ಧರ್ಮದ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ ವಿಷಯದಲ್ಲಿ ಸಿಎಂ ಅವರ ನಿಲುವೇನು....?

Update: 2020-04-24 17:53 GMT

ಮಾನ್ಯರೇ,

‘ಏಯ್ ಇದು ನನ್ನ ಕ್ಲಿನಿಕ್,ನನ್ನ ಆಸ್ಪತ್ರೆ,ನನ್ನ ಲ್ಯಾಬ್.. ಇಲ್ಲಿ ಯಾರಿಗೆ ಚಿಕಿತ್ಸೆ ನೀಡಬೇಕು.. ನೀಡಬಾರದು ಎಂಬುವುದನ್ನು ನಾನು ನಿರ್ಧರಿಸುತ್ತೇನೆ’ ಎಂದು ಹೇಳುವಂತಿಲ್ಲ. ರೋಗಿ ಯಾರೇ ಆಗಿರಲಿ, ಎಂತಹದ್ದೇ ಕಂಡೀಶನ್‌ನಲ್ಲಿರಲಿ ಆತನ ಕಾಯಿಲೆಗೆ ಚಿಕಿತ್ಸೆ, ಪರೀಕ್ಷೆ ಮಾಡುವಂತಹ ಸೌಲಭ್ಯವಿದ್ದರೆ ಆತನಿಗೆ ಅದನ್ನು ನೀನು ಒದಗಿಸಲೇಬೇಕು... ನಿನಗದು ಕಡ್ಡಾಯ. ನಿನ್ನ ಪ್ರಮಾಣ ಪತ್ರ ನಿನಗಾಗಿ ಇರುವುದಲ್ಲ.. ಅದು ರೋಗಿಗಳ ಚಿಕಿತ್ಸೆಗಾಗಿ ಎಂಬ ಪ್ರಜ್ಞೆ ನಿನಗಿರಲೇಬೇಕು. ಇಲ್ಲದಿದ್ದರೆ ನಿನ್ನ ಪ್ರಮಾಣ ಪತ್ರವನ್ನು,ನಿನ್ನ ಸಂಸ್ಥೆಯ ಪರವಾನಿಗೆಯನ್ನು ರದ್ದು ಮಾಡಲು ಅಥವಾ ಮುಟ್ಟುಗೋಲು ಹಾಕುವ ಹಕ್ಕು ಸಂಬಂಧಪಟ್ಟವರಿಗೆ ಇದ್ದೇ ಇದೆ.

 ಮೊನ್ನೆ ಬೆಂಗಳೂರಿನ ನಾಗರಬಾವಿಯ ಗಾಯತ್ರಿ ಡಯೋಗ್ನೋಸ್ಟಿಕ್ಸ್ ಎಂಡ್ ಹೆಲ್ತ್ ಸೆಂಟರ್‌ನಲ್ಲಿ ಅದರ ಮಾಲಕ ಡಾ.ಸತೀಶ್ ಎಂಬಾತನ ಆಜ್ಞೆಯ ಮೇರೆಗೆ ಅಲ್ಲಿನ ರಿಸೆಪ್ಷನಿಸ್ಟ್ ಇಪ್ಪತ್ತು ವರ್ಷ ಪ್ರಾಯದ ಮುಸ್ಲಿಮ್‌ಯುವತಿಯೊಬ್ಬಳಿಗೆ ಆಕೆಯ ಧರ್ಮದ ಕಾರಣಕ್ಕಾಗಿ ಸ್ಕ್ಯಾನಿಂಗ್‌ಮಾಡಿಸಲು ನಿರಾಕರಿಸಿದ್ದಾಳೆ. ಅದನ್ನು ಆ ಸಂಸ್ಥೆಗೆ ಸ್ಕ್ಯಾನಿಂಗ್‌ಗೆ ರೋಗಿಯನ್ನು ರೆಫರ್ ಮಾಡಿದ ವೈದ್ಯರು ಪ್ರಶ್ನಿಸಿದ್ದಕ್ಕೆ ಸರ್,ನಮ್ಮ ಮ್ಯಾನೇಜ್‌ಮೆಂಟ್ ನನಗೆ ನೀಡಿದ ನಿರ್ದೇಶನವನ್ನು ನಾನು ಫಾಲೋ ಮಾಡಿದ್ದೇನೆ ಎಂದುತ್ತರಿಸಿದ್ದಾಳೆ.

