ಪ್ರಧಾನಿಗೆ ತಮ್ಮ ಮಾತುಗಳ ಪರಿಣಾಮದ ಬಗ್ಗೆ ಸದಾ ಎಚ್ಚರವಿರಬೇಕು: ಮನಮೋಹನ್ ಸಿಂಗ್

Update: 2020-06-22 07:42 GMT

ಹೊಸದಿಲ್ಲಿ,ಜೂ. 22: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾತುಗಳ ಪರಿಣಾಮಗಳ ಬಗ್ಗೆ ಸದಾ ಎಚ್ಚರವಿರಬೇಕು ಹಾಗೂ ಚೀನಾಕ್ಕೆ ತಮ್ಮ ಪದಗಳನ್ನು ತನ್ನ ಸ್ಥಾನದ ಸಮರ್ಥನೆಯಾಗಿ ಬಳಸಿಕೊಳ್ಳಲು ಅವಕಾಶ ನೀಡಬಾರದು. ಪ್ರಧಾನಿ ಬಳಸಿದ ಪದಗಳು ಎದುರಾಳಿಗೆ ಅಸ್ತ್ರವಾಗಿ ಸಿಗಬಾರದು ಎಂದು ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಹೇಳಿದ್ದಾರೆ.

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಿ ಪಡೆಗಳು ಒಳನುಸುಳುವಿಕೆ ಮಾಡಿಲ್ಲ ಎಂದು ಶುಕ್ರವಾರ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ನೀಡಿದ್ದ ಬಹುಚರ್ಚಿತ ಹೇಳಿಕೆಯನ್ನು ಉಲ್ಲೇಖಿಸಿ ಮನಮೋಹನ್ ಸಿಂಗ್ ಅವರು ಸೋಮವಾರ ಸಲಹೆ ನೀಡಿದರು.

ಕರ್ನಲ್ ಬಿ.ಸಂತೋಷ್ ಬಾಬು ಹಾಗೂ ನಮ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಲು ಸರಕಾರ ಶ್ರಮಿಸಬೇಕು.ನಮ್ಮ ದೇಶದ ಸಾರ್ವಭೌಮತೆ ಕಾಪಾಡಲು ನಮ್ಮ ಯೋಧರು ಮಾಡಿರುವ ಅಪ್ರತಿಮ ತ್ಯಾಗ ವ್ಯರ್ಥವಾಗಬಾರದು ಎಂದು ಲಡಾಖ್ ಗಡಿ ಬಿಕ್ಕಟ್ಟಿನ ಕುರಿತು ಇದೇ ಮೊದಲ ಬಾರಿ ಸಿಂಗ್ ಮೌನ ಮುರಿದಿದ್ದಾರೆ.

"ಈ ಕ್ಷಣ ನಾವು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲಬೇಕು. ಈ ಲಜ್ಜೆಗೆಟ್ಟ ಬೆದರಿಕೆಗೆ ನಮ್ಮ ಪ್ರತಿಕ್ರಿಯೆಯಲ್ಲಿ ಒಂದಾಗಬೇಕು. ತಪ್ಪು ಮಾಹಿತಿಯು ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ ಎಂದು ನಾವು ಸರಕಾರಕ್ಕೆ ನೆನಪಿಸುತ್ತೇವೆ. ಸುಳ್ಳು ಮಿತ್ರ ರಾಷ್ಟ್ರಗಳು ಸಮಾಧಾನಕರ. ಆದರೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸತ್ಯವನ್ನು ನಿಗ್ರಹಿಸಲು ಸಾಧ್ಯವಿಲ್ಲ'' ಎಂದು ಮಾಜಿ ಪ್ರಧಾನಿ ಹೇಳಿಕೆಯೊಂದರಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News