. ಆದರೆ ಅಪೀಲನ್ನು ಮಧ್ಯ ಪ್ರದೇಶ ಹೈಕೋರ್ಟಿನಲ್ಲಿ ಸಲ್ಲಿಸುವಂತೆ ಹೇಳಲಾಯಿತು. ಹೈಕೋರ್ಟ್ ಕೊರೋನ ಸಮಸ್ಯೆಯಿಂದ ಇನ್ನೂ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಂಡಿಲ್ಲ. ಆದರೆ ಈ ನಡುವೆ ಅರ್ಜಿದಾರೆ ಮುನ್ನಿ ಬೀ  ಮೃತಪಟ್ಟಿದ್ದಾರೆ ಎಂದು thequint.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News