×
Ad

ಹಾಗಿಯ ಸೋಫಿಯಾ: ಸರಳೀಕೃತ ಪರ - ವಿರೋಧ ವಾದಗಳು

Update: 2020-07-19 00:10 IST

2013ರಿಂದ ಹಾಗಿಯ ಸೋಫಿಯಾದಲ್ಲಿ ನಿತ್ಯ ಎರಡು ಹೊತ್ತು ಅಝಾನ್ ಕರೆ ಮೊಳಗಲಿಕ್ಕೂ ಆರಂಭಿಸಿತ್ತು. 2016ರಲ್ಲಿ ಕೆಲವು ಖಾಸಗಿ ಸಂಘಟನೆಗಳ ಜನರು ಇಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. 2017ರಲ್ಲಿ ರಮಝಾನ್ ತಿಂಗಳ 27ನೇ ರಾತ್ರಿ ‘ಲೈಲತುಲ್ ಖದ್ರ್’ ಆಚರಣೆಗಾಗಿ ಇಲ್ಲಿ ಸರಕಾರದ ಕಡೆಯಿಂದಲೇ ಸಾಮೂಹಿಕ ನಮಾಝ್ ಹಾಗೂ ಕುರ್‌ಆನ್ ಪಠಣದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹೀಗೆ ಮಸೀದಿಯ ಬೇಡಿಕೆ ಹೆಜ್ಜೆ ಹೆಜ್ಜೆಯಾಗಿ ಬೆಳೆದು ಬಂದಿದ್ದು ಇದೀಗ ಅದು ತಾರಕದಲ್ಲಿದೆ.


ಭಾಗ-2

 ಮುಸ್ಲಿಮರ ವಶವಾದ ಕಾನ್ ಸ್ಟ್ಯಾಂಟಿನೋಪಲ್ -ಮಸೀದಿಯಾದ ಹಾಗಿಯ ಸೋಫಿಯಾ
(ಕ್ರಿ.ಶ.1453)
 
14ನೇ ಶತಮಾನದಲ್ಲಿ ಹಲವು ದೇಶಗಳ ವಿರುದ್ಧ ಸಮರಹೂಡಿ ಸತತ ವಿಜಯ ಸಾಧಿಸುತ್ತಾ ತನ್ನ ಗಡಿಗಳನ್ನು ವಿಸ್ತರಿಸುತ್ತಾ ಸಾಗಿದ್ದ ಒಟ್ಟೊಮಾನ್ (ಉಸ್ಮಾನಿಯ್ಯ) ಸಾಮ್ರಾಜ್ಯದ ಪಡೆಗಳು 15ನೇ ಶತಮಾನದಲ್ಲಿ ಯುವ ದೊರೆ ಸುಲ್ತಾನ್ ಮುಹಮ್ಮದ್ (ದ್ವಿತೀಯ)ನ ನೇತೃತ್ವದಲ್ಲಿ ಕಾನ್ ಸ್ಟ್ಯಾಂಟಿನೋಪಲ್ ಅನ್ನು ಪ್ರವೇಶಿಸಿದವು. ಕ್ರಿ.ಶ.1453ರಲ್ಲಿ ಸುಮಾರು ಎರಡು ತಿಂಗಳ ಹೋರಾಟದ ಬಳಿಕ ಆ ನಗರವು ಒಟ್ಟೊಮಾನ್ ಪಡೆಗಳ ವಶವಾಯಿತು. ಈ ವೇಳೆ ಹಾಗಿಯ ಸೋಫಿಯಾ ಕಟ್ಟಡವನ್ನು ಮಸೀದಿಯಾಗಿ ಪರಿವರ್ತಿಸಲಾಯಿತು. ಸುಲ್ತಾನ್ ಮುಹಮ್ಮದ್‌ನಿಗೆ ವಾಸ್ತುಶಿಲ್ಪಮತ್ತು ಕಲಾಕೃತಿಗಳ ಬಗ್ಗೆ ವಿಶೇಷ ಆಸಕ್ತಿ ಇತ್ತು. ಅವನು ಹಳೆಯ ಕಟ್ಟಡವನ್ನು ಕೆಡವಿ ಮಸೀದಿಗಾಗಿ ಹೊಸ ಕಟ್ಟಡ ನಿರ್ಮಿಸಬೇಕೆಂಬ ಪ್ರಸ್ತಾವವನ್ನು ತಿರಸ್ಕರಿಸಿ ಹಳೆಯ ಕಟ್ಟಡವನ್ನೇ ಮಸೀದಿಯಾಗಿಸಿ ಬಳಸಲು ತೀರ್ಮಾನಿಸಿದನು. ಚರ್ಚ್‌ನ ಕಟ್ಟಡದ ಜೊತೆ ‘ಹಾಗಿಯ ಸೋಫಿಯಾ’ ಎಂಬ, ಅದರ ಐತಿಹಾಸಿಕ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು.

