×
Ad

ಗ್ರಾಮ ಭಾರತದ ಪುನರುಜ್ಜೀವನ

Update: 2020-06-10 23:59 IST

ಭಾಗ-2

ಸದ್ಯ ಬಡವರ ಅನ್ನ, ವಸ್ತ್ರ, ವಸತಿ, ಶಿಕ್ಷಣ, ಆರೋಗ್ಯ ನೋಡಿಕೊಳ್ಳುವುದು ಚುನಾಯಿತ ಸರಕಾರದ ಜವಾಬ್ದಾರಿ. ಆ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತರಾಟೆಗೆ ತೆಗೆದುಕೊಂಡಿದೆ. ವಲಸಿಗರ ಬಿಕ್ಕಟ್ಟನ್ನು ಸರಕಾರ ತುರ್ತಾಗಿ ಬಗೆಹರಿಸಬೇಕು, ಇಲ್ಲವಾದರೆ ನಮ್ಮೀ ಭವ್ಯ ಭಾರತ ನಾಗರಿಕ ರಾಷ್ಟ್ರಗಳ ಎದುರು ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ.ಆದರೆ ಜನ ಯಾವ ಕಾರಣಕ್ಕೂ ಸರಕಾರದತ್ತ ಪ್ರತಿಯೊಂದಕ್ಕೂ ಕೈಯೊಡ್ಡಿ ನಿಲ್ಲಬಾರದು, ಹಂಗಿನಲ್ಲಿ ಬಾಳಬಾರದು, ಆತ್ಮಗೌರವ ಸರ್ವೋತ್ಕೃಷ್ಟ ಎಂದು ಬಾಳು ಸಾಗಿಸಬೇಕು. ಗಾಂಧೀಜಿ ಅನುಸರಿಸಿದ ಪಾಠ ಇದು.

(ನಿನ್ನೆಯಿಂದ ಮುಂದುವರಿಯುವುದು)

