ಬೆಯರ್ನ್ ಮ್ಯೂನಿಚ್ ಗೆ ಜರ್ಮನ್ ಕಪ್

Update: 2020-07-05 18:28 GMT

ಬರ್ಲಿನ್, ಜು.5: ಬೆಯರ್ನ್ ಮ್ಯೂನಿಚ್ ತಂಡ ಶನಿವಾರ ಬೇಯರ್ ಲಿವರ್ಕುಸೆನ್ ತಂಡವನ್ನು ಸೋಲಿಸುವ ಮೂಲಕ ತನ್ನ 20ನೇ ಜರ್ಮನ್ ಕಪ್ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಕೊರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆದ ದೇಶದ ಮೊದಲ ಕಪ್ ಫೈನಲ್‌ನಲ್ಲಿ ಬೇಯರ್ ಲಿವರ್ಕುಸೆನ್ ತಂಡವನ್ನು 4-2 ಗೋಲುಗಳಿಂದ ಸೋಲಿಸುವ ಮೂಲಕ ತನ್ನ ದೇಶೀಯ ಪ್ರಾಬಲ್ಯವನ್ನು ತೋರಿಸಿತು.

 ‘‘ದೊಡ್ಡ ಕ್ರೀಡಾಂಗಣದಲ್ಲಿ ಕಪ್ ಫೈನಲ್ ಅಭಿಮಾನಿಗಳು ಇಲ್ಲದ ಕಾರಣದಿಂದಾಗಿ ಸ್ವಲ್ಪ ದುಃಖವಾಗಿದೆ’’ಎಂದು ಬೇಯರ್ನ್ ಫಾರ್ವರ್ಡ್ ಥಾಮಸ್ ಮುಲ್ಲರ್ ಹೇಳಿದರು.

 ‘‘ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾನು ಅದರ ಬಗ್ಗೆ ಯೋಚಿಸುತ್ತಿದ್ದೆ. ಇದು ಸ್ವಲ್ಪ ನೋವುಂಟು ಮಾಡಿದೆೆ’’ ಎಂದರು.

ಈಗಾಗಲೇ ತನ್ನ ಎಂಟನೇ ನೇರ ಬಂಡೆಸೀಗಾ ಪ್ರಶಸ್ತಿಯನ್ನು ಗೆದ್ದಿರುವ ಬೆಯರ್ನ್ ಈ ಋತುವಿನಲ್ಲಿ 50 ಗೋಲುಗಳನ್ನು ಗಳಿಸಿದೆ.

    ಡೇವಿಡ್ ಅಲಬಾ ಮತ್ತು ಸೆರ್ಜ್ ಗ್ನಾಬ್ರಿ ತಲಾ 1ಹಾಗೂ ರಾಬರ್ಟ್ ಲೆವಾಂಡೋವಿಸ್ಕಿ 2 ಗೋಲು ಬಾರಿಸಿ ಜರ್ಮನಿ ಕಪ್ ಗೆಲ್ಲಲು ಬೆಯರ್ನ್ ಮ್ಯೂನಿಚ್‌ಗೆ ನೆರವಾದರು.

ಬೆಯರ್ನ್‌ಗೆ ಎರಡನೇ ನೇರ ಲೀಗ್ ಮತ್ತು ಎರಡನೇ ಕಪ್ ಆಗಿದ್ದು, ಒಟ್ಟಾರೆ 13ನೇ ಪ್ರಶಸ್ತಿ. ಈಗ ಬೆಯರ್ನ್ ಆಗಸ್ಟ್‌ನಲ್ಲಿ ಮರುಸಂಘಟಿತ ಚಾಂಪಿಯನ್ಸ್ ಲೀಗ್ ಮೇಲೆ ಕಣ್ಣಿಟ್ಟಿದೆ. 1993ರಲ್ಲಿ ಕೊನೆಯ ಬಾರಿ ಲಿವರ್ಕುಸೆನ್ ಪ್ರಶಸ್ತಿ ಜಯಿಸಿತ್ತು. ಆ ಬಳಿಕ ಯಾವುದೇ ಪ್ರಶಸ್ತಿಯನ್ನು ಜಯಿಸಿಲ್ಲ. ಇದು ವಿಭಿನ್ನ ಟೂರ್ನಿಗಳಲ್ಲಿ ಒಂಭತ್ತು ಬಾರಿ ರನ್ನರ್-ಅಪ್ ಸ್ಥಾನವನ್ನು ಪಡೆದಿತ್ತು. ಜರ್ಮನಿ ಕಪ್ ಫೈನಲ್ ವೇಳೆ ಬೆಂಬಲಿಗರನ್ನು 75,000 ಆಸನಗಳ ಸಾಮರ್ಥ್ಯದ ಒಲಿಂಪಿಯಾ ಸ್ಟಾಡಿಯನ್‌ನಿಂದ ಹೊರಗಿಡಲಾಗಿತ್ತು. ಜರ್ಮನಿಯ ಕೋಚ್ ಜೊವಾಕಿಮ್ ಲೊವ್ ಸೇರಿದಂತೆ 691 ಮಂದಿಗೆ ಮಾತ್ರ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.