ಚರ್ಚ್‌ನೊಳಗಿದ್ದ ವಿಗ್ರಹಗಳನ್ನು ಅಲ್ಲಿಂದ ತೆಗೆದು ಹಾಕಲಾಯಿತು. ಆದರೆ ಆ ಬೃಹತ್ ಕಟ್ಟಡದ ಗೋಡೆಗಳಲ್ಲಿ ಉದ್ದಕ್ಕೂ ದುಬಾರಿ ಮೊಸಾಯಿಕ್‌ಗಳ ಮೇಲಿದ್ದ ಕ್ರೈಸ್ತ ನಂಬಿಕೆಗಳನ್ನು ಪ್ರತಿನಿಧಿಸುವ ಚಿತ್ರಗಳನ್ನು ಮತ್ತು ಕೆತ್ತನೆಯ ಕಲಾಕೃತಿಗಳನ್ನು ಅಳಿಸುವ ಅಥವಾ ಆ ಮೊಸಾಯಿಕ್‌ಗಳನ್ನು ಕಿತ್ತು ಹಾಕುವ ಬದಲು ಅಂತಹ ಎಲ್ಲ ಸ್ಥಳಗಳನ್ನು ಮಣ್ಣು ಮತ್ತು ಸುಣ್ಣದ ಗಾರೆಯಿಂದ ಮುಚ್ಚಬೇಕೆಂದು ನಿರ್ಧರಿಸಲಾಯಿತು. ಈ ಕಾರ್ಯಾಚರಣೆ ಸುಲ್ತಾನ್ ಮುಹಮ್ಮದ್‌ನ ಕಾಲದಲ್ಲಿ ಆರಂಭವಾಗಿ ಮುಂದಿನ ತಲೆಮಾರಿನಲ್ಲಿ ಪೂರ್ಣಗೊಂಡಿತು. ಮುಂದೆ ಸುಮಾರು ಐದು ಶತಮಾನಗಳ ಕಾಲ ಅಂದರೆ 1935ರ ತನಕವೂ ಅದು ಮಸೀದಿಯಾಗಿಯೇ ಇತ್ತು. ಐದು ಶತಮಾನಗಳ ಅವಧಿಯಲ್ಲಿ, ಒಟ್ಟೊಮಾನ್ ದೊರೆಗಳ ಪಾಲಿಗೆ ಪ್ರತಿಷ್ಠೆಯ ಸಂಕೇತವಾಗಿದ್ದ ಪ್ರಸ್ತುತ ಮಸೀದಿಯ ಭದ್ರತೆ, ದುರಸ್ತಿ, ಶೃಂಗಾರ ಇತ್ಯಾದಿಗಳಿಗಾಗಿ ಆಯಾ ಕಾಲದ ಒಟ್ಟೊಮಾನ್ ದೊರೆಗಳು ಅಪಾರ ಸಂಪತ್ತನ್ನು ವ್ಯಯಿಸಿದ್ದು ಅದನ್ನು ಜಾಗತಿಕ ಮಟ್ಟದ ಒಂದು ಆಕರ್ಷಕ ಸ್ಮಾರಕವಾಗಿ ಉಳಿಸಿಕೊಂಡಿದ್ದರು. ಟರ್ಕಿಯಲ್ಲಿ ಜನಪ್ರಿಯವಾಗಿರುವ ಐತಿಹ್ಯಗಳ ಪ್ರಕಾರ ಸುಲ್ತಾನ್ ಮುಹಮ್ಮದ್, ತನ್ನ ಖಾಸಗಿ ಸೊತ್ತಿನಿಂದ ಹಣ ಪಾವತಿಸಿ ಆ ಕಟ್ಟಡವನ್ನು ಅದರ ಕ್ರೈಸ್ತ ಹಕ್ಕುದಾರರಿಂದ ಖರೀದಿಸಿದ್ದನು. ಈ ವಾದವನ್ನು ಟರ್ಕಿಯ ನ್ಯಾಯಾಲಯಗಳು ಮಾನ್ಯ ಮಾಡಿವೆ. ಆದರೆ ಈ ಕುರಿತು ಯಾವುದೇ ಸಂಶಯಾತೀತ ದಾಖಲೆಯನ್ನು ಜಗತ್ತಿನ ಮುಂದಿಡಲು ಟರ್ಕಿ ಸರಕಾರಕ್ಕೆ ಸಾಧ್ಯವಾಗಿಲ್ಲ.

ಮಸೀದಿಯನ್ನು ಮತ್ತೆ ಚರ್ಚ್ ಆಗಿ ಪರಿವರ್ತಿಸುವ ವಿಫಲ ಯತ್ನ

(ಕ್ರಿ.ಶ.1918) 

