×
Ad

22 ಆಹಾರ ವಸ್ತುಗಳ ಬೆಲೆ ಮೇಲೆ ಕೇಂದ್ರ ಹದ್ದಿನಕಣ್ಣು

Update: 2020-04-14 09:28 IST

ಹೊಸದಿಲ್ಲಿ, ಎ.14: ದೇಶದಲ್ಲಿ ಅಗತ್ಯ ವಸ್ತುಗಳ ಅಭಾವ ಹೆಚ್ಚುವ ಭೀತಿಯ ಬೆನ್ನಲ್ಲೇ ಕೇಂದ್ರ್ರ ಸರ್ಕಾರ ಪ್ರಮುಖ 114 ನಗರಗಳಲ್ಲಿ 22 ಅಗತ್ಯ ಆಹಾರ ವಸ್ತುಗಳ ಬೆಲೆ ಮೇಲೆ ತೀವ್ರ ನಿಗಾ ಇಡಲು ನಿರ್ಧರಿಸಿದೆ. ಈಗಾಗಲೇ ಈ ನಗರಗಳಲ್ಲಿ ಬೆಲೆ ಶೇಕಡ 15ರಷ್ಟು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ಇಂಥ ಪರಿಸ್ಥಿತಿಯಲ್ಲಿ ನೇರವಾಗಿ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಅಧಿಕಾರ ಇಲ್ಲದಿದ್ದರೂ, ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಆಯಾ ರಾಜ್ಯ ಸರ್ಕಾರಗಳನ್ನು ಈ ವಿಚಾರದಲ್ಲಿ ಎಚ್ಚರಿಸಬಹುದಾಗಿದೆ. ಜತೆಗೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಗ್ರಾಹಕರಿಗೆ ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಕೋರಬಹುದಾಗಿದೆ.

ಇ- ಮಾರಾಟಗಾರರ ಬಳಿ ಒಂದು ತಿಂಗಳಿಗೆ ಬೇಕಾಗುವಷ್ಟು ದಾಸ್ತಾನು ಇದೆ ಎನ್ನಲಾಗಿದ್ದು, ದಾಸ್ತಾನು ಕಡಿಮೆಯಾಗುತ್ತಿರುವ ಬಗ್ಗೆ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಜತೆಗೆ ರವಿವಾರ ನಡೆಸಿದ ಸಭೆಯಲ್ಲಿ ರಾಜ್ಯಗಳು ಬೇಳೆಕಾಳು ಹಾಗೂ ತರಕಾರಿ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ನಫೆಡ್ ಮಧ್ಯಪ್ರವೇಶಿಸಿ ಬೇಳೆಕಾಳುಗಳ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ನಫೆಡ್‌ನಲ್ಲಿ ಸುಮಾರು 40 ಲಕ್ಷ ಟನ್ ಬೇಳೆಕಾಳು ಸಂಗ್ರಹ ಇದ್ದು, ತಿಂಗಳಿಗೆ 1.9 ಲಕ್ಷ ಟನ್ ಪೂರೈಸಲಿದೆ.

ವ್ಯಾಪಾರಿಗಳು ಆಹಾರಧಾನ್ಯಗಳನ್ನು ಹಿಡಿದಿಡುವುದನ್ನು ತಡೆಯುವ ದೃಷ್ಟಿಯಿಂದ ಅಗತ್ಯ ಸರಕುಗಳ ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News