ಕುರ್ ಆನ್ ಅವತೀರ್ಣದ ತಿಂಗಳಿಗೆ ವಿದಾಯ ಹೇಳುವ ಮುನ್ನ...

Update: 2020-05-24 09:39 GMT

ಹಿಜರಿಶಕೆಯ ರಮಝಾನ್ ತಿಂಗಳಲ್ಲಿ ಕುರ್ ಆನ್ ಅವತೀರ್ಣ ಆರಂಭಗೊಂಡಿತು ಎಂಬ ಕಾರಣಕ್ಕಾಗಿ ಜಗತ್ತಿನಾದ್ಯಂತ ಮುಸ್ಲಿಮರು ಆ ತಿಂಗಳು ಪ್ರತಿವರ್ಷ ಉಪವಾಸ ಆಚರಿಸಬೇಕೆಂಬುದು ಸ್ವತಃ ಕುರ್ ಆನ್ ತಿಳಿಸುವ ಆದೇಶ.

ಮಾತ್ರವಲ್ಲ, ಈ ತಿಂಗಳ ಒಂದು ನಿರ್ದಿಷ್ಟವಾದ, ಖದ್ರ್ ನ ರಾತ್ರಿ (ಖದ್ರ್ = ನಿರ್ಣಾಯಕ) ಕುರ್ ಆನಿನ ಅವತೀರ್ಣ ಆರಂಭಗೊಂಡಿತೆಂದೂ, ಆ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವೆಂದೂ, ಅಂದು ರೂಹ್ (ಜಿಬ್ರೀಲ್ ಅ.)ರವರ ನೇತೃತ್ವದ ದೇವಚರರ ತಂಡ ಭೂಮಿಗೆ ಇಳಿದು ಬರುವರೆಂದೂ, ಕುರ್ ಆನ್ ನ ಸೂಕ್ತಗಳು ಶುಭವಾರ್ತೆ ನೀಡುತ್ತವೆ.

ಈ ಜಗತ್ತನ್ನೂ, ಇದರಲ್ಲಿರುವ ಎಲ್ಲ ಚರಾಚರಗಳನ್ನೂ ಸೃಷ್ಟಿಸಿ, ಪರಿಪಾಲಿಸುತ್ತಿರುವ ಜಗದೊಡೆಯನಾದ ಅಲ್ಲಾಹನಿಂದ ಆತನ ಕೊನೆಯ ಪ್ರವಾದಿ ಮುಹಮ್ಮದ್ (ಸ)ರ ಮೂಲಕ ಲೋಕಾಂತ್ಯದ ತನಕದ ಎಲ್ಲ ಮನುಷ್ಯರ ಇಹಪರ ವಿಜಯದ ದಾರಿದೀಪವಾಗಿ ಅವತೀರ್ಣಗೊಂಡಿರುವ ಗ್ರಂಥ ಕುರ್ ಆನ್.

'ಓದಿರಿ' ಎಂಬ ಪದದೊಂದಿಗೆ ಅವತೀರ್ಣ ಆರಂಭಗೊಂಡ ಕುರ್ ಆನ್ ವಿದ್ಯೆ, ಕಲಿಕೆ, ಪಾಂಡಿತ್ಯ, ಸಂಶೋಧನೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ.

