ತಮಿಳುನಾಡು: ಪೆರಿಯಾರ್ ಪ್ರತಿಮೆ ಮೇಲೆ ಕೇಸರಿ ಬಣ್ಣ ಎರಚಿದ ಕಿಡಿಗೇಡಿಗಳು
ಚೆನ್ನೈ, ಜು.17: ದ್ರಾವಿಡ ಚಳುವಳಿಯ ನಾಯಕ ಹಾಗೂ ಸಾಮಾಜಿಕ ಹೋರಾಟಗಾರ ಪೆರಿಯಾರ್ ಇವಿ ರಾಮಸ್ವಾಮಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ಕೇಸರಿ ಬಣ್ಣ ಎರಚಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಕಿಡಿಗೇಡಿಗಳ ತಂಡ ಪ್ರತಿಮೆಗೆ ಕೇಸರಿ ಬಣ್ಣ ಎರಚಿ ಸ್ಥಳದಿಂದ ಪರಾರಿಯಾಗಿದೆ. ಸ್ಥಳೀಯರು ಹಾಗೂ ರಾಜಕೀಯ ಪಕ್ಷ ಪೆರಿಯಾರ್ ದ್ರಾವಿಡ ಕಝಗಮ್ ಸದಸ್ಯರು ಪ್ರತಿಮೆ ಇರುವ ಸ್ಥಳದಲ್ಲಿ ಜಮಾಯಿಸಿದ್ದು, ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ಕುನಿಯಮುತ್ತು ಇನ್‌ಸ್ಪೆಕ್ಟರ್ ಶಕ್ತಿವೇಲು ಮಾತನಾಡುತ್ತಾ, "ನಾವು ಸ್ವೀಕರಿಸಿದ ದೂರಿನ ಪ್ರಕಾರ ಘಟನೆಯು ಬೆಳಗ್ಗೆ 6 ಗಂಟೆಯ ಸುಮಾರಿಗೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಅಧಿಕಾರಿಗಳನ್ನು ಪ್ರತಿಮೆ ಬಳಿ ನಿಯೋಜಿಸಲಾಗಿದೆ. ಪ್ರತಿಮೆಯನ್ನು ಸ್ವಚ್ಛಗೊಳಿಸಲಾಗಿದೆ. ಕಿಡಿಗೇಡಿಗಳ ವಿರುದ್ಧ ನಾವು ಕಠಿಣ ಕ್ರಮಕೈಗೊಳ್ಳಲಿದ್ದೇವೆ'' ಎಂದು ಹೇಳಿದರು.
ತೂತುಕುಡಿ ಸಂಸದೆ ಕನ್ನಿಮೋಳಿ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, "ಪೆರಿಯಾರ್ ಕೇವಲ ಪ್ರತಿಮೆಯಲ್ಲ. ಅವರು ಅವರೊಬ್ಬ ಸ್ವಾಭಿಮಾನಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಧೀಮಂತರು. ದಶಕಗಳ ಬಳಿಕವೂ ಅವರು ಎಲ್ಲರಿಗೂ ಆದರ್ಶರಾಗಿದ್ದಾರೆ'' ಎಂದು ಟ್ವೀಟ್ ಮಾಡಿದ್ದಾರೆ.