15ನೇ ಶತಮಾನದಲ್ಲಿ ತಮ್ಮ ಚರ್ಚ್ ಮಸೀದಿಯಾಗಿ ಮಾರ್ಪಟ್ಟದ್ದನ್ನು ಗ್ರೀಕ್ ಆರ್ಥೋಡಾಕ್ಸ್ ಕ್ರೈಸ್ತರು ಎಂದೂ ಮರೆಯಲಿಲ್ಲ. ಆ ಘಟನೆಯನ್ನು ಆ ಸಮುದಾಯದವರು ತಮ್ಮ ಇತಿಹಾಸದ ಒಂದು ಅವಿಸ್ಮರಣೀಯ ಘಟನೆಯ ರೂಪದಲ್ಲಿ ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು. ಹಾಗಿಯ ಸೋಫಿಯಾ ವನ್ನು ಮುಸಲ್ಮಾನರಿಂದ ಕಿತ್ತು ಮತ್ತೆ ಅದನ್ನು ಚರ್ಚ್ ಆಗಿ ಪುನಃಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಸಾಹಿತ್ಯ, ಕಥಾಪ್ರಸಂಗ, ನಾಟಕ ಇತ್ಯಾದಿ ವಿವಿಧ ವಿಧಾನಗಳ ಮೂಲಕ, ಸಮುದಾಯದೊಳಗೆ ಒಂದರ ನಂತರ ಒಂದರಂತೆ, ಎಲ್ಲ ತಲೆಮಾರುಗಳಲ್ಲಿ ಸದಾ ಜೀವಂತವಿಡಲಾಯಿತು. ಪ್ರಥಮ ಜಾಗತಿಕ ಯುದ್ಧದ ವೇಳೆ, ಜಗತ್ತಿನ ವಿವಿಧೆಡೆಗಳಲ್ಲಿ ಆಗಲೇ ದುರ್ಬಲವಾಗಿದ್ದ ಒಟ್ಟೊಮಾನ್ ಸಾಮ್ರಾಜ್ಯವನ್ನು ಮಣಿಸಿದ ಮಿತ್ರ ಪಡೆಗಳು (Allied Forces), 1918ರಲ್ಲಿ ಟರ್ಕಿಯನ್ನು ಪ್ರವೇಶಿಸಿದವು. ಅವು ಇಸ್ತಾಂಬುಲ್ ನಗರ (ಮಾಜಿ ಕಾನ್ ಸ್ಟಾ ್ಯಂಟಿನೋಪಲ್) ಅನ್ನು ವಶಪಡಿಸಿಕೊಂಡವು. ಈ ವೇಳೆ ಗ್ರೀಸ್ ಮೂಲದ ಕೆಲವು ಆಕ್ರಮಣಕಾರಿ ಸೇನಾ ತುಕಡಿಗಳು ಕೆಲವು ಸ್ಥಳೀಯ ಜನರ ಜೊತೆ ಸೇರಿ, ಹಾಗಿಯ ಸೋಫಿಯಾ ಕಟ್ಟಡದ ಮೇಲೆ ಕ್ರೈಸ್ತ ಸಂಕೇತವಾದ ಗಂಟೆಯನ್ನು ಕಟ್ಟಿ, ಗಂಟೆ ಬಾರಿಸುವ ಮತ್ತು ಆ ಮೂಲಕ ಅದಕ್ಕೆ ಚರ್ಚ್‌ನ ರೂಪ ಕೊಡುವ ಸಂಚು ಹೂಡಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಆದರೆ ಆಗಿನ ಟರ್ಕಿಯ ಪರಾಜಿತ ದೊರೆ ಸುಲ್ತಾನ್ ವಹೀದುದ್ದೀನ್, ತನ್ನ ಖಾಸಗಿ ಭದ್ರತೆಗೆಂದು ಮೀಸಲಾಗಿದ್ದ 700 ಮಂದಿಯ ವಿಶೇಷ ಪಡೆಯೊಂದನ್ನು ಮಸೀದಿಯ ರಕ್ಷಣೆಗಾಗಿ ನಿಯೋಜಿಸಿದ್ದರಿಂದ, ಕೊನೆಯ ಕ್ಷಣದಲ್ಲಿ ಆ ಸಂಚು ವಿಫಲವಾಯಿತು.

