Breaking News: ರಾಜಸ್ಥಾನ ಡಿಸಿಎಂ ಹುದ್ದೆಯಿಂದ ಸಚಿನ್ ಪೈಲಟ್ ವಜಾ

Update: 2020-07-14 17:52 GMT

ಹೊಸದಿಲ್ಲಿ, ಜು.14: ಪಕ್ಷದ ಆದೇಶವನ್ನು ಉಲ್ಲಂಘಿಸಿರುವ ಸಚಿನ್ ಪೈಲಟ್ ರನ್ನು ಮಂಗಳವಾರ ರಾಜಸ್ತಾನದ ಉಪಮುಖ್ಯಮಂತ್ರಿ ಹುದ್ದೆ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.

ಸೋಮವಾರ ವಿಪ್ ಜಾರಿಯ ಹೊರತಾಗಿಯೂ ಸಚಿನ್ ಪೈಲಟ್ ಮತ್ತವರ ಬೆಂಬಲಿಗರು ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಮಂಗಳವಾರ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಆದರೆ ಮಂಗಳವಾರದ ಸಭೆಗೂ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಸಚಿನ್ ಪೈಲಟ್ ಗೆ ನಿಷ್ಟರಾಗಿರುವ ಇಬ್ಬರು ಸಚಿವರನ್ನೂ ಸಂಪುಟದಿಂದ ಉಚ್ಛಾಟಿಸಲಾಗಿದೆ. ತಮ್ಮ ವಿರುದ್ಧದ ಶಿಸ್ತು ಕ್ರಮಕ್ಕೆ ಪ್ರತಿಕ್ರಿಯಿಸಿರುವ ಪೈಲಟ್, ‘ಸತ್ಯಕ್ಕೆ ತೊಂದರೆ ಕೊಡಬಹುದು. ಆದರೆ ಅದನ್ನು ಸೋಲಿಸಲು ಆಗದು’ ಎಂದಿದ್ದಾರೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೊತಾಸ್ರರನ್ನು ನೇಮಕಗೊಳಿಸಲಾಗಿದೆ.

ಮಂಗಳವಾರ ನಡೆದ ಶಾಸಕಾಂಗ ಪಕ್ಷ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲಾ, ಬಿಜೆಪಿಯು ಸಚಿನ್ ಹಾಗೂ ಇತರ ಕಾಂಗ್ರೆಸ್ ಮುಖಂಡರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಚಿನ್ ಜತೆ ಹಲವು ಬಾರಿ ಮಾತನಾಡಿದ್ದು ಅವರ ಅಸಮಾಧಾನವನ್ನು ದೂರಗೊಳಿಸುವ ಭರವಸೆ ನೀಡಿದ್ದೇವೆ. ಸಚಿನ್ ಗೆ ನೀಡಿದಷ್ಟನ್ನು ಇತರ ಯಾವುದೇ ಯುವನಾಯಕರಿಗೆ ನೀಡಿಲ್ಲ. ಅವರಿಗೆ ರಾಜಕೀಯದಲ್ಲಿ ಅಲ್ಪ ಸಮಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ ಎಂದವರು ಹೇಳಿದರು.

ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಮೇಶ್ ಮೀನಾರನ್ನು ಸಚಿವ ಹುದ್ದೆಯಿಂದ ವಜಾಗೊಳಿಸಲಾಗಿದ್ದರೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕೇಶ್ ಭಾಕರ್ ರನ್ನು ವಜಾಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಈ ಮಧ್ಯೆ, ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ ಮತ್ತು ಮಾಜಿ ಸ್ಪೀಕರ್ ದೀಪೇಂದರ್ ಶೆಖಾವತ್, ತಾವು ಯಾವುದೇ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ. ಆದರೆ ಸಚಿನ್ ಪೈಲಟ್ ರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದನ್ನು ಒಪ್ಪಲಾಗದು ಎಂದಿದ್ದಾರೆ. ಸಚಿನ್ ಪೈಲಟ್ ನಾಯಕತ್ವದಡಿ ರಾಜಸ್ತಾನದಲ್ಲಿ ಪಕ್ಷವನ್ನು ಬಲಗೊಳಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಳೆದ 6 ವರ್ಷಗಳಿಂದ ಸತತವಾಗಿ ಪ್ರಯತ್ನಿಸಿದ್ದೇವೆ. ಪಕ್ಷದ ಹಿರಿಯ ಸದಸ್ಯರಾಗಿರುವ ನಮ್ಮ ಸ್ವಾಭಿಮಾನವನ್ನು ಮರು ಸ್ಥಾಪಿಸುವುದಷ್ಟೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News