ಅಡ್ವಾಣಿ ಮತ್ತಿತರರ ವಿಚಾರಣೆ ಮುಗಿಸಿ ಆಗಸ್ಟ್ 31ರೊಳಗೆ ತೀರ್ಪು ನೀಡಲು ಸುಪ್ರೀಂ ಆದೇಶ

Update: 2020-05-08 13:56 GMT

ಹೊಸದಿಲ್ಲಿ: ಬಾಬರಿ ಮಸೀದಿ ಧ್ವಂಸ ಘಟನೆ ಕುರಿತಂತೆ ಹಿರಿಯ ಬಿಜೆಪಿ ನಾಯಕರುಗಳಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಮತ್ತಿತರರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಮುಗಿಸಿ  ಅಂತಿಮ ತೀರ್ಪನ್ನು ಆಗಸ್ಟ್ 31ರೊಳಗಾಗಿ ನೀಡುವಂತೆ  ಸುಪ್ರೀಂ ಕೋರ್ಟ್ ಇಂದು ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಆದೇಶಿಸಿದೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ಈ ಕುರಿತಂತೆ ನೀಡಿದ್ದ ಆದೇಶದಲ್ಲಿ ಒಂಬತ್ತು ತಿಂಗಳೊಳಗಾಗಿ, ಅಂದರೆ ಎಪ್ರಿಲ್ ಅಂತ್ಯದೊಳಗಾಗಿ ವಿಚಾರಣೆ ನಡೆಸಿ ತೀರ್ಪು ನೀಡುವಂತೆ ಹೇಳಿತ್ತು. ಇದೀಗ ಆ ಗಡುವು ಇಂದಿನ ಆದೇಶದೊಂದಿಗೆ ವಿಸ್ತರಣೆಗೊಂಡಿದೆ.

ಕೊರೋನವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಲಾಕ್ ಡೌನ್  ಕಾರಣ ನೀಡಿ ಪ್ರಕರಣದ ವಿಚಾರಣೆಗೆ ಹೆಚ್ಚಿನ ಸಮಯಾವಕಾಶ ಕೋರಿ ಸಿಬಿಐ ನ್ಯಾಯಾಧೀಶರು ಸುಪ್ರೀಂ ಕೋರ್ಟಿಗೆ  ಪತ್ರ ಬರೆದಿದ್ದರು.

ವೀಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ ಬಳಸಿ ವಿಚಾರಣೆ ನಡೆಸಿ ಎಂದು ಸಿಬಿಐ ನ್ಯಾಯಾಲಯಕ್ಕೆ ಹೇಳಿರುವ ಸುಪ್ರೀಂ ಕೋರ್ಟ್, ಆಗಸ್ಟ್ ತಿಂಗಳ ಗಡುವನ್ನು ಮೀರುವಂತಿಲ್ಲ ಎಂದು ತಾಕೀತು ಮಾಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಮೇಲಿನ ಮೂವರು ಬಿಜೆಪಿ ನಾಯಕರನ್ನು ಹೊರತುಪಡಿಸಿ ಬಿಜೆಪಿಯ ವಿನಯ್ ಕಟಿಯಾರ್ ಹಾಗೂ ಸಾಧ್ವಿ ರೀತಾಂಬರ ಅವರೂ ಪ್ರಕರಣ ಎದುರಿಸುತ್ತಿದ್ದಾರೆ. ಇತರ ಆರೋಪಿಗಳಾದ ಗಿರಿರಾಜ್ ಕಿಶೋರ್, ವಿಹಿಂಪ ನಾಯಕ ಅಶೋಕ್ ಸಿಂಘಾಲ್ ಹಾಗೂ ವಿಷ್ಣು ಹರಿ ದಾಲ್ಮಿಯಾ ಅವರು ವಿಚಾರಣೆ  ಅವಧಿಯಲ್ಲಿ ನಿಧನರಾಗಿದ್ದರು.

ಎಪ್ರಿಲ್ 2017ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಮುಗಿಸಲು ಎರಡು ವರ್ಷಗಳ ಗಡುವು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News