ಕೋವಿಡ್-19ರಿಂದ ಚೇತರಿಸಿಕೊಂಡಿದ್ದ 85 ವರ್ಷದ ಕೇರಳದ ವ್ಯಕ್ತಿ ಮೃತ

Update: 2020-04-18 07:32 GMT

ಮಲ್ಲಪುರಂ, ಎ.18: ಕೋವಿಡ್-19ರಿಂದ ಗುಣಮುಖರಾಗಿದ್ದಾರೆ ಎಂದು ಘೋಷಿಸಲ್ಪಟ್ಟಿದ್ದ ಹಾಗೂ ಕಿಡ್ನಿ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ 85 ವರ್ಷದ ವ್ಯಕ್ತಿ ಶನಿವಾರ ಬೆಳಗ್ಗೆ ಮಲಪುರಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

 ಮೃತ ರೋಗಿಯಿಂದ ಎಪ್ರಿಲ್ 7, 10 ಹಾಗೂ 13ರಂದು ಪಡೆದಿರುವ ಸ್ಯಾಂಪಲ್‌ಗಳು ನೆಗೆಟಿವ್ ಆಗಿದ್ದರಿಂದ ಕೋವಿಡ್ ವೈರಲ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಘೋಷಿಸಲಾಗಿತ್ತು ಎಂದು ಮಲ್ಲಪುರಂ ಜಿಲ್ಲಾ ಕಲೆಕ್ಟರ್ ಜಾಫರ್ ಮಲಿಕ್ ಪಿಟಿಐಗೆ ತಿಳಿಸಿದ್ದಾರೆ.

ಮೃತ ವ್ಯಕ್ತಿ ಐಸಿಯುನಲ್ಲಿದ್ದರು. ಮೂತ್ರಪಿಂಡ ಹಾಗೂ ಹೃದಯ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ದಿನಗಳಿಂದ ಅವರ ಪರಿಸ್ಥಿತಿ ಹದಗೆಟ್ಟಿತ್ತು.ವ್ಯಕ್ತಿಯ ವಯಸ್ಸು ಹಾಗೂ ಮೊದಲಿನ ಕಾಯಿಲೆಗಳ ಕಾರಣಕ್ಕೆ ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದ್ದರು. ಆದರೆ ಅವರು ಶನಿವಾರ ಬೆಳಗ್ಗೆ 4 ಗಂಟೆಗೆ ಮೃತಪಟ್ಟಿದ್ದಾರೆ. ಇದು ಕೋವಿಡ್ ಸಂಬಂಧಿ ಸಾವಲ್ಲ ಎಂದು ಸ್ಪಷ್ಟಪಡಿಸುತ್ತೇವೆ.ಶಿಷ್ಟಾಚಾರದ ಪ್ರಕಾರ ಎರಡು ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ ಎಂದು ಸರಕಾರಿ ಮೆಡಿಕಲ್ ಕಾಲೇಜಿನ ಮೇಲ್ವಿಚಾರಕ ಟಿಕೆವಿ ನಂದಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News