ಉತ್ತರ ಪ್ರದೇಶ: ಒಂದು ಪ್ರದೇಶದ ಎಲ್ಲಾ ಮನೆಗಳಿಗೆ ಕೇಸರಿ ಬಣ್ಣ ಬಳಿದ ಗುಂಪು; ಸಮರ್ಥಿಸಿದ ಸಚಿವ

Update: 2020-07-14 12:09 GMT

ಪ್ರಯಾಗ್‍ರಾಜ್ : ತನ್ನ ಆಕ್ಷೇಪದ ಹೊರತಾಗಿಯೂ ತನ್ನ ಮನೆಯ ಗೋಡೆಗಳಿಗೆ ಕೇಸರಿ ಬಣ್ಣ ಬಳಿದ  ಜನರ ಗುಂಪೊಂದರ ವಿರುದ್ಧ ಪ್ರಯಾಗ್‍ ರಾಜ್ ನಗರದ ಉದ್ಯಮಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ.

ಕೇಸರಿ ಬಣ್ಣ ಬಳಿಯುವುದನ್ನು ನಿಲ್ಲಿಸುವಂತೆ ಸೂಚಿಸಿದಾಗ ತನಗೆ  ಆ ಗುಂಪು ಬೆದರಿಕೆ ಹಾಕಿ ನಿಂದಿಸಿದೆ ಎಂದೂ ಅವರು ದೂರಿದ್ದಾರೆ. ಈ ಘಟನೆ ನಡೆದ ಪ್ರದೇಶದಲ್ಲಿಯೇ  ಉತ್ತರ ಪ್ರದೇಶ ಸಚಿವ ನಂದ್ ಗೋಪಾಲ್ ನಂದಿ ಅವರ ನಿವಾಸವೂ ಇದೆ. ಸಚಿವರು ಕೇಸರಿ ಬಣ್ಣ ಬಳಿಯುವ ಕಾರ್ಯವನ್ನು ಸಮರ್ಥಿಸಿದ್ದಾರಲ್ಲದೆ ಅದನ್ನು ``ಅಭಿವೃದ್ಧಿ ಕಾಮಗಾರಿ'' ಎಂದು ಬಣ್ಣಿಸಿ ವಿವಾದ ಅನಗತ್ಯ ಎಂದಿದ್ದಾರೆ.

ಆ ನಿರ್ದಿಷ್ಟ ರಸ್ತೆಯ ಎಲ್ಲಾ ಮನೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿರುವುದು ಹಾಗೂ ಕೆಲವು ಮನೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನೂ ಬಿಡಿಸಿರುವುದು ಕಂಡು ಬಂದಿದೆ. ಉದ್ಯಮಿ ರವಿ ಗುಪ್ತಾ ಅವರು ಪ್ರಯಾಗ್‍ ರಾಜ್‍ ನ ಬಹಾದುರ್‍ ಗಂಜ್ ಪ್ರದೇಶದಲ್ಲಿರುವ ತಮ್ಮ ಮನೆಯ ಬಾಲ್ಕನಿಯಿಂದ ಚಿತ್ರೀಕರಿಸಿದ ಒಂದು ನಿಮಿಷ ಅವಧಿಯ ವೀಡಿಯೋದಲ್ಲಿ ಅವರ ಮನೆಯ ಹೊರ ಗೋಡೆಗಳಿಗೆ ಕೇಸರಿ ಬಣ್ಣವನ್ನು ಕೆಲವರು ಸ್ಪ್ರೇ ಮಾಡುತ್ತಿರುವುದು ಕಾಣಿಸುತ್ತದೆ.

ಸಚಿವ ನಂದಿಯ ಸೂಚನೆ ಮೇರೆಗೆ ಕೇಸರಿ ಬಣ್ಣ ಬಳಿಯಲಾಗಿದೆ ಎಂದು ಕೆಲವರು ದೂರುತ್ತಿರುವುದೂ ವೀಡಿಯೋದಲ್ಲಿ ಕೇಳಿಸುತ್ತದೆ.  ವೀಡಿಯೋ ಮಾಡಲಾಗುತ್ತಿದೆ ಎಂದು ತಿಳಿಯುತ್ತಲೇ  ಆ ಮಂದಿ  ಬಾಲ್ಕನಿಯತ್ತಲೇ  ನೇರವಾಗಿ ಪೈಂಟ್ ಸ್ಪ್ರೇ ಮಾಡಿದ್ದು ಅದು ಫೋನ್‍ನ ಲೆನ್ಸ್‍ ಗೂ ತಾಗಿದೆ.

ಈ ಕುರಿತು ಗುಪ್ತಾ ದಾಖಲಿಸಿರುವ ದೂರಿನಲ್ಲಿ ಒಬ್ಬ ಆರೋಪಿಯನ್ನು  ಕಮಲ್ ಕುಮಾರ್ ಕೇಸರ್ವಾನಿ ಎಂದು ಗುರುತಿಸಲಾಗಿದೆ. ಆತ ಸಚಿವ ನಂದ್ ಗೋಪಾಲ್ ನಂದಿಯ ಸೋದರ ಸಂಬಂಧಿ ಎಂದು ತಿಳಿದು ಬಂದಿದೆ.

ದೂರನ್ನು ಒಂದು `ಸಂಚು' ಎಂದು ಸಚಿವ ನಂದಿ ಹೇಳಿದ್ದು ``ಅದು ಸಂಪೂರ್ಣವಾಗಿ ಕೇಸರಿಯಲ್ಲ. ನನಗೆ ಕೆಂಪು, ಹಸಿರು,  ಹಾಗೂ ಚಾಕೊಲೇಟ್ ಬಣ್ಣ ಕೂಡ ಕಾಣಿಸುತ್ತದೆ. ಕೆಲ ಜನರಿಗೆ ಸುಂದರೀಕರಣ ಇಷ್ಟವಿಲ್ಲವೆಂದು ಕಾಣಿಸುತ್ತದೆ. ಈ ಜನರು ವಿಕಾಸ್ ವಿರೋಧಿ'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News