ಸ್ವತಂತ್ರ, ಧರ್ಮಾತೀತ ಟರ್ಕಿ 

ಪ್ರಥಮ ಜಾಗತಿಕ ಯುದ್ಧದ ಬಳಿಕ 1920ರ ಹೊತ್ತಿಗೆ ಒಂದು ಕಡೆಯಿಂದ ಗ್ರೀಕ್ ಪಡೆಗಳು ಇನ್ನೊಂದು ಕಡೆಯಿಂದ ಆರ್ಮೇನಿಯನ್ ಪಡೆಗಳು ಮತ್ತೊಂದು ಕಡೆಯಿಂದ ಫ್ರೆಂಚ್ ಪಡೆಗಳು ಟರ್ಕಿಯ ಮೇಲೆ ಯುದ್ಧ ಸಾರಿ ಅದರ ಹಲವು ಭಾಗಗಳನ್ನು ವಶಪಡಿಸಿಕೊಂಡವು. ಇದಕ್ಕೆ ಪತಿರೋಧವೊಡ್ಡಿ ಆರಂಭವಾದ ಉಗ್ರ ಹೋರಾಟದಲ್ಲಿ ಟರ್ಕಿಯ ಜನತೆಗೆ ಶೀಘ್ರವೇ ವಿಜಯ ಪ್ರಾಪ್ತವಾಯಿತು. 1923ರಲ್ಲಿ ಟರ್ಕಿ ಒಂದು ಸ್ವತಂತ್ರ ದೇಶವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ, ಪ್ರಥಮ ಜಾಗತಿಕ ಯುದ್ಧದ ವೇಳೆ ಸೇನಾ ದಂಡನಾಯಕನಾಗಿದ್ದ ಮುಸ್ತಫಾ ಕಮಾಲ್ ಪಾಶ (ಬಿರುದು - ಅತಾತುರ್ಕ್- ಆಧುನಿಕ ಟರ್ಕಿಯ ರಾಷ್ಟ್ರಪಿತ) ಟರ್ಕಿಯ ಅಧ್ಯಕ್ಷರಾದರು. ನಿಜವಾಗಿ ಅವರು ಸ್ವಾತಂತ್ರ್ಯಕ್ಕೆ ಮುನ್ನವೇ ಒಂದು ಹಂಗಾಮಿ ಸರಕಾರವನ್ನು ರಚಿಸಿದ್ದರು. ಸ್ವಾತಂತ್ರ್ಯ ಪ್ರಾಪ್ತಿಯೊಂದಿಗೆ ಅವರ ಸರಕಾರಕ್ಕೆ ಅಂತರ್‌ರಾಷ್ಟ್ರೀಯ ಮಾನ್ಯತೆಯೂ ಪ್ರಾಪ್ತವಾಯಿತು.

1938ರಲ್ಲಿ ನಿಧನರಾದ ಅತಾತುರ್ಕ್ ತನ್ನ ಕೊನೆಯುಸಿರಿನ ತನಕವೂ ಒಬ್ಬ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದರು. ಅವರ ದಬ್ಬಾಳಿಕೆಯ ಧೋರಣೆಯ ಹೊರತಾಗಿಯೂ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರು. ಇಂದು ಕೂಡ ಟರ್ಕಿಯಲ್ಲಿ ಅವರ ಅಭಿಮಾನಿಗಳು ಗಣ್ಯ ಸಂಖ್ಯೆಯಲ್ಲಿದ್ದಾರೆ. ಅವರು ಟರ್ಕಿಶ್ ರಾಷ್ಟ್ರೀಯವಾದ ಮತ್ತು ಜಾತ್ಯತೀತತೆಯ ಹೆಸರಲ್ಲಿ ಕಟ್ಟುನಿಟ್ಟಾಗಿ ಎಲ್ಲ ಧಾರ್ಮಿಕ ಮೌಲ್ಯ ಮತ್ತು ಸಂಕೇತಗಳನ್ನು ಆಡಳಿತದಿಂದ ಬೇರ್ಪಡಿಸಿದರು. ಯುರೋಪನ್ನು