ಜೀವನ ನಿರ್ವಹಣೆಗೆ ತರಕಾರಿ ಮಾರುವ ಪಿಎಚ್‌ಡಿ ಪದವೀಧರೆ

Update: 2020-07-25 16:18 GMT
ಸಾಂದರ್ಭಿಕ ಚಿತ್ರ

ಇಂದೋರ್, ಜು.24: ಭೌತಿಕ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿರುವ ಬಡ ಕುಟುಂಬದ ಮಹಿಳೆಯೊಬ್ಬರು, ಧರ್ಮಾಧಾರಿತ ತಾರತಮ್ಯದಿಂದಾಗಿ ಉದ್ಯೋಗ ಸಿಗದೆ, ಜೀವನ ನಿರ್ವಹಣೆಗಾಗಿ ತರಕಾರಿ ಮಾರುತ್ತಿರುವ ಕರುಣಾಜಕನ ಕಥೆ ಮಧ್ಯಪ್ರದೇಶದ ಇಂದೋರ್ ನಗರದಿಂದ ವರದಿಯಾಗಿದೆ.

ಪಿಎಚ್‌ಡಿ ಪದವೀಧರೆ ರಾಯೀಸಾ ಅನ್ಸಾರಿ ತರಕಾರಿ ಮಾರಾಟ ಮಾಡುತ್ತಾ, ತನ್ನ ಕುಟುಂಬದ 23 ಮಂದಿ ಸದಸ್ಯರ ಪಾಲನೆಯನ್ನು ನೋಡಿಕೊಳ್ಳುತ್ತಿದ್ದಾರೆ. ‘‘ನನಗೆ ಯಾರು ತಾನೇ ಉದ್ಯೋಗ ನೀಡುತ್ತಾರೆ ?. ನನ್ನ ಕುಟುಂಬ ಬದುಕುಳಿಯಲು ಯಾರು ತಾನೇ ನೆರವಾಗುತ್ತಾರೆ ?. ನನ್ನ ಹೆಸರು ರಯೀಸಾ ಅನ್ಸಾರಿಯಾಗಿದ್ದು, ಈ ಕಾರಣದಿಂದಾಗಿ ನನಗೆ ಉದ್ಯೋಗ ದೊರೆಯುತ್ತಿಲ್ಲ’’ ಎಂದು ರಯೀಸಾ ನೋವಿನಿಂದ ಹೇಳುತ್ತಾರೆ.

ರಯೀಸಾ ಅವರು 2011ರಲ್ಲಿ ಇಂದೋರ್‌ನ ದೇವಿ ಅಹಲ್ಯಾ ವಿವಿಯಲ್ಲಿ ತನ್ನ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿದ್ದರು. ಆದರೆ ಅಂದಿನಿಂದ ಈವರೆಗೂ ಅವರು ನಿರುದ್ಯೋಗಿಯಾಗಿಯೇ ಉಳಿದಿದ್ದಾರೆ.

ಈ ಮಧ್ಯೆ ರಯೀಸಾ ಅನ್ಸಾರಿಯ ತರಕಾರಿ ವ್ಯಾಪಾರಕ್ಕೂ ಕುತ್ತು ಬಂದಿದೆ. ಇಂದೋರ್‌ನ ನಗರಪಾಲಿಕೆಯ ಆಕೆಯ ಅಂಗಡಿಯನ್ನು ತೆರವುಗೊಳಿಸುವಂತೆ ಸೂಚಿಸಿದೆ. ‘‘ನಮ್ಮ ಕುಟುಂಬವು ಇಲ್ಲಿ ಕಳೆದ 50 ವರ್ಷಗಳಿಂದ ತರಕಾರಿ ಮಾರಾಟ ಮಾಡುತ್ತಾ ಬಂದಿದೆ. ಒಂದು ವೇಳೆ ನಗರಪಾಲಿಕೆಯು, ನಮ್ಮ ಸೊತ್ತುಗಳನ್ನು ತೆರವುಗೊಳಿಸುವಂತೆ ಆದೇಶಿಸಿದಲ್ಲಿ, ನಾವು ಬದುಕುಳಿಯಲು ಯಾರು ನೆರವಾಗುತ್ತಾರೆ’’ ಎಂದು ಆಕೆ ಪ್ರಶ್ನಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News