ಅದರ ಮಾಲಕ ಡಾ.ಸತೀಶ್ ಎಂಬಾತ ಹೊರಡಿಸಿದ ಆದೇಶವು ಮೆಡಿಕಲ್ ಎಥಿಕ್ಸ್‌ಗೆ ವಿರುದ್ಧ. ಆದುದರಿಂದ ಸಂಬಂಧಪಟ್ಟ ಇಲಾಖೆ ಆತನ ವೈದ್ಯಕೀಯ ಪದವಿಯನ್ನು ಮುಟ್ಟುಗೋಲು ಹಾಕಲೇಬೇಕು ಮತ್ತು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರಾಧಿಕಾರವು ಬೆಂಗಳೂರು ನಾಗರಬಾವಿಯಲ್ಲಿರುವ ಗಾಯತ್ರಿ ಡಯೋಗ್ನೋಸ್ಟಿಕ್ಸ್ ಆ್ಯಂಡ್ ಹೆಲ್ತ್ ಸೆಂಟರ್‌ನ ಪರವಾನಿಗೆಯನ್ನು ರದ್ದು ಪಡಿಸಲೇಬೇಕು.

 ಫ್ಯಾಶಿಸಂ ಮೊದಲು ಅಧಿಕಾರಸ್ಥರಲ್ಲಿ ಹಬ್ಬಿ ನಂತರ ಜನತೆಯಲ್ಲಿ ಹಬ್ಬುತ್ತದಂತೆ. ಕರ್ನಾಟಕದಲ್ಲಿ ಕೆಲ ಅಧಿಕಾರಸ್ಥರಲ್ಲಿ ಫ್ಯಾಶಿಸಂನ ವಿಷ ಹಬ್ಬಿ ಇದೀಗ ಅದು ಜನರ ಮಧ್ಯೆಯೂ ವೇಗವಾಗಿ ಹರಡುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಇದು ದೇಶವನ್ನು ಜಾತಿ-ಧರ್ಮದ ಹೆಸರಲ್ಲಿ ವಿಭಜಿಸುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ದೇಶ ಇಂದು ಭೌಗೋಳಿಕವಾಗಿ ಒಂದೇ ಆಗಿರಬಹುದು. ಆದರೆ ಮಾನಸಿಕವಾಗಿ ಈಗ ದೇಶ ಧರ್ಮದ ಹೆಸರಲ್ಲಿ ವಿಭಜನೆಯಾಗುತ್ತಿದೆ. ಇದರ ಪರಿಣಾಮ ಅತ್ಯಂತ ಅಪಾಯಕಾರಿ ಎಂಬುದನ್ನು ಆಳುವ ವರ್ಗ ಅರಿತು ದೇಶ ವಿಭಜನೆಯನ್ನು ತಡೆಗಟ್ಟಲೇಬೇಕು. ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಅವರು ಇತ್ತೀಚೆಗೆ ಜಾತಿ,ಮತ, ಧರ್ಮದ ಹೆಸರಲ್ಲಿ ಒಡೆಯುವುದನ್ನು ಸಹಿಸಲಾಗದು ಎಂದಿದ್ದಾರೆ. ಅದು ಕೇವಲ ಹೇಳಿಕೆಗಳಿಗೆ ಸೀಮಿತವಾಗಬಾರದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಶೀಘ್ರವಾಗಿ ಈ ಪ್ರಕರಣದತ್ತ ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ತಮ್ಮ ಹೇಳಿಕೆಯನ್ನು ನ್ಯಾಯೀಕರಿಸಬೇಕು.

Writer - ಇಸ್ಮತ್, ಪಜೀರ್

contributor

Editor - ಇಸ್ಮತ್, ಪಜೀರ್

contributor

Similar News