ಮನುಷ್ಯರು ಮೂಲತಃ ಒಂದೇ ಮಾತಾಪಿತರ ಮಕ್ಕಳೆಂದೂ, ನಮ್ಮಲ್ಲಿರುವ ವಿವಿಧ ಕುಲ ಗೋತ್ರಗಳು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ಮಾತ್ರವೆಂದೂ ತಿಳಿಸುವ ಕುರ್ ಆನಿನ ಸೂಕ್ತಗಳು ಅಲ್ಲಾಹನನ್ನು ಹೊರತುಪಡಿಸಿ ಜನರು ಕರೆದು ಪ್ರಾರ್ಥಿಸುವ ಇತರರನ್ನು ಹೀಯಾಳಿಸಬಾರದೆಂಬ ತಾಕೀತು ಮಾಡುತ್ತದೆ. ಧರ್ಮದಲ್ಲಿ ಬಲಾತ್ಕಾರವಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ಅನ್ಯಾಯವಾಗಿ ಒಬ್ಬ ವ್ಯಕ್ತಿಯನ್ನು ಕೊಂದರೆ ಇಡೀ ಮಾನವಕುಲವನ್ನೇ ಕೊಂದಂತೆ, ಒಬ್ಬ ವ್ಯಕ್ತಿಗೆ ಜೀವದಾನ ಮಾಡಿದರೆ ಇಡೀ ಮಾನವಕುಲಕ್ಕೆ ಜೀವದಾನ ಮಾಡಿದಂತೆ ಎಂದು ವಾದಿಸುವ ಕುರ್ ಆನ್ ಯಾವುದೇ ಜನಾಂಗದೊಂದಿಗೆ ನಿಮಗಿರುವ ದ್ವೇಷವು ನಿಮ್ಮನ್ನೆಂದೂ ಅನ್ಯಾಯ ಮಾಡಲು ಪ್ರೇರೇಪಿಸಬಾರದು, ನ್ಯಾಯ ಪಾಲಿಸಿರಿ ಎಂಬ ಆದೇಶವನ್ನು ನೀಡುತ್ತದೆ.

ಆರಾಧನಾ ಕರ್ಮಗಳ ಬಗ್ಗೆ ಸುದೀರ್ಘವಾದ ವಿವರಣೆ ನೀಡದ ಕುರ್ ಆನ್ ಮನುಷ್ಯ ಭೂಮಿಯಲ್ಲಿ ಹೇಗೆ ಬದುಕಬೇಕು, ಹೇಗೆ ನಡೆಯಬೇಕು ಎಂಬುದನ್ನು ಸವಿವರವಾಗಿ ತಿಳಿಸುತ್ತದೆ. ಕುರ್ ಆನಿನ ಅತಿದೊಡ್ಡ ಸೂಕ್ತವಿರುವುದು ದುಡ್ಡಿನ ವ್ಯವಹಾರ, ಸಾಲ, ಮರುಪಾವತಿಯ ನಿಯಮಗಳ ಬಗ್ಗೆ!

ವಿನಯದ ನಡಿಗೆ, ಅಹಂಕಾರ ರಹಿತವಾದ ವ್ಯಕ್ತಿತ್ವ, ಸೌಮ್ಯವಾದ ಮಾತು, ಕೋಪವನ್ನು ನುಂಗುವ ಕ್ಷಮಾಗುಣ, ಸೌಜನ್ಯದ ವರ್ತನೆ, ಮಾತಿಗೂ ಕೃತಿಗೂ ಸಾಮ್ಯತೆಯಿರುವ ಬದುಕನ್ನು ರೂಪಿಸುವಂತೆ ಕುರ್ ಆನ್ ಕರೆ ನೀಡುತ್ತದೆ.

ದುಂದು ವೆಚ್ಚ ಮಾಡಬೇಡಿ, ಜಿಪುಣತೆ ತೋರಿಸಬೇಡಿ, ಇತರರ ಸೊತ್ತನ್ನು ಕಬಳಿಸಬೇಡಿ, ಬಡ್ಡಿಯಿಂದ ದೂರವಿರಿ, ವಂಚಕರ ಪರವಾಗಿ ವಕಾಲತ್ತು ವಹಿಸಬೇಡಿ, ಅಶ್ಲೀಲತೆಯ ಹತ್ತಿರವೂ ಸುಳಿಯಬೇಡಿ, ಯಾರನ್ನೂ ಗೇಲಿ ಮಾಡಬೇಡಿ, ಸುಳ್ಳು ಹೇಳಬೇಡಿ, ಅಸೂಯೆ ಪಡಬೇಡಿ, ಇತರರ ತಪ್ಪುಗಳನ್ನು ಹುಡುಕಬೇಡಿ, ಗುಮಾನಿ/ಹೆಚ್ಚಿನ ಸಂಶಯ ಮತ್ತು ಅನಗತ್ಯ ಕಾರ್ಯಗಳಿಂದ ದೂರವಿರಿ, ಬೇಹುಗಾರಿಕೆ ನಡೆಸಬೇಡಿ, ಅಶಾಂತಿಯನ್ನು ಹರಡಬೇಡಿ, ಅರಿವಿಲ್ಲದ ವಿಷಯಗಳ ಬೆನ್ನು ಹತ್ತಬೇಡಿ....ಎಂಬುದಾಗಿ ಕುರ್ ಆನ್ ಎಚ್ಚರಿಸುತ್ತದೆ.

