ಉ.ಪ್ರ:ಲಾಕ್‌ಡೌನ್‌ನಿಂದಾಗಿ ಕುಟುಂಬವನ್ನು ಪೋಷಿಸಲಾಗದೇ ನೊಂದಿದ್ದ ವ್ಯಕ್ತಿ ಆತ್ಮಹತ್ಯೆ

Update: 2020-05-30 15:16 GMT

ಲಕ್ನೋ,ಮೇ 30: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ ತನ್ನ ಕುಟುಂಬವನ್ನು ಪೋಷಿಸಲಾಗದೆ ನೊಂದಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದೆ.

ಭಾನುಪ್ರಕಾಶ ಗುಪ್ತಾ (50)ರ ಶವವು ರೈಲು ಹಳಿಗಳಲ್ಲಿ ಪತ್ತೆಯಾಗಿದ್ದು,ಅವರು ಬರೆದಿಟ್ಟಿದ್ದ ಆತ್ಮಹತ್ಯಾ ಪತ್ರವೊಂದು ದೊರಕಿದೆ. ಅವರು ನಾಲ್ವರು ಮಕ್ಕಳು,ಪತ್ನಿ ಮತ್ತು ಅನಾರೋಗ್ಯಪೀಡಿತ ತಾಯಿಯನ್ನು ಅಗಲಿದ್ದಾರೆ.

ಸಮೀಪದ ಶಹಜಹಾನ್‌ಪುರ ಜಿಲ್ಲೆಯ ಹೋಟೆಲ್ಲೊಂದರಲ್ಲಿ ದುಡಿಯುತ್ತಿದ್ದ ಗುಪ್ತಾ ಲಾಕ್‌ಡೌನ್‌ನಿಂದಾಗಿ ನಿರುದ್ಯೋಗಿಯಾಗಿದ್ದರು. ಕಳೆದ ಕೆಲವು ದಿನಗಳಲ್ಲಿ ಅವರ ಕೈ ಸಂಪೂರ್ಣ ಖಾಲಿಯಾಗಿತ್ತು ಎನ್ನಲಾಗಿದೆ.

ತನ್ನ ಆತ್ಮಹತ್ಯೆಗೆ ಲಾಕ್‌ಡೌನ್ ಕಾರಣ ಎಂದು ಪತ್ರದಲ್ಲಿ ದೂರಿರುವ ಗುಪ್ತಾ, ಸರಕಾರದ ಪಡಿತರ ಅಂಗಡಿಯಲ್ಲಿ ನೀಡಿದ್ದ ಗೋದಿ ಮತ್ತು ಅಕ್ಕಿ ಮನೆಯಲ್ಲಿದೆ. ಆದರೆ ಅದು ಎಲ್ಲರಿಗೂ ಸಾಲುವಷ್ಟಿಲ್ಲ. ಸಕ್ಕರೆ,ಉಪ್ಪು,ಹಾಲುಗಳಂತಹ ಇತರ ಅಗತ್ಯ ವಸ್ತುಗಳ ಖರೀದಿಗೂ ತನ್ನ ಬಳಿ ದುಡ್ಡಿಲ್ಲ. ತನ್ನ ತಾಯಿ ತೀವ್ರ ಅನಾರೋಗ್ಯದಿಂದಿದ್ದು,ಆಕೆಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ ಎನ್ನುವುದು ತನಗೆ ತೀವ್ರ ನೋವನ್ನುಂಟು ಮಾಡಿದೆ. ಜಿಲ್ಲಾಡಳಿತವೂ ತನಗೆ ನೆರವಾಗಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಗುಪ್ತಾರ ಕುಟುಂಬಕ್ಕೆ ನೆರವಾಗುವುದಾಗಿ ಉ.ಪ್ರ.ಸರಕಾರವು ಭರವಸೆ ನೀಡಿದೆ.

‘ಗುಪ್ತಾ ಪಡಿತರ ಚೀಟಿಯನ್ನು ಹೊಂದಿದ್ದು ಅವರಿಗೆ ಈ ತಿಂಗಳ ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು. ಅವರಿಗೆ ಅವುಗಳ ಕೊರತೆಯಿರಲಿಲ್ಲ. ಆತ್ಮಹತ್ಯೆಗೆ ಕಾರಣವನ್ನು ತಿಳಿಯಲು ನಾವು ತನಿಖೆ ನಡೆಸಲಿದ್ದೇವೆ ’ಎಂದು ಲಖಿಂಪುರ ಖೇರಿ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ ಸಿಂಗ್ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಿಯಾಂಕಾ ತರಾಟೆ:  ತನ್ಮಧ್ಯೆ ಮೋದಿ 2.0 ಸರಕಾರದ ಮೊದಲ ವರ್ಷಾಚರಣೆಯನ್ನು ಪ್ರಸ್ತಾಪಿಸಿ ರಾಜ್ಯದ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರಗಳನ್ನು ತರಾಟೆಗೆತ್ತಿಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,‘ತನ್ನ ಕುಟುಂಬವನ್ನು ಪೋಷಿಸಲಾಗದೇ ಗುಪ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯಾ ಪತ್ರದಲ್ಲಿ ಅವರು ತನ್ನೆಲ್ಲ ಹತಾಶೆಗಳನ್ನು ತೋಡಿಕೊಂಡಿದ್ದಾರೆ. ನಿಮ್ಮ ಸರಕಾರದ ವರ್ಷಾಚರಣೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರ ಪತ್ರ ಎಲ್ಲರಿಗೂ ತಲುಪುವಂತೆ ಈ ಪತ್ರವು ನಿಮ್ಮನ್ನು ತಲುಪದಿರಬಹುದು. ಆದರೆ ದಯವಿಟ್ಟು ಇದನ್ನು ಓದಿ ’ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News