 16ನೇ ನಿಮಿಷದಲ್ಲಿ ಮೇಲಿನ ಬಲ ಮೂಲೆಯಲ್ಲಿ ಅದ್ಭುತ ಫ್ರೀ ಕಿಕ್‌ನಿಂದ ಅಲಬಾ ಡೆಡ್ಲಾಕ್ ಅನ್ನು ಮುರಿದರು. ಬೆಯರ್ನ್ ಗೋಲು ಖಾತೆಯನ್ನು ತೆರೆಯಿತು.

ಗ್ನಾಬ್ರಿ 24ನೇ ನಿಮಿಷದಲ್ಲಿ ಎರಡನೇ ಗೋಲು ಹೊಡೆದರು. ವಿರಾಮದ ಸಮಯದಲ್ಲಿ ಪೀಟರ್ ಬಾಸ್ಜ್ ಎರಡು ಬದಲಾವಣೆಗಳೊಂದಿಗೆ ಪ್ರತಿಕ್ರಿಯಿಸಿದರು. ಬದಲಿ ಆಟಗಾರ ಕೆವಿನ್ ವೊಲ್ಯಾಂಡ್ 57ನೇ ನಿಮಿಷದಲ್ಲಿ ಲಿವರ್ಕುಸೆನ್ ಪರ ಗೋಲು ಮಾಡಬೇಕಾಗಿತ್ತು, ಆದರೆ ಅವರ ಪ್ರಯತ್ನ ವಿಫಲಗೊಂಡಿತು. 58ನೇ ನಿಮಿಷದಲ್ಲಿ ರಾಬರ್ಟ್ ಲೆವಾಂಡೋವಿಸ್ಕಿ ಗೋಲು ಜಮೆ ಮಾಡಿದರು. ಬೆಯರ್ನ್ 3-0 ಮುನ್ನಡೆಯೊಂದಿಗೆ ಗೆಲುವಿನತ್ತ ಹೆಜ್ಜೆ ಇರಿಸಿತ್ತು.

63ನೇ ನಿಮಿಷದಲ್ಲಿ ಸ್ವೆನ್ ಬೆಂಡೆರ್ ಲಿವರ್ಕುಸೆನ್ ಪರ ಮೊದಲ ಗೋಲು ಜಮೆ ಮಾಡಿದರು. ರಾಬರ್ಟ್ ಲಿವರ್ಕುಸೆನ್ 89ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿ ಬೆಯರ್ನ್ ಖಾತೆಗೆ 4-1 ಮುನ್ನಡೆಗೆ ನೆರವಾದರು. ಇದು ಈ ಋತುವಿನ ಎಲ್ಲಾ ಸ್ಪರ್ಧೆಗಳಲ್ಲಿ ಅವರ 51ನೇ ಗೋಲು ಆಗಿತ್ತು. ಲಿವರ್ಕುಸೆನ್ ಸ್ಟಾರ್ ಕೈ ಹ್ಯಾವರ್ಟ್ಜ್ ಕೊನೆಯ ನಿಮಿಷದಲ್ಲಿ (90+5) ಪೆನಾಲ್ಟಿ ಗೋಲು ಜಮೆ ಮಾಡಿದರು. ಅಷ್ಟು ಹೊತ್ತಿಗೆ ವೇಳೆ ಮಿಂಚಿತ್ತು ಬೆಯರ್ನ್ ಮ್ಯೂನಿಚ್4-2 ಗೋಲುಗಳಿಂದ ಗೆಲುವಿನ ದಡ ಸೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News