ತನ್ನ ಮಾದರಿಯಾಗಿಸಿಕೊಂಡಿದ್ದ ಅತಾತುರ್ಕ್ ಹಲವು ಅಪೇಕ್ಷಿತ ಬದಲಾವಣೆಗಳನ್ನು ಮಾಡುವ ಜೊತೆಗೆ, ಸೆಕ್ಯುಲರೀಕರಣ, ಕೈಗಾರಿಕೀಕರಣ, ಆಧುನೀಕರಣ ಮತ್ತು ಟರ್ಕೀಕರಣದ ನೆಪದಲ್ಲಿ ಟರ್ಕಿಯ ಸಂಪ್ರದಾಯಸ್ಥ ಸಮಾಜದ ಮೇಲೆ ಪಾಶ್ಚಿಮಾತ್ಯ ಮೌಲ್ಯಗಳನ್ನು ಹೇರಿ ಅಲ್ಲಿ ಧರ್ಮದ ಪಾತ್ರವನ್ನು ತೀರಾ ಸೀಮಿತ ಗೊಳಿಸಿ ಬಿಟ್ಟರು. ಪಾಶ್ಚಿಮಾತ್ಯರನ್ನು ಮೆಚ್ಚಿಸುವ ಉತ್ಸಾಹದಲ್ಲಿ ಅರಬಿ ಭಾಷೆಯೊಂದಿಗೆ ನಂಟು ಇರುವ ಎಲ್ಲ ಧಾರ್ಮಿಕ ಆಚರಣೆ ಹಾಗೂ ಸಂಕೇತಗಳ ವಿರುದ್ಧ ಮತ್ತು ಒಟ್ಟೊಮಾನ್ ಪರಂಪರೆಯ ವಿರುದ್ಧ ತಾತ್ಸಾರ ಬೆಳೆಸುವ ಅಭಿಯಾನ ಆರಂಭಿಸಿದರು. 1924 ರಲ್ಲಿ ಕೇವಲ ನಾಮಮಾತ್ರಕ್ಕೆ ಉಳಿದಿದ್ದ ಒಟ್ಟೊಮಾನ್ ಖಿಲಾಫತ್ ನ ವಿಧ್ಯುಕ್ತ ಅಂತ್ಯವನ್ನು ಘೋಷಿಸಿದರು. ಮಸೀದಿ ಮದ್ರಸಾಗಳಿಗೆ ನೀಡಲಾಗುತ್ತಿದ್ದ ಸರಕಾರಿ ಅನುದಾನವನ್ನು ನಿಲ್ಲಿಸಿದರು. ಮಸೀದಿಗಳಲ್ಲಿ ನಿತ್ಯ 5 ಹೊತ್ತು ಮೊಳಗಿಸಲಾಗುವ ಅಝಾನ್ ಕರೆ ಅರಬಿ ಭಾಷೆಯ ಬದಲು ಟರ್ಕಿಶ್ ಭಾಷೆಯಲ್ಲಿರಬೇಕೆಂಬ ವಿಲಕ್ಷಣ ಆದೇಶ ಹೊರಡಿಸಿದರು. ಮಹಿಳೆಯರು ಸಂಸತ್ತಿನಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ‘ಹಿಜಾಬ್’ ಧರಿಸುವುದನ್ನು ನಿಷೇಧಿಸಿದರು. ಸಾಂಪ್ರದಾಯಿಕ ಫೆಜ್ಹ್ ಟೋಪಿ (Fez cap)ಯನ್ನು ನಿಷೇಧಿಸಿ ಬ್ರಿಟಿಷ್ ಹ್ಯಾಟ್ ಅನ್ನು ಪ್ರೋತ್ಸಾಹಿಸಿದರು. ಹಲವು ಸೂಫಿ ಸಂಘಟನೆಗಳ ಮೇಲೆ ನಿಷೇಧ ಹೇರಿದರು. ಸಂವಿಧಾನ ಮತ್ತು ನ್ಯಾಯ ಸೂತ್ರಗಳನ್ನು ಮಾತ್ರವಲ್ಲ, ಲಿಪಿ, ಕ್ಯಾಲೆಂಡರ್, ಅಳತೆ ತೂಕದ ಮಾನದಂಡಗಳು - ಹೀಗೆ ಎಲ್ಲವನ್ನೂ ಪಶ್ಚಿಮದ ಮೌಲ್ಯಗಳನುಸಾರ ಪರಿವರ್ತಿಸಿದರು.

