‘ವೈದ್ಯರು ನಮ್ಮ ಮಗನನ್ನು ಮುಟ್ಟುತ್ತಿಲ್ಲ’: ಮೃತ ಮಗುವನ್ನು ಎದೆಗಪ್ಪಿಕೊಂಡು ಅತ್ತ ಹೆತ್ತವರು

Update: 2020-06-29 11:28 GMT

ಕನೌಜ್: ಉತ್ತರ ಪ್ರದೇಶದ ಕನೌಜ್ ಪಟ್ಟಣದ ಒಂದು ಆಸ್ಪತ್ರೆಯಲ್ಲಿ ದಂಪತಿಯೊಂದು ತಮ್ಮ ಒಂದು ವರ್ಷದ ಮಗುವಿನ ಮೃತದೇಹವನ್ನು ಎದೆಗವಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ಮನಕಲಕುವ ವೀಡಿಯೋವೊಂದು ವೈರಲ್ ಆಗಿದ್ದು, ಆಕ್ರೋಶ ಸೃಷ್ಟಿಸಿದೆ.

ಮಗು ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂಬ ಆರೋಪ ಕೇಳಿ ಬಂದಿರುವ ನಡುವೆಯೇ ಹಿರಿಯ ವೈದ್ಯಾಧಿಕಾರಿಗಳು ಈ ಆರೋಪವನ್ನು ನಿರಾಕರಿಸಿದ್ದಾರೆ.

ಜ್ವರ ಹಾಗೂ ಕುತ್ತಿಗೆಯ ಉರಿಯೂತ ಹೊಂದಿದ್ದ ಮಗುವನ್ನು ದಂಪತಿ ಆಸ್ಪತ್ರೆಗೆ ಕರೆ ತಂದಿದ್ದರೂ ಮಗುವನ್ನು ಮುಟ್ಟಲು ನಿರಾಕರಿಸಿದ್ದ ವೈದ್ಯರು ಮಗುವನ್ನು ದೊಡ್ಡ ಸರಕಾರಿ ಆಸ್ಪತ್ರೆಗಳಿರುವ ಕಾನ್ಪುರ್‍ ಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.

ಸಂಪೂರ್ಣ ಕಂಗಾಲಾದ  ಪ್ರೇಮ್ ಚಂದ್ ಹಾಗೂ ಆಶಾದೇವಿ ದಂಪತಿ ಮಗುವನ್ನು ಎತ್ತಿಕೊಂಡು ಅಳುತ್ತಿರುವ ವೀಡಿಯೋವನ್ನು ಹಲವರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದರು.

ಇನ್ನೊಂದು ವೀಡಿಯೋದಲ್ಲಿ ವೈದ್ಯರೊಬ್ಬರು ಎಮರ್ಜನ್ಸಿ ವಾರ್ಡ್‍ ನಲ್ಲಿ ಪರೀಕ್ಷಿಸುತ್ತಿರುವುದು ಕಾಣಿಸುತ್ತದೆ. ಹಲವರು ವೀಡಿಯೋ ತೆಗೆಯುತ್ತಿದ್ದಾರೆಂದು ಅರಿವಿಗೆ ಬರುತ್ತಲೇ ಮಗುವನ್ನು ವೈದ್ಯರು ಪರೀಕ್ಷಿಸಿದ್ದರು. ಆದರೆ ಅದಕ್ಕಿಂತ ಮುನ್ನ ಮಗುವನ್ನು ಮುಟ್ಟಲು ನಿರಾಕರಿಸಿದ್ದರು ಎಂದು ಪ್ರೇ ಚಂದ್ ಹೇಳುತ್ತಾನೆ. “ಕೊನೆಗೆ ನಮ್ಮನ್ನು 30-40 ನಿಮಿಷ ಕಾಯಿಸಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿದರೂ  ಆತ ಅದಾಗಲೇ ಮೃತಪಟ್ಟಿದ್ದ'' ಎಂದು ಆಶಾದೇವಿ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುತ್ತಾಳೆ.

ಆದರೆ ಆಸ್ಪತ್ರೆ ಅಧಿಕಾರಿಗಳು ಆರೋಪ ನಿರಾಕರಿಸಿದ್ದಾರೆ. ಮಗುವನ್ನು ರವಿವಾರ ಸಂಜೆ 4.15ಕ್ಕೆ ಕರೆದುಕೊಂಡು ಬಂದಾಗ ಎಮರ್ಜೆನ್ಸಿ ವಾರ್ಡ್‍ಗೆ ದಾಖಲಿಸಲಾಗಿತ್ತು. ಪ್ರಕರಣ ಗಂಭೀರವಾಗಿದ್ದರಿಂದ ಮಕ್ಕಳ ತಜ್ಞರನ್ನು ಕರೆಸಲಾಗಿತ್ತು. ಆದರೆ 30 ನಿಮಿಷಗಳೊಗಾಗಿ ಮಗು ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷ್ಯವೇನೂ ಇಲ್ಲ ಎಂದು  ಹಿರಿಯ ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News