×
Ad

ಬದುಕನ್ನು ಬದಲಿಸುವ ಸೂಕ್ಷ್ಮಜೀವಿಗಳು !

Update: 2020-04-17 10:27 IST

ಇತ್ತೀಚಿನ ದಿನಗಳಲ್ಲಿ ಸೂಕ್ಷ್ಮಜೀವಿಗಳು ಪ್ರಪಂಚದಲ್ಲಿ ಮಹಾಮಾರಿಯಾಗಿ ತಾಂಡವವಾಡುತ್ತಿರುವುದು ಸತ್ಯ ಮತ್ತು ಸಹಜ ಕೂಡ. ಇವುಗಳಿಗೆ ಕಾರಣ ಹುಡುಕುತ್ತಾ ಹೊರಟರೆ ಎಲ್ಲಾ ಅವಘಡಗಳಿಗೂ ಮನುಷ್ಯನ ಮೇಲೆ ಬೆಟ್ಟು ಮಾಡಿ ತೋರಿಸಬೇಕಾಗಿ ಬರುತ್ತದೆ.

ಸೂಕ್ಷ್ಮ ಜೀವಿಗಳಿಲ್ಲದ ಪ್ರಪಂಚ ಮತ್ತು ಪರಿಸರವನ್ನು ಊಹಿಸಿಕೊಳ್ಳುವುದು ಬಹಳ ಕಷ್ಟ ಮತ್ತು ಅಸಾಧ್ಯ. ಸೂಕ್ಷ್ಮ ಜೀವಿಗಳು ಸ್ವಾಭಾವಿಕವಾಗಿ ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ಪರಿಸರದಲ್ಲಿ ಸೂಕ್ಷ್ಮ ಜೀವಿಗಳು ಇಲ್ಲದ ಜಾಗವಿಲ್ಲ. ಆದರೆ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಸೂಕ್ಷ್ಮಜೀವಿಗಳಲ್ಲಿ ಬೆರಳೆಣಿಕೆಯಷ್ಟೇ ವೈಜ್ಞಾನಿಕವಾಗಿ ಗುರುತಿಸಲ್ಪಟ್ಟಿರುವುದು.

ಸೂಕ್ಷ್ಮ ಜೀವಿಗಳನ್ನು ಬಹು ಮುಖ್ಯವಾಗಿ ಶಿಲೀಂದ್ರಗಳು, ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳಾಗಿ ವಿಂಗಡಿಸಲಾಗುತ್ತಿದೆ. ಭೂಮಂಡಲದಲ್ಲಿ ಹೊಸ ಹೊಸ ಜೀವಿಗಳ ಸೇರ್ಪಡೆ ಮತ್ತು ಅವುಗಳಲ್ಲಿ ಕಾಲ ಕಾಲಕ್ಕೆ ಕಂಡು ಬರುವ ಭಿನ್ನವಾದ ಗುಣಗಳ ಕಾರಣದಿಂದ ವಿಜ್ಞಾನಿಗಳಿಗೆ ಸೂಕ್ಷ್ಮಜೀವಿಗಳನ್ನು ಇಲ್ಲಿಯವರೆಗೂ ನಿರ್ದಿಷ್ಟವಾಗಿ ಮತ್ತು ಕರಾರುವಾಕ್ಕಾಗಿ ವರ್ಗೀಕರಣ ಮಾಡಲು ಸಾಧ್ಯವಾಗಿಲ್ಲ. ಪರಿಸರದಲ್ಲಿ ಇಲ್ಲಿಯವರೆಗೂ ಶಿಲೀಂದ್ರಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಸಂಖ್ಯೆಯಲ್ಲಿ ವೈರಸ್‌ಗಳನ್ನು ಗುರುತಿಸಲಾಗಿದೆ.

ಪರಿಸರದಲ್ಲಿ ಸೂಕ್ಷ್ಮಜೀವಿಗಳು ಬಹುಉಪಯೋಗಿ ಸೂಕ್ಷ್ಮಜೀವಿಗಳಾಗಿ ಮತ್ತು ರೋಗಕಾರಕ ಜೀವಿಗಳಾಗಿ ಕಾರ್ಯನಿರ್ವಹಿಸುತ್ತವೆ. ಬಹಳ ಮುಖ್ಯವಾಗಿ ಸೂಕ್ಷ್ಮಜೀವಿಗಳು ಪರಾವಲಂಬಿ ಜೀವಿಗಳು (Heterotrophs), ಅಂದರೆ ತನ್ನ ಜೀವನ ಚಕ್ರ ನಡೆಸಲು ಹಾಗೂ ಆಹಾರಕ್ಕಾಗಿ ಇನ್ನೊಂದು ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ. ಸಾಮಾನ್ಯವಾಗಿ ಸೂಕ್ಷ್ಮಜೀವಿಗಳಿಗೆ ಜೀವನ ಚಕ್ರವನ್ನು ನಡೆಸಲು ತನ್ನದೇ ಆದ ಅವಲಂಬಿತ ಜೀವಿಗಳು ಸಿಗದೇ ಇದ್ದಲ್ಲಿ, ಅವುಗಳು ಬಹಳ ವರ್ಷಗಳ ಕಾಲ ಪರ್ಯಾಯ ಜೀವಿಗಳಲ್ಲಿ ನೆರವು ಪಡೆಯುತ್ತವೆ ಅಥವಾ ಪರ್ಯಾಯ ಜೀವಿಗಳು ಸಿಗದೇ ಹೋದಲ್ಲಿ ಅವುಗಳು ನಶಿಸಿಹೋಗುತ್ತವೆ.