ಐತಿಹಾಸಿಕ ಮಸೀದಿಯನ್ನು ಸಂಗ್ರಹಾಲಯವಾಗಿಸುವ ಗುಪ್ತ ಯೋಜನೆ.

 ಶತಮಾನಗಳಿಂದ ಸಂಪ್ರದಾಯಸ್ಥ ಟರ್ಕಿಶ್ ಸಮಾಜದ ಧಾರ್ಮಿಕ ಸಂಕೇತವಾಗಿದ್ದ ಹಾಗಿಯ ಸೋಫಿಯಾ ಮಸೀದಿಯನ್ನು ರಾಷ್ಟ್ರೀಯ ಸಂಗ್ರಹಾಲಯವಾಗಿಸುವ ಕ್ರಮ ಕೂಡ ಅತಾತುರ್ಕ್‌ರ ಈ ಅಭಿಯಾನದ ಭಾಗವಾಗಿತ್ತು. ಧರ್ಮ ರಹಿತ ಹೊಸ ಟರ್ಕಿಯ ನಿರ್ಮಾಣಕ್ಕೆ, ಹಳೆಯ ಧಾರ್ಮಿಕ ಸಂಕೇತದ ನಿರ್ನಾಮ ಅವಶ್ಯಕವಾಗಿತ್ತು. ಹಾಗೆಯೇ ಅತಾತುರ್ಕ್ ಮತ್ತವರ ತಂಡಕ್ಕೆ ಪಶ್ಚಿಮವನ್ನು ಮೆಚ್ಚಿಸುವ ಮತ್ತು ಪಶ್ಚಿಮದ ದೃಷ್ಟಿಯಲ್ಲಿ ಪ್ರಶಂಸಾರ್ಹ ಹೀರೋಗಳಾಗುವ ತವಕವಿತ್ತು. ಐತಿಹಾಸಿಕವಾಗಿ ಜಾಗತಿಕ ಮುಸ್ಲಿಮ್ ಸಮಾಜಕ್ಕೆ ಮುಖ್ಯವಾಗಿದ್ದ ಮಸೀದಿಯೊಂದನ್ನು ಮುಸ್ಲಿಮರ ಕೈಯಿಂದ ಕಿತ್ತುಕೊಳ್ಳುವ ಮೂಲಕ ತಾನು ತನ್ನ ಸೆಕ್ಯುಲರಿಸಂ ಅನ್ನು ಪಾಶ್ಚಿಮಾತ್ಯರಿಗೆ ಸಂಶಯಾತೀತವಾಗಿ ಸಾಬೀತು ಪಡಿಸಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ ಈ ದುಸ್ಸಾಹಸಕ್ಕೆ ದೇಶದಲ್ಲಿ ತೀವ್ರ ವಿರೋಧ ಪ್ರಕಟವಾಗುವುದು ಖಚಿತವಾಗಿದ್ದರಿಂದ ಅದನ್ನು ಹಂತಹಂತವಾಗಿ ಮಾಡುವ ಉಪಾಯವೊಂದನ್ನು ಕಂಡುಕೊಳ್ಳಲಾಯಿತು. ಹಾಗಿಯ ಸೋಫಿಯಾದ ಕಲಾತ್ಮಕ ವೈಭವವನ್ನು ಮರುಸ್ಥಾಪಿಸುವ ಹೆಸರಲ್ಲಿ ನಿಗೂಢ ಯೋಜನೆಯೊಂದು ರೂಪುಗೊಂಡಿತು. ‘ಅಮೆರಿಕನ್ ಬೈಝನ್ ಟೈನ್ ಇನ್‌ಸ್ಟಿಟ್ಯೂಟ್’ (ABI) ಎಂಬ ಅಮೆರಿಕದ ಪ್ರೊಟೆಸ್ಟೆಂಟ್ ಕ್ರೈಸ್ತರ ಒಂದು ಸಂಸ್ಥೆಯ ಪಾಲುದಾರಿಕೆಯೊಂದಿಗೆ ಅತಾತುರ್ಕ್ ಈ ಸಂಚನ್ನು ಕಾರ್ಯಗತಗೊಳಿಸಿದರು. ಆ ಕಾಲದಲ್ಲಿ ABIಗೆ ದೊಡ್ಡ ಮೊತ್ತಗಳನ್ನು ಉದಾರ ದೇಣಿಗೆಯಾಗಿ ನೀಡಿದ ಅಮೆರಿಕದ ಹಲವು ಪ್ರತಿಷ್ಠಿತ ಶ್ರೀಮಂತ ಕುಟುಂಬಗಳ ಪಟ್ಟಿಯನ್ನು ನೋಡಿದರೆ ಅದು ಎಷ್ಟೊಂದು ಪ್ರಭಾವಶಾಲಿ ಸಂಸ್ಥೆಯಾಗಿತ್ತು ಎಂಬುದು ತಿಳಿಯುತ್ತದೆ. 1931ರಲ್ಲಿ ಅಮೆರಿಕದ ಪ್ರಸ್ತುತ ಅಆಐ ಸಂಸ್ಥೆಯ ಪರವಾಗಿ ಅದರ ಮುಖ್ಯಸ್ಥ, ಪ್ರಾಚ್ಯಶಾಸ್ತ್ರ ತಜ್ಞ (archaeologist) ಥಾಮಸ್ ವೈಟಿಮೊರ್, ತನಗೆ ಹಾಗಿಯ ಸೋಫಿಯಾ ಕಟ್ಟಡದ ಗೋಡೆಗಳಲ್ಲಿ ಅವಿತಿರುವ ಮೊಸಾಯಿಕ್ ಕಲಾಕೃತಿಗಳ ಬಗ್ಗೆ ಸವಿಸ್ತಾರ ಸಂಶೋಧನೆಗೆ ಅವಕಾಶ ನೀಡಬೇಕೆಂದು ಅತಾತುರ್ಕ್ ಸರಕಾರಕ್ಕೆ ಮನವಿ ಸಲ್ಲಿಸಿದರು. ಸರಕಾರ ಈ ಮನವಿಯನ್ನು ತಕ್ಷಣವೇ ಸ್ವೀಕರಿಸಿತು. ಈ ರೀತಿ ಮಸೀದಿಯಲ್ಲಿ ಪ್ರಾರ್ಥನೆ ನಿಂತು ಸಂಶೋಧನೆ ಆರಂಭವಾಯಿತು. ಎಬಿಐ ಕಡೆಯಿಂದ ಬಂದ ಸಂಶೋಧಕರು ಮತ್ತು ಸಹಾಯಕರ ತಂಡವು ಕಟ್ಟಡದ ಗೋಡೆಗಳ ಗಾರೆಯನ್ನು ಸರಿಸಿ, ಮೂಲ ಮೊಸಾಯಿಕ್ ಹಂಚು, ಚಪ್ಪಡಿ ಇತ್ಯಾದಿಗಳನ್ನು ಶುಚೀಕರಿಸುವ ಕಾರ್ಯಾಚರಣೆಯಲ್ಲಿ ತೊಡಗಿತು.

