ಶಾನ್ ಮಾರ್ಷ್‌ರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಜೀವನ ಅಂತ್ಯವಾಗಿದೆ: ಆಸ್ಟ್ರೇಲಿಯ ಆಯ್ಕೆಗಾರ

Update: 2020-04-30 18:09 GMT

ಮೆಲ್ಬೋರ್ನ್, ಎ.30: ಶಾನ್ ಮಾರ್ಷ್ ಅವರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕು ಬಹುತೇಕ ಅಂತ್ಯವಾಗಿದೆ ಎಂದು ಹೇಳಿದ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಆಯ್ಕೆಗಾರ ಟ್ರೆವರ್ ಹಾನ್ಸ್ ಅವರು ಉಸ್ಮಾನ್ ಖ್ವಾಜಾ ಅದೃಷ್ಟಶಾಲಿ ಆಟಗಾರನಲ್ಲ ಎಂಬ ಹಣೆಪಟ್ಟಿ ಕಟ್ಟಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯ(ಸಿಎ)ಗುರುವಾರ ಬಿಡುಗಡೆ ಮಾಡಿರುವ 20 ಆಟಗಾರರ ಪಟ್ಟಿಯಲ್ಲಿ ಖ್ವಾಜಾ ಹಾಗೂ ಮಾರ್ಷ್ ರಾಷ್ಟ್ರೀಯ ಗುತ್ತಿಗೆಯಿಂದ ಹೊರಗುಳಿದಿದ್ದಾರೆ. 36ರ ಹರೆಯದ ಮಾರ್ಷ್ 2019ರಲ್ಲಿ ಆಸೀಸ್ ಪರ ಕೊನೆಯ ಪಂದ್ಯವನ್ನಾಡಿದ್ದು, ತನ್ನ ದೇಶದ ಪರ 38 ಟೆಸ್ಟ್, 73 ಏಕದಿನ ಹಾಗೂ 15 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಆಸ್ಟ್ರೇಲಿಯದ ಪರ ಮಾರ್ಷ್ ಅವರ ಆಡುವ ಅವಕಾಶ ಬಹುಶಃಮುಗಿದುಹೋಗಿದೆ ಎಂದು ಹಾನ್ಸ್ ಅಭಿಪ್ರಾಯಪಟ್ಟರು.

 ‘‘ಶಾನ್‌ಗೆ ಈಗ 36 ವರ್ಷ. ಅವರಿಗೆ ಆಸ್ಟ್ರೇಲಿಯವನ್ನು ಮತ್ತೊಮ್ಮೆ ಪ್ರತಿನಿಧಿಸುವ ಅವಕಾಶ ಕಡಿಮೆಯಾಗಿದೆ. ಕಳೆದ 12 ತಿಂಗಳುಗಳಿಂದ ನಾವು ಅವರೊಂದಿಗೆ ನಿರಂತರವಾಗಿ ಮಾತನಾಡಿದ್ದೇವೆ. ಅವರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಅವರೋರ್ವ ಅಮೋಘ ಆಟಗಾರ. ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅವರು ಆಸ್ಟ್ರೇಲಿಯದ ಪರ ಅತ್ಯುತ್ತಮ ಇನಿಂಗ್ಸ್ ಆಡಿದ್ದಾರೆ. ಅವರಿಂದ ನಾವೆಲ್ಲರೂ ವಂಚಿತರಾಗುತ್ತಿದ್ದೇವೆ’’ಎಂದು ಹಾನ್ಸ್ ಹೇಳಿದ್ದಾರೆ.

ಖ್ವಾಜಾ ಕುರಿತು ಮಾತನಾಡಿದ ಹಾನ್ಸ್, ‘‘ಎಡಗೈ ದಾಂಡಿಗ ಖ್ವಾಜಾರನ್ನು ಕೇಂದ್ರೀಯ ಗುತ್ತಿಗೆಯಿಂದ ಕೈಬಿಟ್ಟಿರುವುದು ಕಠಿಣ ನಿರ್ಧಾರವಾಗಿತ್ತು. ಕಳೆದ ವರ್ಷ ಆ್ಯಶಸ್ ಸರಣಿಯ ವೇಳೆ ತಂಡದಿಂದ ಹೊರಗುಳಿದ ಬಳಿಕ 33ರ ಹರೆಯದ ಖ್ವಾಜಾ ಆಸ್ಟ್ರೇಲಿಯದ ಪರ ಆಡಿಲ್ಲ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News