ಸರ್ಕಾರಿ ಕಚೇರಿ ಮುಂದೆ ಮೃತಪಟ್ಟ ವ್ಯಕ್ತಿಯ ಶವ ಕಸದ ವಾಹನಕ್ಕೆ..!

Update: 2020-06-12 15:18 GMT

ಲಕ್ನೋ,ಜೂ.12: ಉತ್ತರ ಪ್ರದೇಶದ ಬಲರಾಮಪುರ ಜಿಲ್ಲೆಯ ಸರಕಾರಿ ಕಚೇರಿಯೊಂದರ ಹೊರಗೆ ಕುಸಿದು ಬಿದ್ದು ಮೃತಪಟ್ಟ ವ್ಯಕ್ತಿಯ ಶವವನ್ನು ಕಸದ ವ್ಯಾನ್‌ಗೆ ಹಾಕಿದ್ದಕ್ಕಾಗಿ ಓರ್ವ ಎಸ್‌ಐ ಸೇರಿದಂತೆ ಮೂವರು ಪೊಲೀಸರು ಮತ್ತು ನಾಲ್ವರು ಮುನ್ಸಿಪಲ್ ಉದ್ಯೋಗಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ವ್ಯಕ್ತಿಯು ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು ಎಂಬ ಭೀತಿಯಿಂದ ಸ್ಥಳದಲ್ಲಿದ್ದ ಆ್ಯಂಬುಲನ್ಸ್‌ನ ಸಿಬ್ಬಂದಿಗಳು ಶವವನ್ನು ಸಾಗಿಸಲು ನಿರಾಕರಿಸಿದ್ದರು ಎನ್ನಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವೀಡಿಯೊ ತುಣುಕುಗಳು ವೈರಲ್ ಆದ ಬಳಿಕ ಆಡಳಿತವು ಈ ಕ್ರಮವನ್ನು ಕೈಗೊಂಡಿದೆ.

ಜಿಲ್ಲೆಯ ಸರೆರ್ರಾ ಗ್ರಾಮದ ನಿವಾಸಿ ಮುಹಮ್ಮದ್ ಅನ್ವರ್ ಎನ್ನುವವರು ಸ್ಥಳೀಯ ಸರಕಾರಿ ಕಚೇರಿಗೆ ತೆರಳಿದ್ದಾಗ ಪ್ರವೇಶ ದ್ವಾರಗಳ ಬಳಿ ಕುಸಿದು ಬಿದ್ದು ಮೃತಪಟಿದ್ದರು.

ರಸ್ತೆಯಲ್ಲಿ ಕುಸಿದು ಬಿದ್ದಿರುವ ಅನ್ವರ್,ಅವರ ಬಳಿ ಬಿದ್ದಿದ್ದ ನೀರಿನ ಬಾಟ್ಲಿ,ಮೂವರು ಮುನ್ಸಿಪಲ್ ನೌಕರರು ಅವರನ್ನೆತ್ತಿ ಕಸದ ವ್ಯಾನಿನಲ್ಲಿ ಹಾಕುತ್ತಿರುವುದು ಮತ್ತು ಸಮೀಪದಲ್ಲಿಯೇ ಮೂವರು ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿ ನಿಂತಿರುವ ದೃಶ್ಯಗಳು ವೀಡಿಯೊ ತುಣುಕುಗಳಲ್ಲಿ ದಾಖಲಾಗಿವೆ.

ಇದೊಂದು ಅಮಾನವೀಯ ಘಟನೆ ಎಂದು ಬಣ್ಣಿಸಿದ ಬಲರಾಮಪುರ ಎಸ್‌ಪಿ ಡಿ.ಆರ್ ವರ್ಮಾ ಅವರು,ಅನ್ವರ್ ಸಾವಿನ ಸುದ್ದಿ ತಿಳಿಯುತ್ತಲೇ ಮುನ್ಸಿಪಲ್ ನೌಕರರ ತಂಡವೊಂದನ್ನು ಪೊಲೀಸರೊಂದಿಗೆ ಸ್ಥಳಕ್ಕೆ ರವಾನಿಸಲಾಗಿತ್ತು. ಆದರೆ ಅವರು ಮಾಡಿದ್ದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೃತವ್ಯಕ್ತಿ ಶಂಕಿತ ಕೊರೋನವೈರಸ್ ರೋಗಿಯಾಗಿರಬಹುದಾದ ಸಾಧ್ಯತೆಯಿದ್ದರೂ ಅವರು ಪಿಪಿಇ ಕಿಟ್‌ಗಳನ್ನೂ ಧರಿಸಿರಲಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News