ದ್ವೇಷ ಭಾಷಣ ಮಾಡಿ ಹಲವಾರು ಬಾರಿ ಜೈಲಿಗೆ ಹೋಗಿರುವವನ ಭದ್ರತೆಗೆ 15 ಪೊಲೀಸರು!

Update: 2020-07-09 11:46 GMT

ಅಮೃತಸರ್: ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಹಾಗೂ ಜಾತಿ ನಿಂದನೆ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಶಿವ ಸೇನಾ (ತಕ್ಸಾಲಿ) ಇದರ ಸ್ವಘೋಷಿತ ನಾಯಕ ಸುಧೀರ್ ಸೂರಿ ವಿರುದ್ಧ ಕನಿಷ್ಠ ಐದು ಪ್ರಕರಣಗಳಿವೆ. ಆತನನ್ನು ಹಲವಾರು ಬಾರಿ ಬಂಧಿಸಲಾಗಿದ್ದು, ಕೆಲ ಕಾಲ ಆತ ಜೈಲಿನಲ್ಲೂ ಕಾಲ ಕಳೆದಿದ್ದಾನೆ. ಆದರೆ ಆತನಿಗೆ ಸರಕಾರದಿಂದ ನೀಡಲಾದಸ ಭದ್ರತೆ ಎಂತಹವರಿಗೂ ಅಚ್ಚರಿ ಮೂಡಿಸಬಹುದು.

ಸುಧೀರ್ ಸುರಿಯ ಭದ್ರತೆಗೆ 15 ಮಂದಿ ಪೊಲೀಸರಿದ್ದಾರೆ. ಪಂಜಾಬ್ ರಾಜ್ಯದ ಸಚಿವರುಗಳಿಗೂ ಅಷ್ಟು ಭದ್ರತೆಯಿಲ್ಲ. ಅವರಲ್ಲಿ ಎಂಟು ಗನ್ ಮೆನ್, ಐವರು ಕಾನ್ ಸ್ಟೇಬಲ್‍ ಗಳು ಹಾಗೂ ಇಬ್ಬರು ಚಾಲಕರಿದ್ದಾರೆ. ಆದರೂ ಆತನಿಗೆ ಒದಗಿಸಲಾದ ಈ ಭದ್ರತೆಯಿಂದ ಖುಷಿಯಿಲ್ಲ. “ಅವರಿಗೆ ಒದಗಿಸಲಾದ ಭದ್ರತೆಯಿಂದ ಸಮಾಧಾನವಿಲ್ಲ. ಅವರಿಗೆ ಕೇಂದ್ರ ಸರಕಾರದಿಂದ ಭದ್ರತೆಯೊದಗಿಸಬೇಕೆಂದು ಕೋರಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿಗೆ ಅಪೀಲು ಸಲ್ಲಿಸಲಾಗಿದೆ'' ಎಂದು ಸುರಿಯ ವಕ್ತಾರ ರಂಜಿತ್ ಸಿಂಗ್ ಹೇಳಿದ್ದಾರೆ.

“ಸುರಿ ಉಗ್ರವಾದಿಗಳ ವಿರುದ್ಧ ಹೊರಾಡುತ್ತಿರುವುದರಿಂದ ಅವರಿಗೆ ಹೆಚ್ಚಿನ ಭದ್ರತೆ ಬೇಕು. ಅಮೆರಿಕಾದ ನಿಷೇಧಿತ ತೀವ್ರಗಾಮಿ ಸಂಘಟನೆ ಸಿಖ್ ಫಾರ್ ಜಸ್ಟಿಸ್  ಇದರ ಕಾನೂನು ಸಲಹೆಗಾರ ಗುರ್ಪತ್ವಂತ್ ಸಿಂಗ್ ಪನ್ನು ವಿರುದ್ಧ ದೂರು ನೀಡಿದವರಲ್ಲಿ ಸುರಿ ಮೊದಲಿಗರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ. ಉಗ್ರವಾದಿಗಳು ಸುರಿಯನ್ನು ಟಾರ್ಗೆಟ್ ಮಾಡಬಹುದು. ಅವರು ಬಹಳ ಸಮಯದಿಂದಲೂ ಉಗ್ರರ ವಿರುದ್ಧ ಮಾತನಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಪಂಜಾಬ್ ಪೊಲೀಸರು ಭದ್ರತೆ ಒದಗಿಸಿದ್ದಾರೆ'' ಎಂದು ರಂಜಿತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News