ಸಾಂಸ್ಕೃತಿಕ ನೋಟಗಳು

ಗ್ರಾಮೀಣ ಜನ ‘ನವಿಲು ಹಾರುತ್ತದೆ ಎಂದು ಕೆಂಬೂತ ಪುಕ್ಕತರಕೊಂಡಿತು’ ಎಂಬಂತಾಗಬಾರದು. ಪಟ್ಟಣಗಳಲ್ಲಿ ಗುಂಪು ಕಟ್ಟಿ ಹೋಗುವ ಪ್ಯಾಕೇಜ್ ಟೂರ್, ತೀರ್ಥಯಾತ್ರೆ, ಅದ್ದೂರಿ ಜಾತ್ರೆಗಳನ್ನು ಕೈ ಬಿಡಬೇಕು. ಸರಳ ಮದುವೆಗಳನ್ನು ರೂಢಿಗೆತರಬೇಕು. ಸಾಲಮಾಡಿ ತಿಥಿ ಮಾಡಬಾರದು. ವೃಥಾ ರಾಜಕೀಯ ಸಭೆ ಸಮಾರಂಭಗಳಿಗೆ ಜನ ಗುಂಪು ಕೂಡಬಾರದು. ಹಾಗೆಂದು ಕಲೆ,ಸಾಹಿತ್ಯ, ಸಂಸ್ಕೃತಿಯನ್ನು ವರ್ಜಿಸಬೇಕೆಂದಲ್ಲ. ಟಿವಿ, ರೇಡಿಯೊ 24 ಗಂಟೆ ಅದೇ ಕಾರ್ಯಕ್ರಮಗಳನ್ನು ಬೇಡ ಬೇಡವೆಂದರೂ ನಡುಮನೆಗೆ ತಂದು ಸುರಿಯುತ್ತವೆ. ಆದರೆ ಅಲ್ಲಿರುವ ಮತ ಮೌಢ್ಯ, ರಾಜಕೀಯ ದ್ವೇಷಾಸೂಯೆ, ವಾರಭವಿಷ್ಯ ಮುಂತಾದ ಕಾರ್ಯಕ್ರಮಗಳಿಂದ ದೂರ ಇರಬೇಕು. ವೈಚಾರಿಕ ಪ್ರಜ್ಞೆಯನ್ನು, ವೈಜ್ಞಾನಿಕ ಬುದ್ಧಿಯನ್ನು ವಿಕಾಸಗೊಳಿಸುವಂತಹ ಕಾರ್ಯಕ್ರಮಗಳನ್ನು, ಉತ್ತಮ ಸಂಗೀತ ಕಾರ್ಯಕ್ರಮಗಳನ್ನು ಆಲಿಸಬಹುದು, ನೋಡಬಹುದು. ಸಕಲ ಜೀವಿಗಳಿಗೆ ಲೇಸ ಬಯಸುವ ಶರಣರ ವಚನಗಳು; ಈಸಬೇಕು ಇದ್ದು ಜೈಸಬೇಕು, ಹೇಸಿಗೆ ಸಂಸಾರದಲ್ಲಿ ಕ್ಲೇಶಲೇಸ ಮಾಡದಂತೆ ಎನ್ನುವ ದಾಸರ ಕೀರ್ತನೆಗಳನ್ನು ಕೇಳಬಹುದು. ಆದರೆ ದಿನಬೆಳಗಾದರೆ ಹೇಳುವ ವಾರತಿಥಿ ನಕ್ಷತ್ರ ಪಂಚಾಂಗ ಭವಿಷ್ಯಗಳನ್ನು ನಂಬಬಾರದು, ನೆಚ್ಚಬಾರದು. ಆನ್‌ಲೈನ್ ಪೂಜೆಯಿಂದ, ಆನ್‌ಲೈನ್ ಹಣ ಹುಂಡಿಗೆ ಹೋದರೆ ಕೊರೋನ ಹಿಂಜರಿಯುವುದಿಲ್ಲ ಎಂಬ ನಿಜ ಈಗಾಗಲೇ ಮನವರಿಕೆ ಆಗಿದೆ. ಅದೆಲ್ಲ ಮಧ್ಯವರ್ತಿಗಳು ತಿಂದುಂಡು ಮಲಗಲು ಕಟ್ಟಿದ ಪರಾವಲಂಬಿ ಕಥನಗಳು ಎಂಬ ವಿವೇಕ ಮೂಡಬೇಕು.ಈಗೀಗ ವಾಟ್ಸ್‌ಆ್ಯಪ್ ಗ್ರೂಪ್‌ಗೆ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳಿಗೆ ಏನೆಲ್ಲ ಕಸ ಬಂದು ಬೀಳುತ್ತಿದೆ. ಹಂಸಕ್ಷೀರ ನ್ಯಾಯದಂತೆ ಅದರಲ್ಲಿ ಬೇಕಾದುದನ್ನು ಆರಿಸಿಕೊಳ್ಳುವ ಜಾಣ್ಮೆ ಇದ್ದರೆ ಸಾಕು. ಗಾಂಧಿ ಸೇವಾಶ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ, ದೇವರ ನಾಮ, ಭಜನೆ ಮುಂತಾಗಿ ಮುಂಜಾನೆ, ಸಂಜೆ ತಪ್ಪದೆ ಜರುಗುತ್ತಿತ್ತು. ಉಳಿದಂತೆ ಸದಾ ಶ್ರಮದ ಕಾಯಕ ನಡೆಯುತ್ತಿತ್ತು.

ಪ್ರಸ್ತುತ ಯಾವ ಕಾಯ್ದೆ ಕಾನೂನು, ಸುಗ್ರೀವಾಜ್ಞೆಗಳಿಗೂ ಜಗ್ಗದ ಲೋಕದ ಸುಮಾರು 750 ಕೋಟಿ ಜನರು ಕೊರೋನ ಹೆಮ್ಮಾರಿಯ ಮುಂದೆ ಮಂಡಿಊರಿ ಕುಳಿತಿದ್ದಾರೆ- ಬಾಯಿಗೆ ಮಾಸ್ಕ್, ಕೈಗೆ ಗ್ಲೌಸ್, ಕಾಲಿಗೆ ಸಾಕ್ಸ್-ಗಾಳಿ ದೆವ್ವಗಳಂತೆ. ರೂಪಕದಲ್ಲಿ ಹೇಳುವುದಾದರೆ: ಇದು ಸ್ವಯಂಕೃತಾಪರಾಧಕ್ಕೆ ಒದಗಿದ ಪ್ರಕೃತಿದತ್ತ ಶಿಕ್ಷೆ.

