'ಗೆಹ್ಲೋಟ್ ಸರಕಾರ ಉರುಳಿಸುವ' ಆಡಿಯೋ ಸೋರಿಕೆ: ಬಂಡಾಯ ಶಾಸಕರಿರುವ ರೆಸಾರ್ಟ್ ಗೆ ತೆರಳಿದ ಪೊಲೀಸರು

Update: 2020-07-17 10:17 GMT

ಜೈಪುರ್:  ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರವನ್ನು ಉರುಳಿಸಲು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಬಂಡಾಯ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮ ಸಂಚು ಹೂಡಿದ್ದರು ಎಂದು ಕಾಂಗ್ರೆಸ್  ಆರೋಪಿಸಿದೆ.  ಕಾಂಗ್ರೆಸ್ ಪಕ್ಷದ ಈ ಆರೋಪ ಮಾಡಿದ ಬೆನ್ನಲ್ಲೇ  ಎರಡು ಎಫ್‍ಐಆರ್‍ ಗಳು ದಾಖಲಾಗಿದ್ದು ಅವುಗಳಲ್ಲಿ ಒಂದು ಗಜೇಂದ್ರ ಸಿಂಗ್  ಅವರ ಹೆಸರನ್ನು ಉಲ್ಲೇಖಿಸಿದೆ. ಎಫ್‍ಐಆರ್‍ನ ಲ್ಲಿ ಉಲ್ಲೇಖಗೊಂಡಿರುವ ಸಂಜಯ್ ಜೈನ್ ಎಂಬ ಹೆಸರಿನ ಉದ್ಯಮಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಜೈನ್‍ ಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿದೆ.

ಬಿಜೆಪಿ ಜತೆ ಸೇರಿಕೊಂಡು ಕಾಂಗ್ರೆಸ್ ಪಕ್ಷದ ಸರಕಾರವನ್ನು ಉರುಳಿಸಲು ಬಿಜೆಪಿ ಜತೆ ಡೀಲ್ ಮಾಡುವಲ್ಲಿ ಶಾಮೀಲಾಗಿದ್ದರೆಂದು ಹೇಳಲಾಗಿರುವ ಭನ್ವರ್ ಲಾಲ್ ಶರ್ಮ ಹಾಗೂ ಇನ್ನೊಬ್ಬ ಬಂಡುಕೋರ ಶಾಸಕ ವಿಶ್ವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ವಜಾಗೊಳಿಸಿದೆಯಲ್ಲದೆ ಅವರ ಸಂಚಿನ ಕುರಿತು ತನ್ನಲ್ಲಿ ಆಡಿಯೋ ಪುರಾವೆಯಿದೆ ಎಂದು ಹೇಳಿದೆ.

ತನ್ನ ಬಳಿಯಿರುವ ಧ್ವನಿಮುದ್ರಿಕೆಯಲ್ಲಿರುವ ಒಂದು ಧ್ವನಿ ರಾಜಸ್ಥಾನದ ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಜಲಶಕ್ತಿ ಸಚಿವ  ಶೇಖಾವತ್ ಅವರದ್ದಾಗಿದ್ದು ಎಂದು ಕಾಂಗ್ರೆಸ್ ಹೇಳಿದೆ.

``ನಾನು ಯಾವುದೇ ತನಿಖೆಗೆ ಸಿದ್ಧ. ಧ್ವನಿಮುದ್ರಿಕೆಯಲ್ಲಿರುವ ದನಿ ನನ್ನದಲ್ಲ. ನನ್ನನ್ನು ವಿಚಾರಣೆಗೆ ಕರೆದರೆ  ಖಂಡಿತಾ ಹೋಗುತ್ತೇನೆ'' ಎಂದು ಶೇಖಾವತ್ ಹೇಳಿದ್ದಾರೆ.

ಈ ಧ್ವನಿಮುದ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅದನ್ನು ಕೇಳಿಸಿಲ್ಲ. ಬದಲಾಗಿ ಧ್ವನಿಮುದ್ರಿಕೆಯಲ್ಲಿ ಆಡಿರುವ ಮಾತುಗಳನ್ನು ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ತಾನು ಮಾಡಿರುವ ಆರೋಪಗಳನ್ನು ರಾಜಸ್ಥಾನ ಪೊಲೀಸ್ ಸ್ಪೆಷಲ್ ಆಪರೇಶನ್ ಗ್ರೂಪ್ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.

ತರುವಾಯ ರಾಜಸ್ಥಾನ ಪೊಲೀಸರ ತಂಡವೊಂದು ಜೈಪುರ್‍ನ ಮಾನೆಸರ್ ಎಂಬಲ್ಲಿರುವ ರೆಸಾರ್ಟ್ ಗೆ ತೆರಳಿದ್ದು ಅಲ್ಲಿ ಬಿಡಾರ ಹೂಡಿರುವ 18 ಕಾಂಗ್ರೆಸ್ ಶಾಸಕರ ಪೈಕಿ ಪಕ್ಷದ ಎಫ್‍ಐಆರ್ ನಲ್ಲಿ ಉಲ್ಲೇಖಗೊಂಡಿರುವ  ಭನ್ವರ್ ಲಾಲ್ ಶರ್ಮ ಅವರನ್ನು  ಪತ್ತೆ ಹಚ್ಚಲು ಯತ್ನಿಸಲಿದೆ. ಗೆಹ್ಲೋಟ್ ಸರಕಾರವನ್ನು ಉರುಳಿಸಲು ಲಂಚದ ಕುರಿತಂತೆ ಬಿಜೆಪಿ ಜತೆ ಅವರು ಮಾತನಾಡಿರುವುದು ಆಡಿಯೋ ಟೇಪ್‍ನಲ್ಲಿ ದಾಖಲಾಗಿದೆ  ಎಂದು ಕಾಂಗ್ರೆಸ್ ಆರೋಪ ಹೊರಿಸಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೊಲೀಸರು ಜೈಪುರ್‍ ಗೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News