ಈ ಕಾರ್ಯಾಚರಣೆ 1931ರಿಂದ 1949ರ ತನಕವೂ ಮುಂದುವರಿಯಿತು. ಕೆಲಸ ಆರಂಭವಾಗಿ ಒಂದೆರಡು ವರ್ಷಗಳಲ್ಲೇ ಕಟ್ಟಡದೊಳಗಿನ ಹಲವೆಡೆ ಗೋಡೆಗಳಲ್ಲಿ ಅಡಗಿದ್ದ ಕಲಾಕೃತಿಗಳನ್ನು ನಿಚ್ಚಳಗೊಳಿಸಲಾಗಿತ್ತು. ಆ ಹಂತದಲ್ಲೇ ABI ಸಂಸ್ಥೆಯು ತನ್ನ ಸಂಶೋಧನೆಯ ಫಲಿತಾಂಶದ ರೂಪದಲ್ಲಿ ಪ್ರಸ್ತುತ ಕಲಾಕೃತಿಗಳ ಚಿತ್ರಗಳನ್ನು ಮತ್ತು ಆ ಕುರಿತಾದ ವೈಜ್ಞಾನಿಕ ವಿಶ್ಲೇಷಣೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾರಂಭಿಸಿತು. ಈ ಮೂಲಕ ವಿಶೇಷವಾಗಿ ಪಶ್ಚಿಮದ ದೇಶಗಳಲ್ಲಿ ಪ್ರಾಚೀನ ಚರ್ಚಿನ ನೆನಪುಗಳು ಗರಿಗೆದರತೊಡಗಿದವು. ಮಸೀದಿಯನ್ನು ಮ್ಯೂಸಿಯಮ್ ಆಗಿ ಪರಿವರ್ತಿಸುವ ಪ್ರಸ್ತಾವ ಚರ್ಚೆಗೆ ಬಂದದ್ದು ಇದೇ ಸಂದರ್ಭದಲ್ಲಿ. 1934ರಲ್ಲಿ ಅತಾತುರ್ಕ್ ಸರಕಾರದ ಸಚಿವ ಸಂಪುಟವು, ಸದ್ಯ ಹಾಗಿಯ ಸೋಫಿಯಾ ಮಸೀದಿಯ ಕಟ್ಟಡದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಯುತ್ತಿಲ್ಲ. ಆದ್ದರಿಂದ ಸರಕಾರವು ಆ ಕಟ್ಟಡವನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿ ಬಳಸಲು ನಿರ್ಧರಿಸಿದೆ ಎಂದು ಘೋಷಿಸಿತು. ಈ ಕುರಿತು ದೇಶದ ಒಳಗೂ ಹೊರಗೂ ಮುಸ್ಲಿಮ್ ಸಮಾಜದ ಕಡೆಯಿಂದ ಭಾರೀ ಆಕ್ರೋಶ ಪ್ರಕಟವಾಯಿತು. ಅತಾತುರ್ಕ್ ದೇಶದೊಳಗಿನ ಆಕ್ರೋಶವನ್ನು ಸದೆಬಡಿದರು. 1935ರಲ್ಲಿ ಅಧಿಕೃತವಾಗಿ ಆ ಮಸೀದಿಯ ಕಟ್ಟಡವನ್ನು ಸಂಗ್ರಹಾಲವೆಂದು ಘೋಷಿಸಲಾಯಿತು.

ಸಂಗ್ರಹಾಲಯವನ್ನು ಮತ್ತೆ ಮಸೀದಿಯಾಗಿ ಪುನಃಸ್ಥಾಪಿಸುವ ತಯಾರಿ    

ಆ ಘಟನೆ ನಡೆದು 85 ವರ್ಷಗಳು ಕಳೆದ ಬಳಿಕ ಇದೀಗ ಆ ಕಟ್ಟಡವನ್ನು ಮತ್ತೆ ಮಸೀದಿಯಾಗಿ ಪರಿವರ್ತಿಸುವ ಕುರಿತಾಗಿ ಜಗತ್ತಿನೆಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತಿದೆ. ನಿಜವಾಗಿ ಟರ್ಕಿಯೊಳಗೆ ಕಳೆದ 85 ವರ್ಷಗಳಿಂದಲೂ ಈ ಚರ್ಚೆ ಜೀವಂತವಿದೆ. ಅತಾತುರ್ಕ್ ಹೇರಿದ ಧರ್ಮ ನಿರಪೇಕ್ಷ ಧೋರಣೆ, ಸರಕಾರ ಮತ್ತು ಆಡಳಿತದ ಮಟ್ಟದಲ್ಲಿ ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ಬಂದರೂ, ಟರ್ಕಿಯ ಜನತೆಯ ಒಂದು ಗಣ್ಯಭಾಗ ಆ ಧೋರಣೆಗಳನ್ನು ಮನಸಾರೆ ಸ್ವೀಕರಿಸಿ ಧರ್ಮದಿಂದ ದೂರ ಉಳಿದರೂ ಅಲ್ಲಿನ ಬಹುಸಂಖ್ಯಾತ ಜನತೆ ಧರ್ಮದೊಂದಿಗಿನ ತಮ್ಮ ನಂಟನ್ನು ಕಳಚಿಕೊಳ್ಳಲು ಮುಂದಾಗಲಿಲ್ಲ. ಸರಕಾರಕ್ಕೆ ಅಂಜಿ ಮೌನವಾಗಿದ್ದವರು ಕೂಡ ಖಾಸಗಿಯಾಗಿ ಮತ್ತು ಭಾವನಾತ್ಮಕವಾಗಿ ಧರ್ಮಕ್ಕೆ ಅಂಟಿಕೊಂಡಿದ್ದರು. ಗ್ರಾಮಾಂತರ ಟರ್ಕಿಯಲ್ಲಂತೂ ಧರ್ಮದ ಜೊತೆ ಜನರ ಗಾಢ ನಂಟು ಎಂದೂ ಮಸುಕಾಗಿರಲಿಲ್ಲ. 1950ರಲ್ಲಿ ಡೆಮಾಕ್ರಟಿಕ್ ಪಕ್ಷವು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ಹಾಗಿಯ ಸೋಫಿಯಾವನ್ನು ಮಸೀದಿಯಾಗಿಸುವ ಬೇಡಿಕೆ ದೇಶದೆಲ್ಲೆಡೆ ಕೇಳಿ ಬಂದಿತ್ತು. 1952ರಲ್ಲಿ ಅದನ್ನು ವಿರೋಧಿಸಿದ್ದ ಒಬ್ಬ ಲೇಖಕನ ಹತ್ಯೆಯೂ ನಡೆದಿತ್ತು. 1967ರಲ್ಲಿ ಕೆಥೊಲಿಕರ ವಿಶ್ವಗುರು ಪೋಪ್ ಪಾಲ್ (ಆರನೇ) ಟರ್ಕಿಗೆ ಭೇಟಿ ನೀಡಿದಾಗ ಹಾಗಿಯ ಸೋಫಿಯಾವನ್ನು ಸಂದರ್ಶಿಸಿದ್ದರು. ಆಗ ಅವರು ಆ ಕಟ್ಟಡದೊಳಗೆ ಮಂಡಿಯೂರಿ ಕ್ರೈಸ್ತ ಸಂಪ್ರದಾಯ ಪ್ರಕಾರ ಪ್ರಾರ್ಥನೆ ಸಲ್ಲಿಸಿದಾಗ, ಸೆಕ್ಯುಲರ್ ಮ್ಯೂಸಿಯಮ್‌ನಲ್ಲಿ ಕ್ರೈಸ್ತರ ಪ್ರಾರ್ಥನೆಗೆ ಅನುಮತಿ ಇದ್ದರೆ ಮುಸ್ಲಿಮರ ಪ್ರಾರ್ಥನೆಗೆ ಅವಕಾಶ ಯಾಕಿಲ್ಲ? ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿ ಬಂದಿತ್ತು.

