×
Ad

ಟ್ರಕ್ ಹರಿದು ವಲಸಿಗ ಕಾರ್ಮಿಕ ದಂಪತಿಯ 6 ವರ್ಷದ ಪುತ್ರಿ ಮೃತ್ಯು

Update: 2020-05-20 11:54 IST

ಮೈನ್‌ಪುರಿ, ಮೇ 20: ವೇಗವಾಗಿ ಬಂದ ಟ್ರಕ್‌ವೊಂದು ವಲಸಿಗ ಕಾರ್ಮಿಕರ ಕುಟುಂಬದ ಆರರ ಬಾಲಕಿ ಮೇಲೆ ಹರಿದ ಘಟನೆಯು ಪಶ್ಚಿಮ ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಬಾಲಕಿ ಹಾಗೂ ಆಕೆಯ ಹೆತ್ತವರು ರಸ್ತೆ ಬದಿಯಲ್ಲಿ ನಿಂತುಕೊಂಡು ಸೀತಾಪುರ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗೆ ತಲುಪಲು ಸರಕಾರಿ ಬಸ್‌ಗಾಗಿ ಕಾಯುತ್ತಿದ್ದರು. ಬಾಲಕಿಯ ಹೆತ್ತವರು ಹರ್ಯಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ವಲಸಿಗ ಕುಟುಂಬ ಹರ್ಯಾಣದಲ್ಲಿ ಟ್ರಕ್ ಹತ್ತಿ ಉತ್ತರಪ್ರದೇಶದ ಹಳ್ಳಿಯತ್ತ ಪ್ರಯಾಣ ಬೆಳೆಸಿತ್ತು. ಟ್ರಕ್ ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಗೆ ಮಂಗಳವಾರ ಬೆಳಗ್ಗೆ ತಲುಪಿದ ತಕ್ಷಣ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ಟ್ರಕ್‌ನ್ನು ತಡೆದು ನಿಲ್ಲಿಸಿದರು. ಬಾಲಕಿ ಹಾಗೂ ಆಕೆಯ ಹೆತ್ತವರನ್ನು ಟ್ರಕ್‌ನಿಂದ ಕೆಳಗಿಸಿದರು. ರಸ್ತೆ ಬದಿಯಲ್ಲಿ ನಿಂತು ಸರಕಾರಿ ಬಸ್‌ಗಾಗಿ ಕಾಯುವಂತೆ ಪೊಲೀಸರು ಬಾಲಕಿಯ ಕುಟುಂಬಕ್ಕೆ ತಿಳಿಸಿದ್ದರು.

ಹತ್ತಿರದ ಕ್ವಾರಿಯಿಂದ ಕಲ್ಲನ್ನು ತುಂಬಿಸಿಕೊಂಡು ವೇಗವಾಗಿ ಬಂದ ಟ್ರಕ್ ವೊಂದು ಆರರ ಬಾಲಕಿಯ ಮೇಲೆ ಹರಿದುಹೋಗಿ ಪೊಲೀಸ್ ಬ್ಯಾರಿಕೇಡ್‌ನ್ನು ದಾಟಿ ಹೋಗಿತ್ತು. ನಾನು ಹರ್ಯಾಣದಲ್ಲಿ ಗದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದೆ. ನಾವು ಮನೆಗೆ ತಲುಪಲು ಯತ್ನಿಸುತ್ತಿದ್ದೆವು. ಲಾಕ್‌ಡೌನ್ ನಮ್ಮ ಮೇಲೆ ನಿಜಕ್ಕೂ ಕೆಟ್ಟ ಪರಿಣಾಮ ಬೀರಿದೆ ಎಂದು ಮೃತಪಟ್ಟ ಬಾಲಕಿಯ ತಂದೆ ಶಿವಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News