×
Ad

ಅಹ್ಮದಾಬಾದ್ ಆಸ್ಪತ್ರೆಯ ಧರ್ಮಾಧಾರಿತ ಕೊರೋನ ವಾರ್ಡ್: ಪ್ರೊಗ್ರೆಸ್ಸಿವ್ ಮೆಡಿಕೋಸ್ ಎಂಡ್ ಸೈಂಟಿಸ್ಟ್ಸ್ ಫೋರಂ ಖಂಡನೆ

Update: 2020-04-16 12:00 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಗುಜರಾತ್ ರಾಜ್ಯದ ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಕೊರೋನ ರೋಗಿಗಳನ್ನು ಅವರ ಧರ್ಮದ ಆಧಾರದಲ್ಲಿ ಬೇರೆ ಬೇರೆ ವಾರ್ಡುಗಳಲ್ಲಿರಿಸಲಾಗಿದೆ ಎಂಬ  ವರದಿಯನ್ನು ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಸಂಘಟನೆಯಾದ 'ಪ್ರೊಗ್ರೆಸ್ಸಿವ್ ಮೆಡಿಕೋಸ್ ಎಂಡ್ ಸೈಂಟಿಸ್ಟ್ಸ್ ಫೋರಂ' ತೀವ್ರವಾಗಿ ಖಂಡಿಸಿದೆ. ಇಂತಹ ಒಂದು ಪ್ರಮಾದ ಎಸಗಿದ್ದಕ್ಕಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕ್ಷಮೆ ಕೋರಬೇಕೆಂದು ಸಂಘಟನೆ ಹೇಳಿದೆಯಲ್ಲದೆ ಉಪಮುಖ್ಯಮಂತ್ರಿ ಹಾಗೂ ರಾಜ್ಯದ ಆರೋಗ್ಯ ಸಚಿವರನ್ನು ವಜಾಗೊಳಿಸಬೇಕೆಂದೂ ಆಗ್ರಹಿಸಿದೆ. ಗುಜರಾತ್ ಸರಕಾರದ ಇಂತಹ ಒಂದು ತಾರತಮ್ಯಕಾರಿ ಕ್ರಮದ ಮೂಲಕ ಕೆಟ್ಟ ಹಾಗೂ ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಸಂಘಟನೆ ಹೇಳಿದೆ.

"ಇಡೀ ಜಗತ್ತೇ ಕೋವಿಡ್-19 ವಿರುದ್ಧ ಹೋರಾಡುತ್ತಿರುವಂತಹ ಸಂದರ್ಭದಲ್ಲಿ ಭಾರತದ ಆಡಳಿತಗಾರರು ರೋಗಿಗಳನ್ನು ಅವರ ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ,'' ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಡಾ ಹರ್ಜಿತ್ ಸಿಂಗ್ ಭಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿಗಳು ಯಾವುದೇ ಧರ್ಮದವರಾಗಲಿ, ಇಂತಹ ಒಂದು ಕ್ರಮ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದೂ ಅವರು ಭಯ ಪಟ್ಟಿದ್ದಾರೆ.

ರೋಗಿಗಳನ್ನು ಧರ್ಮದ ಆಧಾರದಲ್ಲಿ ಬೇರೆ ಬೇರೆ ವಾರ್ಡುಗಳಲ್ಲಿ ಸರಕಾರದ ತೀರ್ಮಾನದಂತೆ ಇರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹೇಳಿದ್ದರೆ, ರಾಜ್ಯದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಮಗೆ ಈ ಕುರಿತು ತಿಳಿದಿಲ್ಲ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News