ಸರಕಾರ ರೈತರ ಅಗ್ರಿಗೋಲ್ಡ್‌ಲೋನ್ ಮುಂದುವರಿಸಲಿ

Update: 2020-05-07 17:29 GMT

ಮಾನ್ಯ ಮುಖ್ಯಮಂತ್ರಿಗಳೇ,

ರಾಜ್ಯದ ರೈತರು ಒಂದೆಡೆ ಬರ, ಮತ್ತೊಂದೆಡೆ ಪ್ರವಾಹ ಹಾಗೂ ಈಗ ‘ಲಾಕ್‌ಡೌನ್’ನಿಂದ ಆರ್ಥಿಕವಾಗಿ ಕಂಗಾಲಾಗಿದ್ದಾರೆ ಎಂಬು ದನ್ನು ರೈತ ಹೋರಾಟಗಾರರಾದ ತಾವು ಬಲ್ಲಿರಿ. ಈ ನಡುವೆ ಈಗ ತಾನೇ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಕೃಷಿಕರು ಕೃಷಿ ಚಟುವಟಿಕೆಗಾಗಿ ತಮ್ಮಲ್ಲಿದ್ದ ಒಂದಷ್ಟು ಒಡವೆಗಳನ್ನು ಬ್ಯಾಂಕ್‌ಗಳಲ್ಲಿ ಇಟ್ಟು ಸರಕಾರ ನೀಡಿದ್ದ ಅಗ್ರಿ ಗೋಲ್ಡ್ ಲೋನ್ ಅಡಿ ಶೇ.4 ಬಡ್ಡಿ ದರದಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದರು.

ಆದರೆ ತಮ್ಮ ಸರಕಾರ ಈ ಅಗ್ರಿಗೋಲ್ಡ್ ಯೋಜನೆಯನ್ನು ರದ್ದುಪಡಿಸಿರುವುದರಿಂದಾಗಿ ಈಗ ವಾರ್ಷಿಕ ಶೇ.10.45 ದರದಲ್ಲಿ ಚಿನ್ನ ಅಡವಿಡಬೇಕಿದೆ. ಈಗಾಗಲೇ ರಾಜ್ಯಾದ್ಯಂತ ವಿವಿಧ ಬ್ಯಾಂಕ್‌ಗಳಲ್ಲಿ ಅಗ್ರಿಗೋಲ್ಡ್ ಯೋಜನೆಯಡಿ ಚಿನ್ನ ಅಡವಿಟ್ಟಿರುವ ರೈತರಿಗೆ ಶೇ.10.45 ದರದಲ್ಲಿ ಬಡ್ಡಿ ವಿಧಿಸಿರುವುದರಿಂದ ಅನೇಕ ರೈತರಿಗೆ ಅಷ್ಡು ಬಡ್ಡಿ ಪಾವತಿ ಮಾಡಿ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.
ರೈತ ಪರವಾಗಿ ಯೋಚಿಸುವ ತಾವು, ಹಿಂದೆ ಇದ್ದ ಅಗ್ರಿಗೋಲ್ಡ್ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು. ಇದು ಸ್ವಾವಲಂಬಿ ರೈತರಿಗೆ ಒಳ್ಳೆಯ ಮಾರ್ಗವಾಗಿದೆ. ಈಗಾಗಲೇ ಶೇ.10.45 ಇರುವ ಬಡ್ಡಿದರವನ್ನು ದಯಮಾಡಿ ರದ್ದುಗೊಳಿಸಿ ಹಿಂದಿನ ಶೇ.4 ದರದ ಬಡ್ಡಿಯಲ್ಲಿ ರೈತರಿಂದ ಬಡ್ಡಿ ವಸೂಲಿ ಮಾಡಲು ಆದೇಶ ನೀಡಿದರೆ ಲಕ್ಷಾಂತರ ರೈತರ ಕೋಟ್ಯಂತರ ರೂ.ಯ ಅವರ ಕನಸಿನ ಒಡವೆಯನ್ನು ಬಿಡಿಸಿಕೊಳ್ಳಲು ಸಹಾಯವಾಗುತ್ತದೆ. ಅನೇಕರು ತಮ್ಮ ಕೃಷಿ ಸಾಲಕ್ಕಾಗಿ ತಮ್ಮ ತಾಯಿಯ, ಸೋದರಿಯ, ಮಡದಿಯ ತಾಳಿ, ಒಡವೆಗಳನ್ನು ಅಡಮಾನ ಮಾಡಿರುತ್ತಾರೆ. ಅವರ ನೆರವಿಗೆ ನಿಲ್ಲಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ. ಈಗಾಗಲೇ ಆಂಧ್ರಪ್ರದೇಶ ಸರಕಾರ ರೈತರ ಚಿನ್ನದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿರುವುದಾಗಿ ತಿಳಿದು ಬಂದಿದೆ.
 
   ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ, ರೈತರಿಗೆ ನರೇಗಾ ಯೋಜನೆಯಲ್ಲಿನ ಕೂಲಿಯನ್ನೂ ಹೆಚ್ಚು ಮಾಡಿದೆ, ಈಗ ರೈತರ ಹಿತಕ್ಕಾಗಿ ಕೃಷಿ ಚಟುವಟಿಕೆ ನಡೆಸುವುದಕ್ಕೂ ಲಾಕ್‌ಡೌನ್ ಸಡಿಲಗೊಳಿಸಿದೆ. ಇದೆಲ್ಲವೂ ರಾಜ್ಯ ಸರಕಾರದ ರೈತಸ್ನೇಹಿ ನಡೆಗಳಾಗಿವೆ ಎಂಬುದನ್ನು ನೆನೆಯುತ್ತಲೇ ಬ್ಯಾಂಕುಗಳಲ್ಲಿ ರೈತರ ಚಿನ್ನದ ಮೇಲಿನ ಅಧಿಕ ಬಡ್ಡಿದರವನ್ನು ರದ್ದುಗೊಳಿಸಿ ಹಿಂದಿನ ಪದ್ಧತಿಯಂತೆ ಶೇ.4 ಬಡ್ಡಿದರದಲ್ಲಿ ಅಗ್ರಿಗೋಲ್ಡ್ ಯೋಜನೆಯನ್ನು ಮುಂದುವರಿಸಲು ಮನವಿ ಮಾಡುತ್ತೇವೆ. 

Writer - ಡಾ.ಚಮರಂ, ಮೈಸೂರು

contributor

Editor - ಡಾ.ಚಮರಂ, ಮೈಸೂರು

contributor

Similar News