ಗಂಗುಲಿ ಐಸಿಸಿ ಉನ್ನತ ಹುದ್ದೆಗೆ ಸಮರ್ಥ ಅಭ್ಯರ್ಥಿ: ಸಂಗಕ್ಕರ

Update: 2020-07-27 10:11 GMT

ಹೊಸದಿಲ್ಲಿ, ಜು.26: ಐಸಿಸಿ ಹುದ್ದೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಅವರನ್ನು ಬೆಂಬಲಿಸಿರುವ ಶ್ರೀಲಂಕಾ ಕ್ರಿಕೆಟ್ ದಂತಕತೆ ಕುಮಾರ ಸಂಗಕ್ಕರ ಅವರು ಚುರುಕಾದ ಕ್ರಿಕೆಟ್ ಮೆದುಳು ಮತ್ತು ನಿರ್ವಾಹಕರಾಗಿ ಅಪಾರ ಅನುಭವವು ಅವರನ್ನು ಈ ಪಾತ್ರಕ್ಕೆ ಅತ್ಯಂತ ಸೂಕ್ತವಾದ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾನು ಗಂಗುಲಿಯ ದೊಡ್ಡ ಅಭಿಮಾನಿ ಎಂದು ಒಪ್ಪಿಕೊಂಡ ಸಂಗಕ್ಕರ, ಭಾರತದ ಮಾಜಿ ನಾಯಕನಿಗೆ ಅಂತರ್‌ರಾಷ್ಟ್ರೀಯ ಮನಸ್ಥಿತಿ ಇದ್ದು, ಇದು ಪ್ರಮುಖ ಸ್ಥಾನದಲ್ಲಿ ಪಕ್ಷಪಾತವಿಲ್ಲದೆ ಇರಲು ಅಗತ್ಯವಾಗಿದೆ ಎಂದು ಎಂಸಿಸಿ ಅಧ್ಯಕ್ಷ ಸಂಗಕ್ಕರ ಹೇಳಿದ್ದಾರೆ.

‘‘ಸೌರವ್ ಆಟದ ಬಗ್ಗೆ ಒಳ್ಳೆಯ ಆಸಕ್ತಿ ಹೊಂದಿದ್ದಾರೆ. ನೀವು ಐಸಿಸಿಯಲ್ಲಿರುವಾಗ ಬಿಸಿಸಿಐ ಅಧ್ಯಕ್ಷರು ಅಥವಾ ಇಸಿಬಿ ಅಥವಾ ಎಸ್‌ಎಲ್ಸಿ ಅಥವಾ ಇನ್ನಾವುದೇ ಕ್ರಿಕೆಟ್ ಮಂಡಳಿಯಿಂದ ಬಂದಿದ್ದರೂ ಅದು ಬದಲಾಗಬಾರದು. ನಿಮ್ಮ ಮನಸ್ಥಿತಿ ನಿಜವಾಗಿಯೂ ಅಂತರ್‌ರಾಷ್ಟ್ರೀಯವಾಗಿರಬೇಕು ಮತ್ತು ನಾನು ಎಲ್ಲಿಂದ ಬಂದಿದ್ದೇನೆಂಬುದರ ಬಗ್ಗೆ ಪಕ್ಷಪಾತದಿಂದ ನಿರ್ಬಂಧಿಸಬಾರದು’’ ಎಂದರು.

‘‘ಮಾಜಿ ನಾಯಕ ಗಂಗುಲಿ ಸಂಬಂಧಗಳನ್ನು ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇದು ಕ್ರಿಕೆಟ್ ಆಡಳಿತ ಮಂಡಳಿಯ ಪ್ರಭಾವಶಾಲಿ ಸ್ಥಾನಕ್ಕೆ ಅತ್ಯಗತ್ಯ’’ ಎಂದು ಹೇಳಿದರು.

‘‘ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಅವರು ವಿಶ್ವದ ಆಟಗಾರರೊಂದಿಗೆ ಯಾವ ರೀತಿ ಸಂಬಂಧವನ್ನು ಬೆಳೆಸಿಕೊಂಡಿದ್ದರು ಮತ್ತು ಎಂಸಿಸಿ ಕ್ರಿಕೆಟ್ ಸಮಿತಿಯಲ್ಲಿ ಅವರ ನಿಲುವು ಏನು ಎನ್ನುವುದನ್ನು ನಾನು ನೋಡಿದ್ದೇನೆ ’’ಎಂದು ಅವರು ಹೇಳಿದರು.

ಬಿಸಿಸಿಐನ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಈ ತಿಂಗಳ ಆರಂಭದಲ್ಲಿ ಐಸಿಸಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದರು. ಐಸಿಸಿ ಉಪಾಧ್ಯಕ್ಷರಾಗಿದ್ದ ಹಾಂಕಾಂಗ್‌ನ ಇಮ್ರಾನ್ ಖ್ವಾಜಾ ಅಧ್ಯಕ್ಷ  ಹುದ್ದೆಗೆ ಚುನಾವಣೆ ನಡೆಯುವ ತನಕ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾದ (ಸಿಎಸ್‌ಎ) ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಕೂಡ ಐಸಿಸಿ ಅಧ್ಯಕ್ಷ ಹುದ್ದೆಗೆ ಗಂಗುಲಿಯನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News