ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಆರೋಗ್ಯ ಕಾರ್ಯಕರ್ತ: 25 ನಿಮಿಷ ರಸ್ತೆಯಲ್ಲಿದ್ದರೂ ನೆರವು ಸಿಗಲಿಲ್ಲ !

Update: 2020-05-28 15:19 GMT

ಸಾಗರ, ಮೇ 28: ಕೋವಿಡ್-19 ರೋಗಿಗಳಿಗೆ ನೆರವಾಗುತ್ತಿದ್ದ ಆರೋಗ್ಯ ಕಾರ್ಯಕರ್ತನೋರ್ವ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದು ಪ್ರಜ್ಞಾಹೀನನಾಗಿದ್ದು,ಆಸ್ಪತ್ರೆಗೆ ಸಾಗಿಸಲ್ಪಡುವ ಮುನ್ನ 25 ನಿಮಿಷಗಳ ಕಾಲ 44 ಡಿ.ಸೆ.ಬಿರುಬಿಸಿಲಿನಲ್ಲಿ ರಸ್ತೆಯ ಪಕ್ಕದಲ್ಲಿ ಬಿದ್ದುಕೊಂಡಿದ್ದ ವಿಷಾದನೀಯ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.

108 ಆ್ಯಂಬುಲನ್ಸ್ ಸೇವೆಯಲ್ಲಿ ನಿಯೋಜಿತ ಆರೋಗ್ಯ ಕಾರ್ಯಕರ್ತ ಹೀರಾಲಾಲ ಪ್ರಜಾಪತಿ ಅವರು ಬುಧವಾರ ಮಧ್ಯಾಹ್ನ ಕ್ಷಯರೋಗ ಆಸ್ಪತ್ರೆಯಿಂದ ಕೊರೋನ ವೈರಸ್ ಪಾಸಿಟಿವ್ ರೋಗಿಗಳನ್ನು ಬುಂದೇಲಖಂಡ್ ಮೆಡಿಕಲ್ ಕಾಲೇಜ್ (ಬಿಎಂಸಿ) ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು. ಸುಡುಬಿಸಿಲಿನಲ್ಲಿ ಪಿಪಿಇ ಕಿಟ್ ಧರಿಸಿದ್ದ ಅವರು ಬಿಸಿಲಿನ ಝಳಕ್ಕೆ ಬಿಎಂಸಿ ಆಸ್ಪತ್ರೆಯ ಬಳಿಯೇ ಕುಸಿದು ಬಿದ್ದು ಪ್ರಜ್ಞಾಶೂನ್ಯರಾಗಿದ್ದರು. ಅವರ ಸಹೋದ್ಯೋಗಿ, ಆ್ಯಂಬುಲನ್ಸ್ ಚಾಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಂತೆ ಬಿಎಂಸಿ ಅಧಿಕಾರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಅವರು ಒಪ್ಪಿರಲಿಲ್ಲ.

ಇಷ್ಟೆಲ್ಲ ಆಗುವಾಗ ಪ್ರಜಾಪತಿ ಸುಮಾರು 25 ನಿಮಿಷಗಳ ಕಾಲ ಬಿದ್ದಲ್ಲಿಯೇ ಇದ್ದರು. ಕೊನೆಗೂ ಇನ್ನೋರ್ವ ಪ್ಯಾರಾಮೆಡಿಕ್ ಸಿಬ್ಬಂದಿ ತನ್ನ ಸ್ವಂತ ಆ್ಯಂಬುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದ. ಚಿಕಿತ್ಸೆಯ ಬಳಿಕ ಪ್ರಜಾಪತಿ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News