ಕೊರೋನ ಪರೀಕ್ಷೆಗೆ ದೇಶದಲ್ಲೇ ಕಿಟ್ ಉತ್ಪಾದನೆ

Update: 2020-04-16 05:46 GMT

ಹೊಸದಿಲ್ಲಿ, ಎ.16: ದೇಶದ ಮೂರು ಕಂಪೆನಿಗಳಲ್ಲಿ ಕೋವಿಡ್-19 ಪರೀಕ್ಷಾ ಕಿಟ್‌ಗಳನ್ನು ಉತ್ಪಾದಸಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಲೈಸನ್ಸ್ ನೀಡಿದೆ.

ನಮ್ಮ ದೇಹದಲ್ಲಿನ ಆ್ಯಂಟಿಬಾಡಿ ಕಣಗಳನ್ನು ಆಧರಿಸಿ ಕ್ಷಿಪ್ರವಾಗಿ ಕೋವಿಡ್-19 ಸೋಂಕು ಪರೀಕ್ಷೆ ನಡೆಸುವ ಕಿಟ್‌ಗಳ ಉತ್ಪಾದನೆಯನ್ನು ದಿಲ್ಲಿಯ ವ್ಯಾನ್‌ಗಾರ್ಡ್ ಡಯಾಗ್ನೋಸ್ಟಿಕ್ಸ್, ಕೇರಳದಲ್ಲಿರುವ ಸರ್ಕಾರಿ ಸಾಮ್ಯದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಮತ್ತು ಗುಜರಾತ್‌ನ ವೋಕ್ಸ್‌ಚರ್ ಬಯೋ ಲಿಮಿಟೆಡ್ ಉತ್ಪಾದನೆ ಆರಂಭಿಸಿವೆ.

ಆರ್‌ಟಿಕೆ ಕಿಟ್‌ಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ಭಾರತ ನಿರ್ಧರಿಸಿತ್ತು. ಆದರೆ ಇದನ್ನು ಪೂರೈಸಲು ಎಪ್ರಿಲ್ 5, ಎಪ್ರಿಲ್ 9 ಹಾಗೂ ಎಪ್ರಿಲ್ 15 ಹೀಗೆ ಹಲವು ಗಡುವು ಮುಗಿದರೂ ಇನ್ನೂ ಭಾರತಕ್ಕೆ ಆರ್‌ಟಿ ಕಿಟ್‌ಗಳು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲೇ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ಮೂರು ಕಂಪೆನಿಗಳು ಉತ್ಪಾದಿಸಿದ ಆರ್‌ಟಿಕೆ ಕಿಟ್‌ಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಮಾಣೀಕರಿಸಿತ್ತು. ಎಚ್‌ಎಲ್‌ಎಲ್ ಮತ್ತು ವೋಕ್ಸ್‌ಚರ್ ಉತ್ಪಾದಿಸಿದ ಒಂದು ಲಕ್ಷ ಕಿಟ್‌ಗಳು ಎಪ್ರಿಲ್ 20ರ ವೇಳೆಗೆ ಬಳಕೆಗೆ ಲಭ್ಯವಾಗಲಿವೆ ಎಂದು ಮೂಲಗಳು ಹೇಳಿವೆ.

ಆರ್‌ಟಿ-ಪಿಸಿಆರ್ ಕಿಟ್‌ಗಳಲ್ಲಿ ಫಲಿತಾಂಶ ಗೊತ್ತಾಗಲು ಐದು ಗಂಟೆ ಬೇಕಾಗುತ್ತದೆ. ಆದರೆ ಆರ್‌ಟಿ ಕಿಟ್‌ಗಳು ಕೇವಲ 30 ನಿಮಿಷಗಳಲ್ಲಿ ಫಲಿತಾಂಶ ನೀಡುವುದರಿಂದ ವಿಶ್ವಾದ್ಯಂತ ಈ ಕಿಟ್‌ಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಆರ್‌ಟಿಕೆ ಫಲಿತಾಂಶ ನೆಗೆಟಿವ್ ಬಂದಲ್ಲಿ ಅದನ್ನು ದೃಢೀಕರಿಸಲು ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸುವುದು ಐಸಿಎಂಆರ್ ಮಾರ್ಗಸೂಚಿಯ ಪ್ರಕಾರ ಕಡ್ಡಾಯ.

ಜನಪ್ರಿಯ ಕಾಂಡೋಮ್ ಬ್ರಾಂಡ್ ನಿರೋಧ್ ಉತ್ಪಾದಿಸುವ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್ ಹರ್ಯಾಣದ ಮನೇಸರ್ ಘಟಕದಲ್ಲಿ ಉತ್ಪಾದನೆ ಆರಂಭಿಸಿದೆ. ಒಂದು ವಾರದಲ್ಲಿ ಒಂದು ಲಕ್ಷ ಕಿಟ್ ಉತ್ಪಾದಿಸಲಾಗುವುದು. ಐಸಿಎಂಆರ್‌ಗೆ ನೇರವಾಗಿ ಇದನ್ನು ಪೂರೈಸಲಾಗುವುದು ಎಂದು ಕಂಪೆನಿಯ ಮೂಲಗಳು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News