​ಶ್ರಮಿಕ್ ರೈಲುಗಳಲ್ಲಿ ಮೃತಪಟ್ಟವರೆಷ್ಟು ಗೊತ್ತೇ?

Update: 2020-05-30 04:00 GMT

ಹೊಸದಿಲ್ಲಿ, ಮೇ 30: ದೇಶದ ವಿವಿಧೆಡೆ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ತವರು ಗ್ರಾಮಗಳಿಗೆ ಮರಳಲು ಅನುಕೂಲ ಕಲ್ಪಿಸುವ ಸಲುವಾಗಿ ಮೇ 9ರಿಂದ ಮೇ 29ರವರೆಗೆ ಶ್ರಮಿಕ್ ರೈಲುಗಳಲ್ಲಿ ಪ್ರಯಾಣದ ವೇಳೆ ಒಟ್ಟು 80 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷಾ ಪಡೆ ಪ್ರಕಟಿಸಿದೆ.

ಈ ರೈಲು ಸೇವೆಯನ್ನು ಮೇ ಒಂದರಿಂದ ಆರಂಭಿಸಲಾಗಿದ್ದು, ಮೇ 27ರವರೆಗೆ ಒಟ್ಟು 3,840 ರೈಲುಗಳು ಸುಮಾರು 50 ಲಕ್ಷ ವಲಸೆ ಕಾರ್ಮಿಕರನ್ನು ಕರೆದೊಯ್ದಿವೆ. ಬುಧವಾರ ಈ ರೈಲುಗಳಲ್ಲಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟವರ ಪೈಕಿ ಬಹುತೇಕ ಮಂದಿ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ.

ಹಲವು ಮಂದಿ ವೈದ್ಯಕೀಯ ಚಿಕಿತ್ಸೆಗಾಗಿಯೇ ನಗರಗಳಿಗೆ ಬಂದಿದ್ದವರು ಎಂದು ಸಮರ್ಥಿಸಿಕೊಂಡಿದೆ. ಹಲವು ಮಂದಿ ಉಸಿರುಗಟ್ಟಿ, ಉಷ್ಣಾಂಶ ಹಾಗೂ ಹಸಿವಿನಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯೆಯಾಗಿ ಆರ್‌ಪಿಎಫ್ ಈ ಹೇಳಿಕೆ ನೀಡಿದೆ.

ವಲಸೆ ಕಾರ್ಮಿಕರ ಸಾವಿನ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿರುವುದು ಇದೇ ಮೊದಲು. ಈ ಸಂಖ್ಯೆಯನ್ನು ಆರ್‌ಪಿಎಫ್ ಅಧಿಕಾರಿ ದೃಢಪಡಿಸಿದ್ದು, ಆರಂಭಿಕ ಪಟ್ಟಿ ಸಿದ್ಧಪಡಿಸಲಾಗಿದೆ. ರಾಜ್ಯಗಳ ಜತೆ ಸಮನ್ವಯದೊಂದಿಗೆ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 80 ಸಾವಿನ ಬಗ್ಗೆ ರೈಲ್ವೆ ಸಚಿವಾಲಯದ ವಕ್ತಾರರನ್ನು ಪ್ರಶ್ನಿಸಿದಾಗ, ರೈಲ್ವೆ ಮಂಡಳಿ ಅಧ್ಯಕ್ಷರು ಈಗಾಗಲೇ ಈ ಪ್ರಶ್ನೆಗೆ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ್ದಾರೆ ಎಂದು ಸಬೂಬು ನೀಡಿದರು.

ವಿವಿಧೆಡೆ ರೈಲುಗಳಲ್ಲಿ ಮೃತಪಟ್ಟ 80 ಮಂದಿಯಲ್ಲಿ 4ರಿಂದ 85 ವರ್ಷ ವಯಸ್ಸಿನವರೂ ಸೇರಿದ್ದಾರೆ ಎನ್ನುವುದು ಹಿಂದೂಸ್ತಾನ್ ಟೈಮ್ಸ್ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ. ಮೇ 1 ರಿಂದ 8ರವರೆಗಿನ ಅಂಕಿ ಅಂಶಗಳು ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News