1980ರ ಮಿಲಿಟರಿ ಕ್ರಾಂತಿಯೊಂದಿಗೆ ಟರ್ಕಿಯಲ್ಲಿ ಅತಾತುರ್ಕ್‌ರ ಧರ್ಮ ನಿರಪೇಕ್ಷ ವ್ಯವಸ್ಥೆ ಬಹುತೇಕ ತನ್ನ ಅಂತ್ಯವನ್ನು ತಲುಪಿ ಬಿಟ್ಟಿತು. ಆಗಿನಿಂದಲೇ ಹಾಗಿಯ ಸೋಫಿಯಾವನ್ನು ಮಸೀದಿಯಾಗಿಸಬೇಕೆಂಬ ಬೇಡಿಕೆ ಬಹಿರಂಗವಾಗಿ ಮಾರ್ದನಿಸಲಾರಂಭಿಸಿತ್ತು. 2006ರಲ್ಲಿ ಸರಕಾರವು ಕ್ರೈಸ್ತ ಮತ್ತು ಮುಸ್ಲಿಮ್ ಸಿಬ್ಬಂದಿ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಹಾಗಿಯ ಸೋಫಿಯಾದ ಆವರಣದಲ್ಲೇ ಪ್ರತ್ಯೇಕ ಕೋಣೆಗಳನ್ನು ಕಟ್ಟಿ ಕೊಟ್ಟಿತ್ತು. 2013ರಿಂದ ಹಾಗಿಯ ಸೋಫಿಯಾದಲ್ಲಿ ನಿತ್ಯ ಎರಡು ಹೊತ್ತು ಅಝಾನ್ ಕರೆ ಮೊಳಗಲಿಕ್ಕೂ ಆರಂಭಿಸಿತ್ತು. 2016ರಲ್ಲಿ ಕೆಲವು ಖಾಸಗಿ ಸಂಘಟನೆಗಳ ಜನರು ಇಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. 2017ರಲ್ಲಿ ರಮಝಾನ್ ತಿಂಗಳ 27ನೇ ರಾತ್ರಿ ‘ಲೈಲತುಲ್ ಖದ್ರ್’ ಆಚರಣೆಗಾಗಿ ಇಲ್ಲಿ ಸರಕಾರದ ಕಡೆಯಿಂದಲೇ ಸಾಮೂಹಿಕ ನಮಾಝ್ ಹಾಗೂ ಕುರ್‌ಆನ್ ಪಠಣದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹೀಗೆ ಮಸೀದಿಯ ಬೇಡಿಕೆ ಹೆಜ್ಜೆ ಹೆಜ್ಜೆಯಾಗಿ ಬೆಳೆದು ಬಂದಿದ್ದು ಇದೀಗ ಅದು ತಾರಕದಲ್ಲಿದೆ.

(ಮುಂದುವರಿಯುವುದು)

Writer - ರುಖಿಯಾ, ಪುತ್ತಿಗೆ

contributor

Editor - ರುಖಿಯಾ, ಪುತ್ತಿಗೆ

contributor

Similar News