ಉದ್ಯೋಗಿಗಳಿಗೆ ಕೊರೋನ ಇದ್ದರೂ ತಿರುಪತಿ ದೇವಸ್ಥಾನ ದರ್ಶನಕ್ಕೆ ಅಡ್ಡಿ ಇಲ್ಲ ಎಂದ ಟಿಟಿಡಿ ಅಧ್ಯಕ್ಷ ಸುಬ್ಬಾ ರೆಡ್ಡಿ
ಹೊಸದಿಲ್ಲಿ, ಜು.17: ಅರ್ಚಕರು ಹಾಗೂ ಉದ್ಯೋಗಿಗಳಿಗೆ ಅಪಾಯಕಾರಿ ಕೊರೋನ ವೈರಸ್ ಸೋಂಕು ತಗಲಿದ್ದ ಹೊರತಾಗಿಯೂ ಭಕ್ತರು ಪ್ರಸಿದ್ಧ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಬಹುದು ಎಂದು ದೇವಸ್ಥಾನ ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಅನ್‌ಲಾಕ್ ಯೋಜನೆಯ ಪ್ರಕಾರ ದೇವಸ್ಥಾನದ ಮಂಡಳಿಯು ಜೂನ್ ಮಧ್ಯಭಾಗದಲ್ಲಿ ದೇವಸ್ಥಾನದ ಬಾಗಿಲನ್ನು ಮತ್ತೆ ತೆರೆಯಲುನಿರ್ಧರಿಸಿತ್ತು.
ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನವನ್ನು ತಡೆಯುವ ಯೋಜನೆ ಇಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಹೇಳಿದ್ದಾರೆ.
ತಿರುಪತಿಯಲ್ಲಿ 14 ಅರ್ಚಕರು ಸಹಿತ ದೇವಾಲಯದ 140 ಉದ್ಯೋಗಿಗಳಿಗೆ ಕೊರೋನ ವೈರಸ್ ಸೋಂಕು ತಗಲಿದೆ. ಜನ ಗುಂಪು ಸೇರುವಲ್ಲಿ ವೇಗವಾಗಿ ಹರಡುವ ವೈರಸ್‌ನಿಂದ ಬಚಾವಾಗಲು ದೈಹಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸೋಂಕಿತರ ಪೈಕಿ 17 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ ಹೆಚ್ಚಿನವರು ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಆಂಧ್ರಪ್ರದೇಶ ಪೊಲೀಸರಾಗಿದ್ದಾರೆ. ಕೇವಲ ಒಬ್ಬರಲ್ಲಿ ಮಾತ್ರ ಗಂಭೀರ ಲಕ್ಷಣ ಕಾಣಿಸಿತ್ತು. ತಿರುಮಲ ದೇವಸ್ಥಾನವನ್ನು ಮುಚ್ಚುವ ಯೋಜನೆ ಹಾಕಿಕೊಂಡಿಲ್ಲ. ಹಿರಿಯ ಅರ್ಚಕರು ಕರ್ತರ್ವಕ್ಕೆ ನಿಯೋಜಿಸಿಲ್ಲ್ಲ. ಅರ್ಚಕರು ಹಾಗೂ ಉದ್ಯೋಗಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆಗೆ ಮನವಿ ಮಾಡಿದ್ದು, ಉದ್ಯೋಗಿಗಳಿಗೆ ಆಹಾರ ತಯಾರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು'' ಎಂದು ಟಿಟಿಡಿ ಚೇರ್ಮನ್ ರೆಡ್ಡಿ ಹೇಳಿದ್ದಾರೆ.