ಕೋವಿಡ್-19 ಗೆ ದೇಶಾದ್ಯಂತ ಒಂದೇ ದಿನ 608 ಸಾವು, 24 ಸಾವಿರ ಮಂದಿಗೆ ಸೋಂಕು ದೃಢ

Update: 2020-07-05 03:44 GMT

ಹೊಸದಿಲ್ಲಿ: ದಿನವೊಂದರಲ್ಲಿ ಗರಿಷ್ಠ ಪ್ರಕರಣಗಳು ವರದಿಯಾದ ಮತ್ತೊಂದು ದಾಖಲೆ ಶನಿವಾರ ನಿರ್ಮಾಣವಾಗಿದೆ. ದೇಶಾದ್ಯಂತ ಒಟ್ಟು 24,201 ಕೋವಿಡ್-19 ಸೋಂಕು ಪ್ರಕರಣಗಳು ಸೇರ್ಪಡೆಯಾಗಿದ್ದು, 608 ಮಂದಿ ಒಂದೇ ದಿನ ಬಲಿಯಾಗಿದ್ದಾರೆ.

ಇದರೊಂದಿಗೆ ಸತತ ಮೂರನೇ ದಿನವೂ ಹೊಸ ಪ್ರಕರಣಗಳ ಏರಿಕೆ ದಾಖಲಾಗಿದೆ. ಕಳೆದ ಗುರುವಾರ 22 ಸಾವಿರ, ಶುಕ್ರವಾರ 23,500 ಪ್ರಕರಣಗಳು ದೃಢಪಟ್ಟಿದ್ದವು. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,72,968ಕ್ಕೇರಿದ್ದು, ರವಿವಾರ ರಷ್ಯಾದ ಒಟ್ಟು ಸಂಖ್ಯೆಯನ್ನು ಮೀರುವ ನಿರೀಕ್ಷೆ ಇದೆ. ಪ್ರಸ್ತುತ ರಷ್ಯಾದಲ್ಲಿ 6,74,515 ಪ್ರಕರಣಗಳಿದ್ದು, ವಿಶ್ವದಲ್ಲೇ ಗರಿಷ್ಠ ಸೋಂಕು ಪ್ರಕರಣ ದಾಖಲಾದ ದೇಶಗಳ ಪೈಕಿ ರಷ್ಯಾ ಇದೀಗ ಮೂರನೇ ಸ್ಥಾನದಲ್ಲಿದೆ. ರಷ್ಯಾವನ್ನು ಭಾರತ ಹಿಂದಿಕ್ಕಿದಲ್ಲಿ ಅಮೆರಿಕ (29.1 ಲಕ್ಷ) ಮತ್ತು ಬ್ರೆಜಿಲ್ (15.5 ಲಕ್ಷ) ದೇಶಗಳ ಬಳಿಕ ಮೂರನೇ ಸ್ಥಾನಕ್ಕೇರಲಿದೆ.

ಶನಿವಾರ ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಬಾರಿಗೆ ಏಳು ಸಾವಿರಕ್ಕೂ ಅಧಿಕ (7074) ಪ್ರಕರಣಗಳು ವರದಿಯಾಗಿವೆ. ಕರ್ನಾಟಕ (1839), ಬಂಗಾಳ (743), ಗುಜರಾತ್ (712), ರಾಜಸ್ಥಾನ (480) ಮತ್ತು ಕೇರಳ (240) ಕೂಡಾ ಗರಿಷ್ಠ ಹೊಸ ಪ್ರಕರಣಗಳ ದಾಖಲೆ ನಿರ್ಮಿಸಿವೆ. ಪುಟ್ಟ ರಾಜ್ಯ ಗೋವಾದಲ್ಲೂ ಒಂದೇ ದಿನ 108 ಪ್ರಕರಣಗಳು ವರದಿಯಾಗಿವೆ.

ದೈನಿಕ ಸಾವಿನ ಸಂಖ್ಯೆ ಕೂಡಾ ಮೊದಲ ಬಾರಿಗೆ 600ರ ಗಡಿ ದಾಟಿದೆ. ಜೂನ್ 16ರಂದು ಮಾತ್ರ ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಹಿಂದಿನ ದಿನಗಳಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳನ್ನು ದೃಢಪಡಿಸಿದ ಕಾರಣದಿಂದ 2003 ಸಾವು ಸೇರ್ಪಡೆಯಾಗಿತ್ತು. ಈ ಎರಡು ರಾಜ್ಯಗಳಲ್ಲಿ ಶನಿವಾರವೂ ಗರಿಷ್ಠ ಸಾವು ಸಂಭವಿಸಿದ್ದು, ಮಹಾರಾಷ್ಟ್ರದಿಂದ 295 ಮತ್ತು ದೆಹಲಿಯಿಂದ 81 ಸಾವು ವರದಿಯಾಗಿದೆ. ತಮಿಳುನಾಡು (65), ಕರ್ನಾಟಕ (42), ಉತ್ತರ ಪ್ರದೇಶ (24) ಗುಜರಾತ್ (21) ಮತ್ತು ಬಂಗಾಳ (19)ದಲ್ಲೂ ಹೆಚ್ಚಿನ ಸಾವು ಸಂಭವಿಸಿದೆ.

ದಕ್ಷಿಣ ಭಾರತದಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳು ಬಂಗಾಳವನ್ನು ಎಂಟನೇ ಸ್ಥಾನಕ್ಕೆ ತಳ್ಳಿ ಕ್ರಮವಾಗಿ 6 ಮತ್ತು 7ನೇ ಸ್ಥಾನಕ್ಕೆ ಏರಿವೆ. ಕರ್ನಾಟಕದಲ್ಲಿ ಶನಿವಾರ ಒಟ್ಟು ಪ್ರಕರಣಗಳ ಸಂಖ್ಯೆ 21 ಸಾವಿರವನ್ನು ದಾಟಿದೆ. ಒಟ್ಟು 21549 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಒಂದೇ ದಿನ 1172 ಪ್ರಕರಣಗಳು ದೃಢಪಟ್ಟಿವೆ.

ತಮಿಳುನಾಡಿನಲ್ಲಿ 4280 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 44956ಕ್ಕೇರಿದೆ. 65 ಸಾವು ಶನಿವಾರ ಸಂಭವಿಸಿದ್ದು, ಒಟ್ಟು 1450 ಸೋಂಕಿತರು ಮೃತಪಟ್ಟಂತಾಗಿದೆ. ಚೆನ್ನೈ ನಗರವೊಂದರಲ್ಲೇ 1033 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News