ಸ್ವಾಭಾವಿಕವಾಗಿ ಸೂಕ್ಷ್ಮಜೀವಿಗಳು ಮನುಷ್ಯನ ಕಣ್ಣಿಗೆ ಕಾಣದೇ ಸೂಕ್ಷ್ಮಜೀವಿಗಳಲ್ಲಿಯೇ ಒಂದರ ಮೇಲೆ ಒಂದು ವೈರತ್ವ ನಡೆಯುತ್ತದೆ (Antagonism). ಅವುಗಳು ಎಷ್ಟೇ ಅಪಾಯಕಾರಿಯಾಗಿದ್ದರೂ ಪರಿಸರದಲ್ಲಿ ಖಂಡಿತವಾಗಿ ಬೇರೆ ಜೀವಿಗಳು ಅವುಗಳನ್ನು ನಾಶ ಮಾಡುತ್ತವೆ. ಅಂತಹ ಅದ್ಭ್ಬುತ ಶಕ್ತಿ ಇರುವುದು ಪರಿಸರದಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳಿಗೆ ಮಾತ್ರ. ಇತ್ತೀಚಿನ ದಿನಗಳಲ್ಲಿ ಸೂಕ್ಷ್ಮಜೀವಿಗಳು ಪ್ರಪಂಚದಲ್ಲಿ ಮಹಾಮಾರಿಯಾಗಿ ತಾಂಡವವಾಡುತ್ತಿರುವುದು ಸತ್ಯ ಮತ್ತು ಸಹಜ ಕೂಡ. ಇವುಗಳಿಗೆ ಕಾರಣ ಹುಡುಕುತ್ತಾ ಹೊರಟರೆ ಎಲ್ಲಾ ಅವಘಡಗಳಿಗೂ ಮನುಷ್ಯನ ಮೇಲೆ ಬೆಟ್ಟು ಮಾಡಿ ತೋರಿಸಬೇಕಾಗಿ ಬರುತ್ತದೆ.

ಸಾಮಾನ್ಯವಾಗಿ ಸೂಕ್ಷ್ಮಜೀವಿಗಳು ಕಾಲಕಾಲಕ್ಕೆ ಬದಲಾವಣೆಗೊಳ್ಳುವ ಪರಿಸರಕ್ಕೆ ತಕ್ಕಂತೆ ಅವುಗಳ ಜೀನ್ಸ್‌ಗಳು ಮಾರ್ಪಾಡುಗೊಳ್ಳುತ್ತವೆ (Mutation). ನೈಸರ್ಗಿಕವಾಗಿ ಅವುಗಳ ನಡವಳಿಕೆ ಕೂಡ ವಿಚಿತ್ರವಾಗಿ ಮಾರ್ಪಟ್ಟು ಪಾಲುದಾರರನ್ನು ಹುಡುಕಿಕೊಂಡು ನಿಯಂತ್ರಿಸಲಾಗದ ಮಾರಕ ರೋಗವನ್ನು ತಂದೊಡ್ಡುತ್ತವೆ. ಅಂತಹವುಗಳಲ್ಲಿ ಬಹಳ ಮುಖ್ಯವಾಗಿ ಕೋವಿಡ್-19, ಸಾರ್ಸ್, ಮೆರ್ಸ್, ಎಬೋಲ, ಏಡ್ಸ್, ಡೆಂಗ್, ಹಂದಿ ಜ್ವರ, ಹಕ್ಕಿ ಜ್ವರ, ನಿಫಾ, ಚಿಕುನ್‌ಗುನ್ಯಾ ಇನ್ನೂ ಹತ್ತು ಹಲವಾರು ಮಾರಕ ಕಾಯಿಲೆಗಳು ಮನುಷ್ಯನನ್ನು ಎಡೆಬಿಡದೆ ಕಾಡಿವೆ. ಪ್ರಪಂಚದಲ್ಲಿ ಮನುಷ್ಯನ ಅಭಿವೃದ್ಧ್ದಿಗೆ ಕಡಿವಾಣ ಹಾಕುವುದೇ ಸೂಕ್ಷ್ಮಜೀವಿಗಳು ಅಂದರೆ ತಪ್ಪೇನಿಲ್ಲ. ಮನುಷ್ಯ ತನ್ನ ಆರೋಗ್ಯದ ಕಾಳಜಿ ಬಿಟ್ಟು ಪರಿಸರ ವಿರೋಧಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಎಂದಾದರೊಂದು ದಿನ ಇಂತಹ ಮಹಾಮಾರಿಗೆ ಕಾರಣವಾಗಲೇಬೇಕಿತ್ತು.