ಎರಡು ಗುಂಪುಗಳು ಜಗಳಾಡದಂತೆ ಸಂಧಾನ ಏರ್ಪಡಿಸಿರಿ, ಶಾಂತಿಯ ಧ್ವಜವಾಹಕರಾಗಿರಿ, ಇತರರ ತಪ್ಪುಗಳನ್ನು ಕ್ಷಮಿಸಿರಿ, ಯುಕ್ತಿ ಮತ್ತು ಸದುಪದೇಶದಿಂದ ಸಮಾಜ ಸುಧಾರಣೆ ಮಾಡಿರಿ/ಅಲ್ಲಾಹನ ಮಾರ್ಗಕ್ಕೆ ಜನರನ್ನು ಕರೆಯಿರಿ....ಎಂದು ಕುರ್ ಆನ್ ತಾಕೀತು ಮಾಡುತ್ತದೆ.

ಅನ್ಯಾಯ, ಅಕ್ರಮ, ಶೋಷಣೆ, ದಬ್ಬಾಳಿಕೆ, ಅಸಮಾನತೆ, ಭ್ರಷ್ಟಾಚಾರ, ದೌರ್ಜನ್ಯಗಳ ವಿರುದ್ಧ ಹೋರಾಡಲು ಕುರ್ ಆನ್ ಪ್ರೇರಣೆ ನೀಡುತ್ತದೆ.

ಅಂಧವಿಶ್ವಾಸಕ್ಕೆ ಕಿಂಚಿತ್ತೂ ಅವಕಾಶ ನೀಡದ ಕುರ್ ಆನಿನ ಬಹುಪಾಲು ಸೂಕ್ತಗಳು ಸರ್ವಲೋಕಗಳ ಒಡೆಯನಾದ ಅಲ್ಲಾಹನ ಅಸ್ತಿತ್ವವನ್ನು ಮನಸಾರೆ ಒಪ್ಪಿಕೊಳ್ಳುವಂತೆ ಆದೇಶಿಸುತ್ತವೆ. ಕುರ್ ಆನಿನಂತೆ ತಮ್ಮ ಬದುಕನ್ನು ರೂಪಿಸಿದವರಿಗೆ ಇಹ-ಪರ ವಿಜಯದ ವಾಗ್ದಾನವನ್ನೂ ಅದು ಮಾಡುತ್ತದೆ.

ಕುರ್ ಆನ್ ಕೇವಲ ಮುಸ್ಲಿಮರ ಗ್ರಂಥವಲ್ಲ. ಎಲ್ಲ ಕಾಲದ, ಎಲ್ಲ ಮನುಷ್ಯರ ಗ್ರಂಥ. ಇದು ಕೆಲವು ಆರಾಧನಾ ಕರ್ಮಗಳನ್ನು ವಿವರಿಸುವ ಒಂದು ಧಾರ್ಮಿಕ ಗ್ರಂಥವೂ ಅಲ್ಲ. ಇದರಲ್ಲಿ ಇತಿಹಾಸವಿದೆ, ವಿಜ್ಞಾನವಿದೆ. ಮನಃಶಾಸ್ತ್ರ, ಕುಟುಂಬ ಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಖಗೋಳಶಾಸ್ತ್ರ...ಗಳಿವೆ. ರಾಜಕೀಯವಿದೆ. ರಾಷ್ಟ್ರ ನಿರ್ಮಾಣದ ಕಾನೂನುಗಳಿವೆ. ಅಂತಾರಾಷ್ಟ್ರೀಯ ನಿಯಮಗಳಿವೆ. ಇವೆಲ್ಲವನ್ನೂ ತಿಳಿದುಕೊಳ್ಳಲು, ಅರ್ಥಮಾಡಿಕೊಳ್ಳಲು ಕುರ್ ಆನಿನ ಭಾಷೆ (ಅರಬಿ) ತಿಳಿದಿರಬೇಕು.

