ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರಿ ಅವ್ಯವಹಾರದ ಆರೋಪ

Update: 2020-07-02 04:19 GMT

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ 805 ಕೋಟಿ ರೂ. ಮೊತ್ತದ ಬೃಹತ್ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ನಿರ್ವಹಿಸುವ ಜಿವಿಕೆ ಸಮೂಹ ಕಂಪನಿಗಳ ಅಧ್ಯಕ್ಷ ಜಿ.ವೆಂಕಟಕೃಷ್ಣ ರೆಡ್ಡಿ ಮತ್ತು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಗೂ ಇತರ ಒಂಬತ್ತು ಖಾಸಗಿ ಕಂಪನಿಗಳ ಹೆಸರನ್ನೂ ಉಲ್ಲೇಖಿಸಲಾಗಿದೆ. ಸುಮಾರು 805 ಕೋಟಿ ರೂಪಾಯಿಗಳನ್ನು ವಾಮಮಾರ್ಗದಲ್ಲಿ ಗಳಿಸಿದ ಆರೋಪ ಹೊರಿಸಲಾಗಿದ್ದು, ಇದರಿಂದಾಗಿ ಸರ್ಕಾರಿ ಬೊಕ್ಕಸಕ್ಕೆ 2012-18ರ ಅವಧಿಯಲ್ಲಿ ನಷ್ಟ ಉಂಟಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಜಿವಿಕೆ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್, ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕೆಲ ವಿದೇಶಿ ಕಂಪನಿಗಳ ಸಹಭಾಗಿತ್ವದಲ್ಲಿ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ರಚಿಸಿವೆ. ಜಿವಿಕೆ 50.5ರಷ್ಟು ಷೇರುಗಳನ್ನು ಹೊಂದಿದ್ದು, ಎಎಐ 26% ಷೇರು ಹೊಂದಿದೆ ಎಂಧು ಎಫ್‌ಐಆರ್ ವಿವರಿಸಿದೆ.

ಎಐಎಎಲ್ ಅಧ್ಯಕ್ಷ ಜಿವಿಕೆ ರೆಡ್ಡಿ ಮತ್ತು ಎಂಡಿ ಸಂಜೀವ್ ರೆಡ್ಡಿಯವರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 2006ರಲ್ಲಿ ಎಂಐಎಎಲ್ ಜತೆಗೆ ಎಎಐ ಒಪ್ಪಂದ ಮಾಡಿಕೊಂಡಿದ್ದು, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಎಂಐಎಎಲ್‌ಗೆ ವಹಿಸಲಾಗಿತ್ತು. ಎಂಐಎಎಲ್ ತನ್ನ ಆದಾಯದ ಶೇ. 38.7ನ್ನು ಎಎಐಗೆ ವಾರ್ಷಿಕ ಶುಲ್ಕವಾಗಿ ಪಾವತಿಸಲು ಒಪ್ಪಂದವಾಗಿತ್ತು. ಉಳಿದ ಹಣವನ್ನು ಆಧುನೀಕರಣ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬಳಸಲು ಅವಕಾಶ ಇತ್ತು.

ಒಂಬತ್ತು ಇತರ ಖಾಸಗಿ ಕಂಪನಿಗಳ ಜತೆ ನಕಲಿ ಕಾಮಗಾರಿ ಗುತ್ತಿಗೆ ಮಾಡಿಕೊಂಡು 310 ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಫ್‌ಐಆರ್ ವಿವರಿಸಿದೆ. ವಿಮಾನ ನಿಲ್ದಾಣಕ್ಕೆ ಸೇರಿದ 200 ಎಕರೆ ಅಭಿವೃದ್ಧಿಪಡಿಸದ ಭೂಮಿಯಲ್ಲಿ 2017-18ರ ಅವಧಿಯಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಪಡಿಸಲಾಗಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News