ಹಿಂದೆಂದೂ ಕಂಡು ಕೇಳರಿಯದ ಮತ್ತು ಯಾರ ಊಹೆಗೂ ನಿಲುಕದೆ ಹಾಗೆ ಧಿಡೀರನೆ ಸೃಷ್ಟಿಯಾಗಿ ರಣಕೇಕೆ ಹಾಕುತ್ತಿರುವ ಅತೀ ಸಣ್ಣ ಸೂಕ್ಷ್ಮಜೀವಿ ಕೊರೋನ ವೈರಸ್ ಮನುಷ್ಯನ ಅಟ್ಟಹಾಸವನ್ನು ಅಡಗಿಸಿದೆ. ಬೇರೆ ಸೂಕ್ಷ್ಮಜೀವಿಗಳಿಗೆ ಹೋಲಿಕೆ ಮಾಡುವುದಾದರೆ, ಇದು ಅತೀ ಸಣ್ಣ ಸೂಕ್ಷ್ಮ ಜೀವಿಗಳ ಗುಂಪಿಗೆ ಸೇರುತ್ತದೆ. ಈ ವೈರಸ್ ಬದುಕುವುದಕ್ಕೆ ಇನ್ನೊಂದು ಜೀವಿ ಮೇಲೆ ಅವಲಂಬಿತವಾಗಿರುತ್ತದೆ. ಅವಲಂಬಿತ ಜೀವಿ ಸಿಗದೇ ಇದ್ದಲ್ಲಿ ಧೂಳಿನ ಕಣವಾಗಿ ಪರಿಸರದಲ್ಲಿ ಇರುತ್ತದೆ ಹಾಗೆಯೇ ಕಾಲ ಕ್ರಮೇಣ ನಶಿಸಿ ಹೋಗುತ್ತದೆ. ಮೊಟ್ಟ ಮೊದಲಿಗೆ ಚೀನಾ ದೇಶದ ವುಹಾನ್ ಪ್ರಾಂತದಲ್ಲಿ ಕಾಣಿಸಿಕೊಂಡು ಇಡೀ ಜಗತ್ತನ್ನೇ ಕಾಡ್ಗಿಚ್ಚಿನಂತೆ ವ್ಯಾಪಿಸಿಕೊಂಡಿದೆ. ಇದನ್ನು ವಿಶ್ವಸಂಸ್ಥೆಯು ಪ್ಯಾನ್‌ಡೆಮಿಕ್ ರೋಗವೆಂದು (Pandemic disease) ಗುರುತಿಸಿದೆ. ವೈಜ್ಞಾನಿಕ ವರ್ಗೀಕರಣದ ಪ್ರಕಾರ ಆರ್‌ಎನ್‌ಎ ವೈರಸ್ ಗುಂಪಿಗೆ ಸೇರಿದೆ.

ದಿನದಿಂದ ದಿನಕ್ಕೆ ಅವ್ಯಾಹತವಾಗಿ ವ್ಯಾಪಿಸುತ್ತಿರುವ ಕೊರೋನ ವೈರಸ್‌ನ ಜೀವನ ಚಕ್ರವನ್ನು ಅರ್ಥ ಮಾಡಿಕೊಳ್ಳುವುದು ವಿಜ್ಞಾನ ಲೋಕಕ್ಕೆ ಈ ಹೊತ್ತಿನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ಪ್ರಾಣಿಗಳಲ್ಲಾಗಲಿ ಅಥವಾ ಮನುಷ್ಯರಲ್ಲಾಗಲಿ ಅದರ ಪ್ರಭಾವ ಬೀರದೆ, ಇದೇ ಮೊದಲ ಬಾರಿಗೆ ನೈಸರ್ಗಿಕವಾಗಿ ಮನುಷ್ಯನ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಈ ಸೂಕ್ಷ್ಮಜೀವಿಯನ್ನು ನೋವೆಲ್ ಕೊರೋನ ವೈರಸ್ (Novel Corona Virus) ಎಂದು ಕರೆಯಲಾಗುತ್ತಿದೆ. ಮನುಷ್ಯ ತಂತ್ರಜ್ಞಾನವನ್ನು ತನ್ನ ಬೆರಳುಗಳ ತುದಿಯಲ್ಲಿ ಇಟ್ಟುಕೊಂಡಿರಬಹುದು ಆದರೆ ಸೂಕ್ಷ್ಮಜೀವಿಗಳ ಅಟ್ಟಹಾಸದ ಮುಂದೆ ಮಂಡಿಯೂರಿ ಕುಳಿತುಕೊಂಡಿದ್ದಾನೆ.