ಪುರಾಣ ಕಾಲದಲ್ಲಿ ಹಿರಣ್ಯಾಕ್ಷ ಎಂಬ ಒಬ್ಬ ದಾನವನಿದ್ದ. ಅವನು ಭೂಮಿಗೆ ಕಂಟಕನಾಗಿದ್ದ. ಭೂಮಿ ವಿಷ್ಣುವಿಗೆ ಪ್ರಾರ್ಥಿಸಿದಳು. ವಿಷ್ಣು ವರಾಹಾವತಾರ ತಾಳಿ ಹಿರಣ್ಯಾಕ್ಷನನ್ನು ಕೊಂದು ಅವನು ಸಮುದ್ರ ತಳದಲ್ಲಿ ಅಡಗಿಸಿಟ್ಟಿದ್ದ ಭೂದೇವಿಯನ್ನು ರಕ್ಷಿಸಿದನಂತೆ. ಪ್ರಸ್ತುತ ನಾವು ಸ್ವರ್ಗಕಟ್ಟಲು ಹೋಗಿ ಹಿರಣ್ಯಾಕ್ಷನಂತೆ ಬಹುರತ್ನ ವಸುಂಧರೆಯನ್ನು ಒಡೆದು ಬಡಿದು ಕಡಿದು ಚಿತ್ರಹಿಂಸೆ ಕೊಡುತ್ತಿದ್ದೇವೆ. ಅವಳ ರಕ್ಷಣೆಗೆ ಈಗ ಯಾವ ವಿಷ್ಣುವೂ ಅವತಾರವೆತ್ತಿ ಬಂದಂತೆ ಕಾಣುತ್ತಿಲ್ಲ. ಗಾಂಧೀಜಿಯ ಸ್ವಾವಲಂಬನೆಯ ಪಾಠಗಳನ್ನು ಅನುಸರಿಸಿದರೆ, ಕೇವಲ ಐಹಿಕಾಭ್ಯುದಯಾಕಾಂಕ್ಷಿಗಳಾಗದಿದ್ದರೆ ತಾನಾಗಿಯೇ ಭೂಮಿ ಶಾಂತಳಾಗುತ್ತಾಳೆ. ಇಲ್ಲವಾದರೆ ವಸಿಷ್ಠಾಶ್ರಮದ ಕಾಮಧೇನುವಿನ ಸಂತತಿ ನಂದಿನಿಯಂತೆ, ತನಗೆ ತಾನೇ ರಕ್ಷಿಸಿಕೊಳ್ಳುವ ಯತ್ನ ಮಾಡಿಕೊಳ್ಳಬಲ್ಲಳು. ಕೇಳಿದ್ದನ್ನು ನೀಡುವ ನಂದಿನಿ ಗೋವನ್ನು ಕಂಡು ಕೌಶಿಕ ರಾಜ ವಿಶ್ವಾಮಿತ್ರನು ‘ಇದು ಆಶ್ರಮದಲ್ಲೇಕೆ, ಅರಮನೆಗೆ ಸಲ್ಲಬೇಕು’ ಎಂದು ಬೇಡುತ್ತಾನೆ. ವಸಿಷ್ಠರು ಅವನಿಗೆ ಎಷ್ಟು ಹೇಳಿದರೂ ಪ್ರಯೋಜನವಾಗಲಿಲ್ಲ. ಕಡೆಗೆ ಗುರುಗಳು ‘ಅದು ಬಂದರೆ ಕರಕೊಂಡು ಹೋಗು’ ಎನ್ನುತ್ತಾರೆ. ವಿಶ್ವಾಮಿತ್ರ ತನ್ನ ದಂಡಾಳುಗಳಿಂದ ಹೊಡೆಸಿಕೊಂಡು ಹೋಗಲು ಯತ್ನಿಸಿದ. ಅದು ಬರಲಿಲ್ಲ. ರಾಜಭಟರ ಹಿಂಸೆ ತಾಳಲಾರದೆ ಅದು ಗುರುಗಳಲ್ಲಿ ಮೊರೆಯಿಟ್ಟು ‘ನಾನೀಗ ಏನು ಮಾಡಲಿ?’ ಎಂದು ಗೋಳಾಡಿತು. ಗುರುಗಳು ‘ತಾಯಿ ನಾನು ಅಸಹಾಯಕ ಜೋಗಿ, ವಿಶ್ವಾಮಿತ್ರ ಕ್ಷತ್ರಿಯ ರಾಜ, ಸಾಧ್ಯವಾದರೆ ನಿನ್ನನ್ನು ನೀನೇ ರಕ್ಷಿಸಿಕೊ’ಎಂದು ಅನುಮತಿಸಿದರು. ಆಗ ನಂದಿನಿಯ ದೇಹ ಕಂಪಿಸಿತು, ಆಯುಧ ಸನ್ನದ್ಧ ಭಟರು ಜನ್ಮ ತಾಳಿ ಬಂದು ವಿಶ್ವಾಮಿತ್ರನ ರಾಜಭಟರನ್ನು ದಿಕ್ಕಾಪಾಲಾಗಿ ಅಟ್ಟಿಬಿಟ್ಟರು. ನಂದಿನಿ ಶಾಂತಳಾದಳು.

