ಕರುಳಕುಡಿಯ ಕಳೇಬರವನ್ನು ಕೈಯಲ್ಲಿ ಹೊತ್ತು ಕೊಂಡು ಹೋದ ತಾಯಿ
ಜೆಹಾನಾಬಾದ್, ಬಿಹಾರ: ಇಲ್ಲಿನ ಮಹಿಳೆಯೊಬ್ಬರು ಹಾಗು ಆಕೆಯ ಪತಿ ತಮ್ಮ ಮೂರು ವರ್ಷದ ಮಗನಿಗೆ ಮೊದಲು ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಆತ ಮೃತಪಟ್ಟ ಮೇಲೆ ಕಳೇಬರವನ್ನು ಸಾಗಿಸಲು ಆಂಬುಲೆನ್ಸ್ ಕೂಡ ಸಿಗದೆ ಕೈಯಲ್ಲೇ ಹೊತ್ತುಕೊಂಡು ಹೋದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಲಾಕ್ ಡೌನ್ ನಿಂದ ಆಂಬುಲೆನ್ಸ್ ಸಿಗದೆ ಬಳಿಕ ಹೇಗೋ ಟೆಂಪೋ ಮಾಡಿಕೊಂಡು ಜೆಹಾನಾಬಾದ್ ತಲುಪಿದರೂ ಯಾವುದೇ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಿಲ್ಲ ಎಂದು ದಂಪತಿ ರೋಧಿಸುವ ವಿಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಾಯಿ ತನ್ನ ಮಗುವಿನ ಶವ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುವಾಗ ಆಕೆಯ ಪತಿ ಅಸಹಾಯಕನಾಗಿ ಪಕ್ಕದಲ್ಲಿ ನಿಂತಿದ್ದಾನೆ. ಆಗ ಯಾರೋ ನೆರವಿನ ಕೊಡುಗೆ ನೀಡಿದರೂ ಈಗ ನಮಗೆ ಆಂಬುಲೆನ್ಸ್ ಬೇಕಾಗಿಲ್ಲ ಎಂದು ಪತಿ ಹೇಳುತ್ತಾನೆ.
ಮಗುವಿನ ತಂದೆ ಗಿರೇಜ್ ಕುಮಾರ್ ಪ್ರಕಾರ ಮಗುವಿಗೆ ಎರಡು ದಿನಗಳ ಹಿಂದೆ ಅನಾರೋಗ್ಯ ಪ್ರಾರಂಭವಾಯಿತು. ಮೊದಲು ಹಳ್ಳಿಯಲ್ಲಿದ್ದ ವೈದ್ಯರಿಗೆ ತೋರಿಸಿದ ತಂದೆ ತಾಯಿ ಅನಾರೋಗ್ಯ ಹೆಚ್ಚಾದಾಗ ಜೆಹಾನಾಬಾದ್ ಗೆ ಬರಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಆಂಬುಲೆನ್ಸ್ ಸಹಿತ ಯಾವುದೇ ವಾಹನ ಸಿಕ್ಕಿಲ್ಲ. ಬಳಿಕ ಟೆಂಪೋ ಒಂದನ್ನು ಬಾಡಿಗೆಗೆ ತೆಗೆದುಕೊಂಡು ದಂಪತಿ ಜೆಹಾನಾಬಾದ್ ತಲುಪಿದ್ದಾರೆ.
ಅಲ್ಲಿ ಸದರ್ ಆಸ್ಪತ್ರೆಯ ವೈದ್ಯರು ಪಾಟ್ನಾ ಮೆಡಿಕಲ್ ಕಾಲೇಜಿಗೆ ಹೋಗುವಂತೆ ಹೇಳಿದ್ದಾರೆ. ಆದರೆ ಅವರಿಗೆ ಆಂಬುಲೆನ್ಸ್ ಮಾಡಿ ಕೊಟ್ಟಿಲ್ಲ. ಈ ವಿಳಂಬದಿಂದಾಗಿಯೇ ಮಗು ಮೃತಪಟ್ಟಿತು ಎಂಬುದು ದಂಪತಿಯ ದೂರು.
ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸದರ್ ಆಸ್ಪತ್ರೆಯ ವ್ಯವಸ್ಥಾಪಕನನ್ನು ಜಿಲ್ಲಾಡಳಿತ ಅಮಾನತು ಮಾಡಿದೆ ಮತ್ತು ಕೆಲವು ವೈದ್ಯರಿಗೆ ಶೋಕಾಸ್ ನೋಟಿಸ್ ನೀಡಿದೆ. "ಆಂಬುಲೆನ್ಸ್ ಒದಗಿಸಬೇಕಿತ್ತು. ಏಕೆ ಹೀಗಾಯಿತು ಎಂದು ನಾವು ಪರಿಶೀಲಿಸುತ್ತಿದ್ದೇವೆ" ಎಂದು ಜಿಲ್ಲಾಧಿಕಾರಿ ನವೀನ ಕುಮಾರ್ ಹೇಳಿದ್ದಾರೆ.