ಪರಿಸರದಲ್ಲಿ ಈ ರೋಗಕಾರಕ ಜೀವಿಗಳ ಪ್ರಭಾವ ಕಡಿಮೆ ನಗಣ್ಯವಾಗಿಸಲು ಅವುಗಳ ವಿರುದ್ಧವಾಗಿ ಉಪಯೋಗಕಾರಕ ಜೀವಿಗಳನ್ನು ಬೆಳೆಸುವ ಅನಿವಾರ್ಯತೆ ಇದೆ. ವಿಜ್ಞಾನಿಗಳು ಕೊರೋನ ಸೋಂಕನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವುದಂತೂ ನಿಜ. ಅತಿ ಶೀಘ್ರದಲ್ಲಿ ಈ ರೋಗವನ್ನು ತಡೆಗಟ್ಟಲು ಔಷಧಿ ಮತ್ತು ವ್ಯಾಕ್ಸಿನೇಷನ್ ಕಂಡು ಹಿಡಿಯಲೇಬೇಕಾದ ಅನಿವಾರ್ಯತೆ ಇದೆ, ಅದರ ಸತತ ಪ್ರಯತ್ನವೂ ಕೂಡ ದಾಪುಗಾಲು ಹಾಕುತ್ತಿದೆ.

ಕೋವಿಡ್-19 ನಿಯಂತ್ರಿಸಲು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ತೆಗೆದುಕೊಂಡಿರುವ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕಾಗಿದೆ ಮತ್ತು ಈ ಸೋಂಕನ್ನು ನಿಯಂತ್ರಿಸಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ. ಆಗಾಗ ಕೈಗಳನ್ನು ಮತ್ತು ಮುಖವನ್ನು ಸೋಪಿನಿಂದ ಚೆನ್ನಾಗಿ ತೊಳೆಯುತ್ತಿರಬೇಕು.ಕೈಗಳಿಗೆ ಶೇ.70 ಆಲ್ಕೋಹಾಲ್ ಒಳಗೊಂಡಿರುವ ಸ್ಯಾನಿಟೈಸರ್ ಬಳಸುವುದು ಉತ್ತಮ. ಯಾವುದೇ ಕಾರಣಕ್ಕೆ ಕಣ್ಣು, ಮೂಗು ಮತ್ತು ಬಾಯಿ ಜಾಗವನ್ನು ಮುಟ್ಟದೇ ಇರುವುದು ಒಳ್ಳೆಯದು. ಪ್ರಸ್ತುತ ಕೊರೋನ ಯುದ್ಧದಲ್ಲಿ ಪಾಲ್ಗೊಂಡು ಅದನ್ನು ಹೆದರಿಸುವುದು ನಮ್ಮೆಲ್ಲರ ಜವಾಬ್ದಾರಿ ಕೂಡ. ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಮಾರಕ ರೋಗಗಳು ಬಂದಲ್ಲಿ ಅವುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ಧರಾಗಬೇಕಿದೆ.

ಮನುಷ್ಯ ತನ್ನ ಉಳಿವು, ಆರೋಗ್ಯ ಮತ್ತು ಅಭಿವೃದ್ಧಿಗಾಗಿ, ತನ್ನ ಸುತ್ತಲೂ ಸದಾ ಆವರಿಸಿಕೊಂಡಿರುವ ಸೂಕ್ಷ್ಮಜೀವಿಗಳನ್ನು ಅರ್ಥೈಸಿಕೊಳ್ಳಲು, ಇದಕ್ಕೆ ಪೂರಕವಾಗಿ ಮುಂದಿನ ಯುವ ಪೀಳಿಗೆ ಸಾಕಷ್ಟು ಸಂಶೋಧನೆಗಳಲ್ಲಿ ತೊಡಿಗಿಸಿಕೊಳ್ಳುವುದು ಅತ್ಯಗತ್ಯ ಮತ್ತು ಅನಿವಾರ್ಯವು ಕೂಡ ಆಗಿದೆ?.

Writer - ಡಾ. ತಿಪ್ಪೇಸ್ವಾಮಿ ಬಸಯ್ಯ

contributor

Editor - ಡಾ. ತಿಪ್ಪೇಸ್ವಾಮಿ ಬಸಯ್ಯ

contributor

Similar News