ಅದನ್ನು ಅರಿತಿದ್ದ, ಅನುಸರಿಸುತ್ತಿದ್ದ ಕಾಲದಲ್ಲಿ ಕುರ್ ಆನಿನ ಅನುಯಾಯಿಗಳು ಈ ಜಗತ್ತಿನ ಶ್ರೇಷ್ಠ ಜನ ಸಮುದಾಯವಾಗಿ ಗುರುತಿಸಿಕೊಂಡಿರುವುದು ಇತಿಹಾಸ. "ಒ ಝಮಾನೆ ಮೆ ಮುಅಝ್ಝಝ್ ತೆ ಮುಸಲ್ಮಾನ್ ಹೋಕರ್, ಔರ್ ತುಮ್ ಖ್ವಾರ್ ಹುವೇ ತಾರಿಕೇ ಕುರ್ ಆನ್ ಹೋಕರ್" ಎಂಬುದಾಗಿ ರಾಷ್ಟ್ರಕವಿ ಅಲ್ಲಾಮ ಇಕ್ಬಾಲ್ ನಮ್ಮನ್ನು ಎಚ್ಚರಿಸಿದ್ದರು.

ಇದು ಕೇವಲ ಓದಬೇಕಾದ ಅಥವಾ ಕಂಠಪಾಠ ಮಾಡಬೇಕಾದ ಗ್ರಂಥವಲ್ಲ. ತಿಳಿಯಬೇಕಾದ, ಅರ್ಥಮಾಡಿಕೊಳ್ಳಬೇಕಾದ, ಅನುಸರಿಸಬೇಕಾದ, ಅನುಷ್ಠಾನಗೊಳಿಸಬೇಕಾದ ಗ್ರಂಥ. ದುರಂತವೆಂದರೆ, ಕುರ್ ಆನಿನ ಅನುಯಾಯಿಗಳು ಎಂದು ವಾದಿಸುವ ಹೆಚ್ಚಿನ ಮುಸ್ಲಿಮರಿಗೆ ಕುರ್ ಆನಿನ ಭಾಷೆ (ಅರಬಿ) ತಿಳಿದಿಲ್ಲ. ಕಲಿಯಲು ಅಸಾಧ್ಯವೆಂಬ ಮೌಡ್ಯ ಈ ಸ್ಥಿತಿಗೆ ಕಾರಣ.

ದಿನದಲ್ಲಿ ಕನಿಷ್ಟ ಒಂದರಿಂದ, ಒಂದೂವರೆ ತಾಸು ಮುಸ್ಲಿಮರು ಅರಬಿಯಲ್ಲಿ ಮಾತನಾಡುತ್ತಾರೆ. ನಮಾಝ್, ಕುರ್ ಆನ್ ಪಠಣ, ಅಸ್ಸಲಾಮು ಅಲೈಕುಮ್, ವ ಅಲೈಕುಮ್ ಸಲಾಮ್, ಇನ್ ಶಾ ಅಲ್ಲಾಹ್, ಅಲ್ ಹಮ್ದುಲಿಲ್ಲಾಹ್, ಯರ್ಹಮುಕಲ್ಲಾಹ್, ಮಾಶಾ ಅಲ್ಲಾಹ್, ಜಝಾಕಲ್ಲಾಹ್...ಹೀಗೆ. ಆದರೆ ಹೆಚ್ಚಿನ ಮುಸ್ಲಿಮರಿಗೆ ಇವುಗಳ ಅರ್ಥ ಗೊತ್ತಿಲ್ಲ ಎಂಬುದು ವಾಸ್ತವ. ನಮ್ಮ ದೇಶದ ರಾಷ್ಟ್ರಪತಿಯಾಗಿದ್ದ ದಿವಂಗತ ಶಂಕರ್ ದಯಾಳ್ ಶರ್ಮಾರವರ ಈ ಕೆಳಗಿನ ಸಾಲುಗಳು ಕುರ್ ಆನ್ ನೊಂದಿಗಿನ ಮುಸ್ಲಿಮರ ಸಂಬಂಧವನ್ನು ಕೆಣಕುತ್ತವೆ.

