6.67 ಕೋಟಿ ರೂ.ನ ನಕಲಿ ಬಿಲ್ ಸೃಷ್ಟಿ: ನಾಲ್ವರು ನೌಕಾಪಡೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ಹೊಸದಿಲ್ಲಿ, ಜು. 30: ಪಶ್ಚಿಮ ನೌಕಾ ಕಮಾಂಡ್‌ಗೆ ಐಟಿ ಹಾರ್ಡ್‌ವೇರ್ ಪೂರೈಕೆ ಮಾಡಿರುವುದಾಗಿ 6.67 ಕೋಟಿ ರೂಪಾಯಿಯ ನಕಲಿ ಬಿಲ್ ಸೃಷ್ಟಿಸಿದ ಆರೋಪದಲ್ಲಿ ನೌಕಾಪಡೆಯ ನಾಲ್ವರು ಅಧಿಕಾರಿಗಳು ಹಾಗೂ ಇತರ 14 ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಕ್ಯಾಪ್ಟನ್ ಅತುಲ್ ಕುಲಕರ್ಣಿ, ಕಮಾಂಡರ್‌ಗಳಾದ ಮಂದರ್ ಗೋಡ್ ಬೋಲೆ ಹಾಗೂ ಪಿ.ಆರ್. ಶರ್ಮಾ, ಕಿರಿಯ ಅಧಿಕಾರಿ ಎಲ್‌ಒಜಿ (ಎಫ್ ಆ್ಯಂಡ್ ಎ) ಕುಲದೀಪ್ ಸಿಂಗ್ ಬಾಘೇಲ್ 6.67 ಕೋಟಿ ರೂಪಾಯಿಯ ನಕಲಿ ಬಿಲ್ ಅನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಎಲ್ಲ ಅಧಿಕಾರಿಗಳು ನೌಕಾಪಡೆಯ ಪ್ರಾಧಿಕಾರಕ್ಕೆ ವಂಚಿಸಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೂ ಬೊಕ್ಕಸವನ್ನು ಲೂಟಿ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ತಂತ್ರಜ್ಞಾನ ಹಾಗೂ ನೆಟ್‌ವರ್ಕ್ ಸಂಬಂಧಿತ ಹಾರ್ಡ್‌ವೇರ್‌ಗಳನ್ನು ಮುಂಬೈಯಲ್ಲಿರುವ ಪಶ್ಚಿಮ ನೌಕಾ ಕಮಾಂಡ್‌ಗೆ ಪೂರೈಕೆ ಮಾಡಿರುವುದಾಗಿ 2016 ಜನವರಿ ಹಾಗೂ ಮಾರ್ಚ್ ನಡುವೆ ಈ ಬಿಲ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಲ್‌ನಲ್ಲಿ ಉಲ್ಲೇಖಿಸಿದ ಯಾವುದೇ ವಸ್ತುಗಳ್ನು ಪಶ್ಚಿಮ ನೌಕಾ ಕಮಾಂಡ್‌ನ ಕೇಂದ್ರ ಕಚೇರಿಗೆ ಪೂರೈಕೆ ಮಾಡಿಲ್ಲ ಎಂದು ಸಿಬಿಐ ಹೇಳಿದೆ.