ಕೊರೋನ ಸೋಂಕು ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ: ಟಾಪ್-8 ಪಟ್ಟಿಯಲ್ಲಿ ಭಾರತ

Update: 2020-06-01 04:39 GMT

ಹೊಸದಿಲ್ಲಿ: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್ 4.0 ಕೊನೆಯ ದಿನವಾದ ರವಿವಾರ ದೇಶದಲ್ಲಿ ಇದುವರೆಗಿನ ಗರಿಷ್ಠ ಸಂಖ್ಯೆಯ ಅಂದರೆ 8237 ಪ್ರಕರಣಗಳು ವರದಿಯಾಗಿವೆ.

ಒಟ್ಟು ಸೋಂಕಿತರ ಸಂಖ್ಯೆ 1,85,061ಕ್ಕೇರಿದ್ದು, ಜರ್ಮನಿ (1,83,426)ಯನ್ನು ಹಿಂದಿಕ್ಕಿದ ಭಾರತ ಗರಿಷ್ಠ ಸೋಂಕಿತರನ್ನು ಹೊಂದಿದ ರಾಷ್ಟ್ರಗಳ ಪೈಕಿ ಎಂಟನೇ ಸ್ಥಾನಕ್ಕೇರಿದೆ. ಇದೇ ಪ್ರವೃತ್ತಿ ಮುಂದುವರಿದಲ್ಲಿ ಮುಂದಿನ 24 ಗಂಟೆಗಳಲ್ಲಿ ಫ್ರಾನ್ಸ್ (1.88 ಲಕ್ಷ) ದೇಶವನ್ನೂ ಹಿಂದಿಕ್ಕಿ, ಏಳನೇ ಸ್ಥಾನಕ್ಕೇರಲಿದೆ.

ಕೊರೋನ ಸಾವಿನ ಸಂಖ್ಯೆ ಕೂಡಾ ನಿಯತವಾಗಿ ಹೆಚ್ಚುತ್ತಿದ್ದು, ರವಿವಾರ 224 ಕೊರೋನ ಸಂಬಂಧಿ ಸಾವು ಸಂಭವಿಸಿದೆ. ಶುಕ್ರವಾರ ದಾಖಲಾದ 270 ಸಾವಿನ ಪ್ರಕರಣಗಳನ್ನು ಹೊರತುಪಡಿಸಿದರೆ ಇದು ಗರಿಷ್ಠ ಸಂಖ್ಯೆಯಾಗಿದೆ. ಇದರಿಂದಾಗಿ ಸೋಂಕಿಗೆ ಬಲಿಯಾದವರ ಸಂಖ್ಯೆ 5404ಕ್ಕೇರಿದ್ದು, ಕಳೆದ 12 ದಿನಗಳಲ್ಲಿ ದೇಶದಲ್ಲಿ 2000ಕ್ಕೂ ಅಧಿಕ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೆ ಭಾರತದಲ್ಲಿ ಸಾವಿನ ಪ್ರಮಾಣ 2.9% ಮಾತ್ರ ಇದ್ದು, ಇತರ ಹಲವು ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ.

ಕಳೆದ ಒಂದು ವಾರದಲ್ಲೇ ದೇಶದಲ್ಲಿ 48 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಜನವರಿ 30ರಂದು ದೇಶದಲ್ಲಿ ಮೊದಲ ಪ್ರಕರಣ ವರದಿಯಾದ ಬಳಿಕ ಸಂಭವಿಸಿದ ಒಟ್ಟು ಪ್ರಕರಣಗಳ ನಾಲ್ಕನೇ ಒಂದರಷ್ಟು ಪ್ರಕರಣಗಳು ಒಂದು ವಾರದಲ್ಲಿ ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಮಾಮೂಲಿನಂತೆ ಗರಿಷ್ಠ (2487) ಪ್ರಕರಣಗಳು ವರದಿಯಾಗಿವೆ. ದೆಹಲಿ (1295), ತಮಿಳುನಾಡು (1149), ಉತ್ತರ ಪ್ರದೇಶ (378), ಬಂಗಾಳ (371), ಕರ್ನಾಟಕ (299) ಮತ್ತು ತೆಲಂಗಾಣ (199) ರಾಜ್ಯಗಳಲ್ಲಿ ದಾಖಲೆ ಸಂಖ್ಯೆಯ ಪ್ರಕರಣಗಳು ಕಂಡುಬಂದಿವೆ. ರವಿವಾರ 4700 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 91368ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News