ಪ್ರಧಾನಿಗಳೇ.. ಚೀನಾ ಅತಿಕ್ರಮಣದ ಬಗ್ಗೆ ಸತ್ಯ ಹೇಳಿ: ಕಪಿಲ್ ಸಿಬಲ್

Update: 2020-07-05 06:04 GMT

ಹೊಸದಿಲ್ಲಿ: ಗಲ್ವಾನ್ ಕಣಿವೆ ಪ್ರದೇಶದ ಪಾಂಗಾಂಗ್ ಸರೋವರ ಮತ್ತು ಬಿಸಿನೀರು ಬುಗ್ಗೆ ಪ್ರದೇಶ, ಗಸ್ತು ಕೇಂದ್ರ 14ರ ಬಳಿ ಚೀನಾ ಭಾರತೀಯ ಭೂಭಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಸತ್ಯ ಹೇಳಿ ಎಂದು ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ. ಚೀನಾ ಅತಿಕ್ರಮಣಕ್ಕೆ ಸಂಬಂಧಿಸಿದ ಉಪಗ್ರಹ ಚಿತ್ರಗಳನ್ನೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಲಡಾಖ್‍ನ ಭೂಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿರುವ ಬಗ್ಗೆ ಬಿಜೆಪಿ ಪಾಲಿಕೆ ಸದಸ್ಯರ ನಿಯೋಗ ಫೆಬ್ರವರಿ 20ರಂದು ಪ್ರಧಾನಿಗೆ ಮನವಿ ಸಲ್ಲಿಸಿರುವುದು ನಿಜವೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ, ಈ ಆರೋಪದ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್‍ಗೆ ಭೇಟಿ ನೀಡಿದ ಬೆನ್ನಲ್ಲೇ ವಾಗ್ದಾಳಿ ನಡೆಸಿದ ಸಿಬಲ್, “ಮೋದಿ ಎಲ್ಲೂ ಏಕೆ ಚೀನಾದ ಹೆಸರು ಉಲ್ಲೇಖಿಸಿಲ್ಲ ಮತ್ತು ಭಾರತೀಯ ಭೂಭಾಗವನ್ನು ಚೀನಾ ಅತಿಕ್ರಮಿಸಿಕೊಂಡಿದೆ ಎನ್ನುವುದನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ. ಇದು ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾದ ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದ ಭಾರತದ ವಾದವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.

“ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಚೀನಾದ ಮೇಲೆ ಕೆಂಗಣ್ಣು ಬೀರುವುದು ನಂತರ. ಮೊದಲು ದೇಶಕ್ಕೆ ಸತ್ಯಹೇಳಿ” ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News