ಆ್ಯಂಬುಲೆನ್ಸ್ ದೊರೆಯದೆ ಗರ್ಭಿಣಿಯ ಮೃತದೇಹವನ್ನು ಸ್ಟ್ರೆಚರ್ ನಲ್ಲೇ ಮನೆಗೆ ಸಾಗಿಸಿದ ಕುಟುಂಬ

Update: 2020-05-04 08:57 GMT

ಅನಂತ್‍ ನಾಗ್: ಆಸ್ಪತ್ರೆಯೊಂದು ಗರ್ಭಿಣಿಯೊಬ್ಬರ ಮೃತದೇಹವನ್ನು ಮನೆಗೆ ಸಾಗಿಸಲು ಆ್ಯಂಬುಲೆನ್ಸ್ ಒದಗಿಸಲು ನಿರಾಕರಿಸಿದ ಕಾರಣ ಆಕೆಯ ಕುಟುಂಬ ಮೃತದೇಹವನ್ನು ಸ್ಟ್ರೆಚರಿನಲ್ಲಿ ದೂಡಿ ಮನೆಗೆ ಸಾಗಿಸಿದ ವೀಡಿಯೋವೊಂದು ವೈರಲ್ ಆಗಿದೆ. ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ಥಳೀಯ ಜನರು ಪ್ರತಿಭಟನೆಯ್ನೂ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಜಮ್ಮು ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಕಾರಣದಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆಕೆಯ ಕುಟುಂಬ ಆರೋಪಿಸಿದೆ. ಈ ಕುರಿತಂತೆ ಅಧಿಕೃತ ತನಿಖೆಗೆ ಆದೇಶಿಸಲಾಗಿದ್ದು, ಈಗಾಗಲೇ ಒಬ್ಬ ವೈದ್ಯ ಹಾಗೂ ನರ್ಸ್ ಅನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಬಟ್ಟೆಯೊಂದರಲ್ಲಿ ಸುತ್ತಲಾಗಿದ್ದ ಮಹಿಳೆಯ ಮೃತದೇಹವನ್ನು ಕುಟುಂಬದ ನಾಲ್ಕರಿಂದ  ಐದು ಸದಸ್ಯರು ನಿರ್ಜನ ರಸ್ತೆಯಲ್ಲಿ ಸ್ಟ್ರೆಚರಿನಲ್ಲಿ ಸಾಗಿಸುವುದು ಕಾಣಿಸುತ್ತದೆ.

ಉಪ ಜಿಲ್ಲಾ ಆಸ್ಪತ್ರೆಯಿಂದ ಈ ಗರ್ಭಿಣಿಯನ್ನು ರವಿವಾರ ಬೆಳಗ್ಗೆ ಅನಂತ್‍ ನಾಗ್‍ ನ ಮೆಟರ್ನಿಟಿ ಆ್ಯಂಡ್ ಚೈಲ್ಡ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡೂ ಆಸ್ಪತ್ರೆಗಳಲ್ಲಿ ಆಕೆಗೆ ಚಿಕಿತ್ಸೆ ನೀಡಲು ವಿಳಂಬಿಸಲಾಗಿತ್ತು ಎಂದು ಕುಟುಂಬ ಆರೋಪಿಸುತ್ತಿದೆ. ಎರಡನೇ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಮಹಿಳೆಯ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಿದಲ್ಲಿ ದಫನ ಕಾರ್ಯ ವಿಳಂಬವಾಗಬಹುದೆಂಬ ಭಯದಿಂದ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸದೆ ಕುಟುಂಬ ಆಕೆಯ ಮೃತದೇಹವಹ್ನು ಆಸ್ಪತ್ರೆಯಿಂದ ಕೊಂಡೊಯ್ದಿತ್ತು ಎಂದು  ಅನಂತ್‍ನಾಗ್ ಜಿಲ್ಲಾಧಿಕಾರಿ ಬಶೀರ್ ಅಹ್ಮದ್ ದರ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News