ಮುಂಬೈ ಆಸ್ಪತ್ರೆಯಲ್ಲಿ ಕೊರೋನ ರೋಗಿಯ ಮೇಲೆ ವೈದ್ಯನಿಂದ ಲೈಂಗಿಕ ದೌರ್ಜನ್ಯ: ಆರೋಪ
ಮುಂಬೈ: ಮುಂಬೈಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮೇ 1ರಂದು 44 ವರ್ಷದ ಪುರುಷ ಕೋವಿಡ್-19 ರೋಗಿಯೊಬ್ಬರ ಮೇಲೆ ಅದೇ ಆಸ್ಪತ್ರೆಗೆ ಹೊಸದಾಗಿ ನೇಮಕಗೊಂಡಿದ್ದ ವೈದ್ಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಆಸ್ಪತ್ರೆಯ ಆಡಳಿತ ನೀಡಿದ ದೂರಿನಂತೆ ಆರೋಪಿ ವೈದ್ಯನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಆರೋಪಿ ವೈದ್ಯನಿಗೂ ಕೋವಿಡ್-19 ಸೋಂಕು ತಗಲಿರುವ ಸಾಧ್ಯತೆಯಿರುವುದರಿಂದ ಪೊಲೀಸರು ಆತನನ್ನು ಬಂಧಿಸುವ ಯಾ ಪ್ರಶ್ನಿಸುವ ಗೋಜಿಗೆ ಹೋಗದೆ ಆತನನ್ನು ಥಾಣೆಯಲ್ಲಿರುವ ಆತನ ಅಪಾರ್ಟ್‍ಮೆಂಟ್‍ನಲ್ಲಿಯೇ ಗೃಹ ಕ್ವಾರಂಟೈನಿನಲ್ಲಿರಿಸಿದ್ದಾರೆ.
ಆತನ ನೇಮಕಾತಿ ಸಂದರ್ಶನ ಎಪ್ರಿಲ್ 28 ಹಾಗೂ 29ರಂದು ನಡೆದಿದ್ದು ಎಪ್ರಿಲ್ 30ರಂದು ಆತ ಕರ್ತವ್ಯಕ್ಕೆ ಹಾಜರಾದ ಮರುದಿನವೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬೆಳಗ್ಗೆ ಸುಮಾರು 9.30ಕ್ಕೆ ಆತ ರೋಗಿಯಿದ್ದ ಐಸಿಯು ಕೊಠಡಿಗೆ ಪ್ರವೇಶಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದ ಎಂದು ರೋಗಿ ಆರೋಪಿಸಿದ್ದಾರೆ. ರೋಗಿ ಬೊಬ್ಬಿಡುತ್ತಿದ್ದಂತೆಯೇ ಇತರ ಸಿಬ್ಬಂದಿ ಅಲ್ಲಿಗೆ ಧಾವಿಸಿ ಬಂದಿದ್ದರು.
ಕೋವಿಡ್-19 ಸಮಸ್ಯೆಯಿಂದಾಗಿ 60 ವರ್ಷದ ಮೇಲ್ಪಟ್ಟ ವೈದ್ಯರಿಗೆ ಮನೆಯಲ್ಲಿಯೇ ಇರಲು ತಿಳಿಸಿದ್ದರಿಂದ ಹೊಸ ವೈದ್ಯರ ನೇಮಕಾತಿಗೆ ಆಸ್ಪತ್ರೆ ಮುಂದಾಗಿತ್ತು. ಈ ಕಾರಣದಿಂದ ಎಂಡಿ ಪದವಿ ಹೊಂದಿದ್ದ ಈ ವೈದ್ಯನ ನೇಮಕಾತಿಯೂ ನಡೆದಿತ್ತು.