ಮೋದಿ ಸರಕಾರ 2.0: ಮುಂದಿನ ತಿಂಗಳು ಬಿಜೆಪಿಯಿಂದ ಮೊದಲ ವರ್ಷಾಚರಣೆ

Update: 2020-05-28 14:54 GMT

ಹೊಸದಿಲ್ಲಿ,ಮೇ 28: ಮೋದಿ ಸರಕಾರದ ದ್ವಿತೀಯ ಅಧಿಕಾರಾವಧಿಯ ಮೊದಲ ವರ್ಷಾಚರಣೆಯ ಅಂಗವಾಗಿ ಬಿಜೆಪಿಯು ಜೂನ್ ತಿಂಗಳುದ್ದಕ್ಕೂ ಅಭಿಯಾನವನ್ನು ಹಮ್ಮಿಕೊಂಡಿದ್ದು,ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಡಿಜಿಟಲ್ ರ್ಯಾಲಿಗಳನ್ನು ನಡೆಸಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ ಅವರು ಗುರುವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಪಕ್ಷವು ಸಾರ್ವಜನಿಕರಿಗೆ ಬೆಂಬಲವಾಗಿ ನಿಂತಿತ್ತು ಎಂದು ಒತ್ತಿ ಹೇಳಿದ ಅವರು, ಪಕ್ಷದ ಕಾರ್ಯಕರ್ತರು ದೇಶಾದ್ಯಂತ 19 ಕೋಟಿ ಆಹಾರದ ಪೊಟ್ಟಣಗಳು ಮತ್ತು ನಾಲ್ಕು ಲಕ್ಷಕ್ಕೂ ಅಧಿಕ ದಿನಸಿ ಪ್ಯಾಕೆಟ್‌ಗಳನ್ನು ವಿತರಿಸಿದ್ದಾರೆ . ಐದು ಕೋಟಿಗೂ ಅಧಿಕ ಮಾಸ್ಕ್‌ಗಳನ್ನು ವಿತರಿಸಿದ್ದಾರೆ. ದೇಶದೆಲ್ಲೆಡೆ ಕಾರ್ಯಕರ್ತರು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಜೊತೆಗೆ ಅವರಿಗೆ ಅಗತ್ಯ ನೆರವುಗಳನ್ನು ಒದಗಿಸಿದ್ದಾರೆ ಎಂದರು.

ಮೋದಿ 2.0 ಸರಕಾರದ ಮೊದಲ ವಾರ್ಷಿಕೋತ್ಸವದ ಕುರಿತು ಮಾತನಾಡಿದ ಯಾದವ, ಪಕ್ಷವು ದೇಶಾದ್ಯಂತ ಡಿಜಿಟಲ್ ರ್ಯಾಲಿಗಳನ್ನು ನಡೆಸಲಿದೆ.ಪಕ್ಷದ ಎಲ್ಲ ಏಳೂ ಘಟಕಗಳು ಸಹ ತಮ್ಮ ಆಯಾ ಕ್ಷೇತ್ರಗಳಲ್ಲಿ 500 ಡಿಜಿಟಲ್ ರ್ಯಾಲಿಗಳನ್ನು ನಡೆಸಲಿವೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಫೇಸ್‌ಬುಕ್ ಲೈವ್ ಮೂಲಕ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸ್ವಾವಲಂಬಿ ಭಾರತ,ಸರಕಾರದ ಸಾಧನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಬರೆದಿರುವ ಪತ್ರಗಳನ್ನು ಪಕ್ಷವು ಹತ್ತು ಕೋಟಿ ಕುಟುಂಬಗಳಿಗೆ ತಲುಪಿಸಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News