×
Ad

ಮುಂಬೈಯ ಆಸ್ಪತ್ರೆಯಲ್ಲಿ ಕಳೇಬರಗಳ ಪಕ್ಕದಲ್ಲಿಯೇ ಮಲಗಿರುವ ಕೋವಿಡ್-19 ರೋಗಿಗಳು!

Update: 2020-05-07 15:00 IST

ಮುಂಬೈ, ಮೇ 7: ಮುಂಬೈನ ಸರಕಾರಿ ಆಸ್ಪತ್ರೆಯಲ್ಲಿ ಕಪ್ಪು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸುತ್ತಿಟ್ಟ ಶವಗಳ ಸಮೀಪವೇ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣ ವೈರಲ್ ಆಗಿದೆ.

 ನಗರದ ಮಹಾನಗರ ಪಾಲಿಕೆಯಿಂದ ನಡೆಸಲ್ಪಡುತ್ತಿರುವ ಸಯನ್ ಆಸ್ಪತ್ರೆಯಲ್ಲಿ ಈ ಭಯಾನಕ ದ್ಯಶ್ಯ ಕಂಡುಬಂದಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಾರ್ಡ್‌ನಲ್ಲಿ ಕನಿಷ್ಠ ಏಳು ಮೃತದೇಹಗಳನ್ನು ಇಡಲಾಗಿದೆ. ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಇಲ್ಲಿಡಲಾಗಿದೆ ಎನ್ನಲಾಗಿದೆ.

ಮಹಾರಾಷ್ಟ್ರ ವಿಪಕ್ಷ ಬಿಜೆಪಿಯ ಶಾಸಕ ನಿತೇಶ್ ರಾಣೆ ಬುಧವಾರ ವೀಡಿಯೊವನ್ನು ಪೋಸ್ಟ್ ಮಾಡಿದ್ದು, "ಸಯನ್ ಆಸ್ಪತ್ರೆಯಲ್ಲಿ ರೋಗಿಗಳು ಮೃತದೇಹಗಳ ಬಳಿಯೇ ಮಲಗಿದ್ದಾರೆ...ಇದು ವಿಪರೀತ..ಇದು ಯಾವ ರೀತಿಯ ಆಡಳಿತ! ಇದು ನಾಚಿಕೆಗೇಡು" ಎಂದು ಟ್ವೀಟ್ ಮಾಡಿದ್ದಾರೆ.

ಸಯನ್ ಆಸ್ಪತ್ರೆಯ ಡೀನ್ ಪ್ರಮೋದ್ ಇಂಗಳೆ ಈ ಕುರಿತು ಪ್ರತಿಕ್ರಿಯಿಸುತ್ತಾ, "ಕೋವಿಡ್‌ನಿಂದ ಮೃತಪಟ್ಟವರ ಸಂಬಂಧಿಕರು ಶವಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ. ಶವಗಳನ್ನು ಗಮನಿಸದೆ ಅಲ್ಲಿಡಲು ಅದೂ ಕಾರಣವಾಗಿದೆ. ಇದೀಗ ಶವಗಳನ್ನು ಅಲ್ಲಿಂದ ತೆಗೆಯಲಾಗಿದೆ. ಈ ವಿಚಾರದ ಬಗ್ಗೆ ತನಿಖೆ ನಡೆಸುತ್ತೇವೆ'' ಎಂದು ಪಿಟಿಐಗೆ ತಿಳಿಸಿದರು.

ಶವಗಳನ್ನು ಶವಾಗಾರಕ್ಕೆ ಏಕೆ ಸಾಗಿಸಲಾಗಿಲ್ಲ ಎಂದು ಡಾ.ಪ್ರಮೋದ್‌ ರಲ್ಲಿ ಕೇಳಿದಾಗ, "ಆಸ್ಪತ್ರೆಯ ಶವಾಗಾರದಲ್ಲಿ 15 ಸ್ಲಾಟ್‌ಗಳಿದ್ದು ಈಗಾಗಲೇ 11 ಸ್ಲಾಟ್ ಭರ್ತಿಯಾಗಿದೆ. ನಾವು ಎಲ್ಲ ಮೃತದೇಹವನ್ನು ಅಲ್ಲಿಗೆ ಸಾಗಿಸಿದರೆ ಕೋವಿಡ್‌ನಿಂದ ಮೃತಪಡದ ಶವಗಳಿಗೆ ಇದರಿಂದ ಸಮಸ್ಯೆಯಾಗುತ್ತದೆ'' ಎಂದರು.

ಒಮ್ಮೆ ಶವವನ್ನು ಚೀಲದೊಳಿಗೆ ಪ್ಯಾಕ್ ಮಾಡಿದ ಬಳಿಕ ಸೋಂಕು ಹರಡುವ ಸಾಧ್ಯತೆಯಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸ್ಪಷ್ಟೀಕರಣವು ಶವಗಳ ಪಕ್ಕದಲ್ಲಿ ಮಲಗಿದ್ದ ರೋಗಿಗಳ ಭಯಾನಕತೆಯನ್ನು ಸ್ವಲ್ಪ ಕಡಿಮೆ ಮಾಡಿದೆ.

ದೇಶದಲ್ಲಿ ಅದರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನ ವೈರಸ್ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿದೆ. ಈಗಾಗಲೆ 16,800 ಪ್ರಕರಣಗಳು ದಾಖಲಾಗಿದ್ದು, ಮುಂಬೈಯೊಂದರಲ್ಲಿ 10,714 ಸೋಂಕಿತರಿದ್ದಾರೆ. 400ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News