ಕೊರೋನ ವೈರಸ್ : ದೇಶದ 69 ಭಯಾನಕ ಜಿಲ್ಲೆಗಳು ಇವು...
ಹೊಸದಿಲ್ಲಿ : ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದ 13 ರಾಜ್ಯಗಳ 69 ಜಿಲ್ಲೆಗಳು ಭಯಾನಕ ಎನಿಸಿವೆ. ಈ ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಪೈಕಿ ಸಾವಿನ ದರ 5%ಕ್ಕಿಂತಲೂ ಅಧಿಕ ಇದೆ. ಈ ಜಿಲ್ಲೆಗಳಲ್ಲಿ ಸಾವಿನ ದರ ರಾಷ್ಟ್ರೀಯ ಸರಾಸರಿ (2.90%)ಯ ಎರಡರಷ್ಟಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಆದಾಗ್ಯೂ ಹಲವು ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಕೊರೋನ ಸಾವಿನ ದರ ಭಾರತಲ್ಲಿ ಕಡಿಮೆ. ದೇಶದಲ್ಲಿ ಕೊರೋನ ಸೋಂಕು ಪೀಡಿತರ ಪೈಕಿ ಸಾವಿಗೀಡಾಗುತ್ತಿರುವವರ ಪ್ರಮಾಣ 2.90ರಷ್ಟಿದೆ ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗವೂಬಾ ವಿವರಿಸಿದ್ದಾರೆ. ಮೇ 18ರಿಂದ ಜೂನ್ 10ರ ಅವಧಿಯಲ್ಲಿ ಒಟ್ಟು ಪ್ರಕರಣಗಳ ಸಮಖ್ಯೆ 1,00,800ರಿಂದ 2,87,155ಕ್ಕೆ ಹೆಚ್ಚಿದ್ದು, ಸಾವಿನ ಸಂಖ್ಯೆ 3,156ರಿಂದ 8,108ಕ್ಕೇರಿದೆ ಎಂದು ಅವರು ಅಂಕಿ ಅಂಶ ನೀಡಿದರು.
ಶೇಕಡ 82ರಷ್ಟು ಸಾವು ಕೇವಲ ಮಹಾರಾಷ್ಟ್ರ, ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ಈ ಐದು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯೂ ಅಧಿಕ. ಮಧ್ಯಪ್ರದೇಶದ 21, ಉತ್ತರ ಪ್ರದೇಶದ 11, ರಾಜಸ್ಥಾನದ 5 ತೆಲಂಗಾಣದ ಮೂರು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ 5%ಕ್ಕಿಂತ ಅಧಿಕ ಇದೆ.