ಇಷ್ಟೆಲ್ಲಾ ಬಿಡಿಸಿ ಹೇಳುವ ಕಾರಣ ವೇನೆಂದರೆ ಈಗ ಗ್ರಾಮ ಭಾರತಕ್ಕೆ ಮರಳಿ ಹೋಗಿರುವ ಮತ್ತು ಹೋಗುತ್ತಿರುವ ವಲಸೆ ಕಾರ್ಮಿಕರು ಇನ್ನು ಮುಂದೆಯೂ ಕೂಡ ನಗರಗಳ ಯಾವ ಆಮಿಷಗಳಿಗೂ ಬಲಿಯಾಗದೆ, ಬಂದ ದಾರಿಯ ಕಡೆಗೆ ತಿರುಗಿ ನೋಡದೆ, ‘ಅಳಿದೊಡಂ ಉಳಿದೊಡಂ’ ಸ್ವಂತ ಊರೇ ಗತಿ ಮತಿ ಎಂದು ಭಾವಿಸಿ ಅಲ್ಲೇ ನೆಲೆ ನಿಂತರೆ ಕ್ಷೇಮ. ಗಾಂಧೀಜಿ ಹೇಳಿದಂತೆ ಸ್ವಾತಂತ್ರವು ಆಕಾಶದಿಂದ ಇಳಿದು ಬರುವುದಿಲ್ಲ. ಅದು ಭೂಮಿಯಿಂದ ಉಕ್ಕಬೇಕು. ಇದಕ್ಕೆ ಬೇಕಾದ್ದು ಇಚ್ಛಾಶಕ್ತಿ. ಜತೆಗೆ ಸದ್ಯ ಬಡವರ ಅನ್ನ, ವಸ್ತ್ರ, ವಸತಿ, ಶಿಕ್ಷಣ, ಆರೋಗ್ಯ ನೋಡಿಕೊಳ್ಳುವುದು ಚುನಾಯಿತ ಸರಕಾರದ ಜವಾಬ್ದಾರಿ. ಆ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ತರಾಟೆಗೆ ತೆಗೆದುಕೊಂಡಿದೆ. ವಲಸಿಗರ ಬಿಕ್ಕಟ್ಟನ್ನು ಸರಕಾರ ತುರ್ತಾಗಿ ಬಗೆಹರಿಸಬೇಕು, ಇಲ್ಲವಾದರೆ ನಮ್ಮೀ ಭವ್ಯ ಭಾರತ ನಾಗರಿಕ ರಾಷ್ಟ್ರಗಳ ಎದುರು ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ. ಆದರೆ ಜನ ಯಾವ ಕಾರಣಕ್ಕೂ ಸರಕಾರದತ್ತ ಪ್ರತಿಯೊಂದಕ್ಕೂ ಕೈಯೊಡ್ಡಿ ನಿಲ್ಲಬಾರದು, ಹಂಗಿನಲ್ಲಿ ಬಾಳಬಾರದು, ಆತ್ಮಗೌರವ ಸರ್ವೋತ್ಕೃಷ್ಟ ಎಂದು ಬಾಳು ಸಾಗಿಸಬೇಕು. ಗಾಂಧೀಜಿ ಅನುಸರಿಸಿದ ಪಾಠ ಇದು.

