'ಪಿಎಂ ಕೇರ್ಸ್ ಫಂಡ್‍ಗೆ 35 ಸಾವಿರ ರೂ. ಪಾವತಿಸಿ, ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿ'

Update: 2020-04-18 04:29 GMT

ರಾಂಚಿ : ಕೋವಿಡ್-19 ವಿರುದ್ಧದ ಸಮರಕ್ಕಾಗಿ ಪಿಎಂ ಕೇರ್ಸ್ ಫಂಡ್‍ಗೆ 35 ಸಾವಿರ ರೂ. ಪಾವತಿಸುವಂತೆ ಮತ್ತು ಆರೋಗ್ಯಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವಂತೆ ಷರತ್ತು ವಿಧಿಸಿ ಮಾಜಿ ಸಂಸದ ಹಾಗೂ ಇತರ ಐದು ಮಂದಿಗೆ ಜಾರ್ಖಂಡ್ ಹೈಕೋರ್ಟ್ ಜಾಮೀನು ನೀಡಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.

ಕಸ್ಟಡಿಯಿಂದ ಬಿಡುಗಡೆಯಾದ ತಕ್ಷಣ ಆರೂ ಮಂದಿ ಆರೋಗ್ಯಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಸರ್ಕಾರ ಚಾಲನೆ ನೀಡಿರುವ ಈ ಆ್ಯಪ್‍ನ ವಿಶೇಷತೆ ಎಂದರೆ ಡೌನ್‍ಲೋಡ್ ಮಾಡಿಕೊಂಡ ವ್ಯಕ್ತಿ ಕೋವಿಡ್-19 ಪಾಸಿಟಿವ್ ವ್ಯಕ್ತಿಯನ್ನು ಸಂಪರ್ಕಿಸಿದರೆ ತಕ್ಷಣ ಮಾಹಿತಿ ನೀಡುತ್ತದೆ ಹಾಗೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆಯೇ ಎಂದು ತಿಳಿಸುತ್ತದೆ.

ಇದಕ್ಕೂ ಮೊದಲು ವಾದ ಮಂಡಿಸಿದ ಆರೋಪಿಗಳ ಪರ ವಕೀಲ, ಪಿಎಂ ಕೇರ್ಸ್ ಫಂಡ್‍ಗೆ ದೇಣಿಗೆ ನೀಡುವುದೂ ಸೇರಿದಂತೆ ಯಾವುದೇ ಷರತ್ತುಗಳಿಗೆ ಬದ್ಧ ಎಂದು ಹೇಳಿದ್ದರು.

ಬಿಜೆಪಿಯ ಮಾಜಿ ಸಂಸದ ಸೋಮ್ ಮರಂಡಿ, ವಿವೇಕಾನಂದ ತಿವಾರಿ, ಅಮಿತ್ ಅಗರ್‍ವಾಲ್, ಹಿಸಾಬಿ ರಾಯ್, ಸಂಚಯ್ ಬರ್ಧನ್ ಮತ್ತು ಅನುರಾಗ್ ಪ್ರಸಾದ್ ಅವರು 2012ರಲ್ಲಿ ನಡೆಸಿದ ರೈಲು ತಡೆ ಚಳವಳಿ ಹಿನ್ನೆಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ರೈಲ್ವೆ  ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಅವರು ರೈಲ್ವೆ ಕಾಯ್ದೆ-2017ರ ಸೆಕ್ಷನ್ 174 (ಎ) ಅನ್ವಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಈ ಆದೇಶದ ರದ್ದತಿ ಕೋರಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News