ಅಮಲ್ ಕಿ ಕಿತಾಬ್ ತೀ,

ದುವಾಃ ಕಿ ಕಿತಾಬ್ ಬನಾದಿಯ!

ಸಮಜ್ ನೇ ಕಿ ಕಿತಾಬ್ ತೀ,

ಪಡ್ ನೇ ಕಿ ಕಿತಾಬ್ ಬನಾದಿಯ!

ಝಿಂದೋಂಕಾ ದಸ್ತೂರ್ ತಾ,

ಮುರ್ದೋಂಕಾ ಮನ್ ಶೂರ್ ಬನಾದಿಯ!

ಇಲ್ಮ್ ಕಿ ಕಿತಾಬ್ ತೀ,

ತುಮ್ ನೇ ಉಸೆ ಲಾ ಇಲ್ಮೋ ಕೇ ಹಾತ್ ಮೇ ದೇದಿಯ!

ತಸ್ಖೀರ್ ಕಾಯಿನಾತ್ ಕಾ ದರಸ್ ದೇನೇ ಆಯೀ ತೀ,

ತುಮ್ ನೇ ಮದ್ರಸೋಂಕಾ ನಿಸಾಬ್ ಬನಾದಿಯ!

ಮುರ್ದಾ ಖೌಮೋಂಕೊ ಝಿಂದಾ ಕರ್ನೇ ಕೇಲಿಯೆ ತಾ,

ಮುರ್ದೊಂಕೊ ಬಖಷ್ ನೇ ಕ ಕಿತಾಬ್ ಬನಾದಿಯ!

ಏ ಮುಸಲ್ಮಾನೊ,

ಏ ಆಪ್ನೆ ಕ್ಯಾಕಿಯಾ?

ಇನ್ನಾದರೂ ಮುಸ್ಲಿಮರು (ಪುರುಷ, ಮಹಿಳೆ ಮಕ್ಕಳೆಂಬ ಬೇಧವಿಲ್ಲದೆ) ಅಲ್ಲಾಹನ ಕುರ್ ಆನ್ ನ ಭಾಷೆ (ಶಾಸ್ತ್ರೀಯ ಅರಬಿ ಭಾಷೆ)ಯನ್ನು ಕಲಿಯಲು, ಕುರ್ ಆನಿನ ಸಂದೇಶಗಳನ್ನು ಅರ್ಥಮಾಡಿಕೊಳ್ಳಲು, ಅದನ್ನು ಬದುಕಿನಲ್ಲಿ ಅನುಷ್ಠಾನಿಸಲು ಮುಂದಾಗುವ ದೃಢ ಸಂಕಲ್ಪ ಮಾಡಬೇಕು. ಮುಸ್ಲಿಮರು ತಮ್ಮ ನಾಯಕ, ಪ್ರವಾದಿ ಮುಹಮ್ಮದ್ (ಸ)ರಂತೆ ನಡೆದಾಡುವ ಕುರ್ ಆನ್ ಆಗಬೇಕು. ತನ್ಮೂಲಕ ಕಳೆದುಕೊಂಡ ಅಭಿಮಾನ ಸಮುದಾಯಕ್ಕೆ ಮರಳಿ ಸಿಗುವಂತಾಗಬೇಕು. ಹಾಗಾದಲ್ಲಿ ತಿಂಗಳು ಪೂರ್ತಿಯ ಉಪವಾಸ, ಶವ್ವಾಲ್ ಒಂದರ ಈದುಲ್ ಫಿತ್ರ್ ಆಚರಣೆ ಹಾಗೂ ರಮಝಾನ್ ಗೆ ಕೋರುವ ಶುಭವಿದಾಯ ಅರ್ಥಪೂರ್ಣವಾಗಲಿದೆ.

Writer - - ಉಮರ್ ಯು.ಹೆಚ್.

contributor

Editor - - ಉಮರ್ ಯು.ಹೆಚ್.

contributor

Similar News