ಕಡೆಯದಾಗಿ ಮೇಲೆ ಹೇಳಿದ ಹಿರಣ್ಯಾಕ್ಷನ ಹಾಗೂ ನಂದಿನಿಯ ಈ ಪ್ರಸಂಗಗಳು ಜಾಗತಿಕ ಪರಿಸ್ಥಿತಿಯನ್ನು ಚೆನ್ನಾಗಿಪ್ರತಿಮಿಸುತ್ತವೆ. ಭೂಮಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಹಂತದಲ್ಲಿದ್ದಾಳೆ. ನಮ್ಮ ಶರೀರವನ್ನು ಹೊಕ್ಕ ವಿಷಮ ಬ್ಯಾಕ್ಟೀರಿಯಾಗಳನ್ನು ಔಷಧಗಳಿಂದ ನಾವು ಹೇಗೆ ಕೊಲ್ಲುತ್ತೇವೋ ಹಾಗೆಯೇ ಭೂ ದೇವಿಗೆ ಘಾಸಿ ಮಾಡುತ್ತಿರುವ ಮನುಕುಲವನ್ನು ಸಂಹರಿಸಲು ಆಕೆ ಹೊರಟಿದ್ದಾಳೆ ಕೊರೋನ ಅದೃಶ್ಯ ರೂಪದಲ್ಲಿ. ಈ ಎರಡು ತಿಂಗಳ ಲಾಕ್‌ಡೌನ್ ಪರಿಣಾಮವಾಗಿ ಸದ್ಯ ಭೂ ವಲಯದಲ್ಲಿ ನಮ್ಮ ಆಘಾತಕಾರಿ ಚಟುವಟಿಕೆಗಳು ಸ್ಥಗಿತಗೊಂಡವು. ಈಗ ಉಂಟಾಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಮಾತಿನ ಅರ್ಥ ಹೊಳೆಯುತ್ತದೆ.

ಮೊದಲನೆಯದಾಗಿ, ಭೂಮಿ ಉಸಿರಾಡುತ್ತಿದೆ; ಸ್ವಚ್ಛವಾದ ಗಾಳಿ ಬೀಸುತ್ತಿದೆ. ರಸ್ತೆಗಳು ಬಿಕೋ ಎನ್ನುತ್ತಿವೆ; ರೈಲು, ಪ್ಲೇನು, ಬಸ್ ಹೊಗೆ ಚೆಲ್ಲದೆ ಭೂಮಿ ಆಕಾಶ ಎಲ್ಲವೂ ನಿರ್ಮಲವಾಗಿದೆ. ನದಿಗಳು ಶುದ್ಧವಾಗಿ ಕಲಕಲ ಹರಿಯುತ್ತಿವೆ. ಕಾಡಿನ ಬೀಡಿನಲ್ಲಿ ಮೃಗಪಕ್ಷಿ ಪ್ರಾಣಿಗಳು ನಿರ್ಭೀತಿಯಿಂದ ವಿಹರಿಸುತ್ತಿವೆ. ಕಾರ್ಖಾನೆಗಳು ತೆರೆದಿಲ್ಲ. ರಿಯಲ್‌ಎಸ್ಟೇಟ್ ದಂಧೆ ನೆಲಕಚ್ಚಿದೆ. ಜನರು ಗುಂಪು ಗೂಡುವಂತಿಲ್ಲ. ಆರು ಅಡಿ ದೇಹಾಂತರ ಕಾಪಾಡಿಕೊಳ್ಳುವುದು ಕರ್ತವ್ಯ. ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಗಂಟೆಗಳ ಧ್ವನಿ ಕೇಳುತ್ತಿಲ್ಲ. ಆದರೂ ಹಂತಕನ ದೂತರಿಗೆ ಕಿಂಚಿತ್ತು ದಯೆ ಇಲ್ಲ. ಎಲ್ಲಿ ಯಾವಾಗ ಯಾರಿಗೆ ಕೊರೋನ ಆಕ್ರಮಿಸುವುದೋ ಎಂಬ ಭೀತಿ ಬಡಿದ ಮುಖಗಳೇ. ಆ ಸಾಂಕ್ರಾಮಿಕ ವೈರಾಣುಗಳು ಸೆಳೆದೊಯ್ಯುವಾಗ ಗಂಡ ಹೆಂಡತಿ ಗೆಳೆಯ ಗೆಳತಿ, ಮಕ್ಕಳು ಮರಿ, ಆಸ್ತಿ ಪಾಸ್ತಿ ಎಲ್ಲ ಮೋಹ, ಎಲ್ಲ ಭ್ರಮೆ ಎಂಬ ವಿವೇಕ ಮೂಡುತ್ತಿದೆ. ಇದೆಲ್ಲವು ಭೂಮಿ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಲಕ್ಷಣಗಳಲ್ಲವೇ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News