ಹಸಿವಿನಿಂದ ಮಗುವಿನ ಮುಂದೆ ಕೊನೆ ಉಸಿರೆಳೆದ ತಾಯಿ: ರೈಲ್ವೆ, ಬಿಹಾರ ಸರಕಾರದ ವಿರುದ್ಧ ದೂರು

Update: 2020-05-28 15:06 GMT

ಹೊಸದಿಲ್ಲಿ, ಮೇ 28: ಬಿಹಾರದ ಮುಝಫ್ಫರ್‌ಪುರ ರೈಲು ನಿಲ್ದಾಣದಲ್ಲಿ ಮಹಿಳೆಯೋರ್ವಳ ಸಾವಿಗೆ ಸಂಬಂಧಿಸಿದಂತೆ ವಕೀಲ ಬದರ್ ಮಹಮೂದ್ ಎನ್ನುವವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದ ತನ್ನ ತಾಯಿ ಕೆಲವು ಸಮಯದ ಹಿಂದೆ ಮೃತಪಟ್ಟಿದ್ದಾಳೆಂದು ಗೊತ್ತಿಲ್ಲದ ಆಕೆಯ ಪುಟ್ಟಮಗು ಶವದ ಮೇಲಿದ್ದ ಚಾದರ್ ಎಳೆದು ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಆಕೆ ಬಿಸಿಲಿನ ಆಘಾತ,ಹಸಿವು ಮತ್ತು ನಿರ್ಜಲೀಕರಣದಿಂದ ಮೃತಪಟ್ಟಿದ್ದಾಳೆಂದು ಕುಟುಂಬದವರು ಹೇಳಿದ್ದಾರೆ. 23ರ ಹರೆಯದ ಈ ಮಹಿಳೆ ಮೇ 25ರಂದು ಗುಜರಾತಿನಲ್ಲಿ ವಿಶೇಷ ಶ್ರಮಿಕ್ ರೈಲನ್ನು ಹತ್ತಿದ್ದು,ಮೇ 26ರಂದು ಮುಝಫ್ಫರ್‌ಪುರವನ್ನು ತಲುಪಿದ್ದಳು.

ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯ ಸಿಸಿಟಿವಿ ಫೂಟೇಜ್‌ನ್ನು ವಶಪಡಿಸಿಕೊಳ್ಳುವಂತೆ ಆಯೋಗವನ್ನು ಕೋರಿರುವ ಮಹಮೂದ್, ರೈಲ್ವೆ ಮತ್ತು ಬಿಹಾರ ಸರಕಾರದ ಕ್ರೂರ, ನಿರಂಕುಶ ವರ್ತನೆಗಾಗಿ ಅವುಗಳ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಹಾಗೂ ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರಕ್ಕೆ ಆದೇಶಿಸುವಂತೆ ಆಗ್ರಹಿಸಿದ್ದಾರೆ.

ರೈಲ್ವೆ ಸಚಿವಾಲಯ ಮತ್ತು ಬಿಹಾರ ಸರಕಾರ ರೈಲಿನಲ್ಲಿ ಅಥವಾ ರೈಲು ನಿಲ್ದಾಣದಲ್ಲಿ ಮೂಲಭೂತ ಅಗತ್ಯಗಳನ್ನು ಒದಗಿಸುವಲ್ಲಿ ಹಾಗೂ ಮಹಿಳೆಯನ್ನು ವಿಫಲಗೊಳ್ಳುವ ಮೂಲಕ ತೀರ ನಿರ್ಲಕ್ಷ್ಯವನ್ನು ಪ್ರದರ್ಶಿಸಿವೆ ಎಂದು ಆರೋಪಿಸಿರುವ ಅವರು, ಮಹಿಳೆಗೆ ಆಹಾರ ಮತ್ತು ವೈದ್ಯಕೀಯ ನೆರವುಗಳ ಪ್ರಾಥಮಿಕ ಅಗತ್ಯಗಳನ್ನು ಒದಗಿಸುವಲ್ಲಿ ರೈಲ್ವೆ ಸಚಿವಾಲಯ ಮತ್ತು ಬಿಹಾರ ಸರಕಾರದ ವೈಫಲ್ಯ ಆಘಾತಕಾರಿಯಾಗಿದೆ ಮತ್ತು ಸಂವಿಧಾನದ ವಿಧಿ 21ರಡಿ ಮೃತ ಮಹಿಳೆಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದೂ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News