ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ: ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ ಕೋರಿ ಸಲ್ಲಿಸಿದ ಮನವಿ ತಿರಸ್ಕೃತ

Update: 2020-07-30 15:34 GMT

ಮುಂಬೈ, ಜು. 30: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ, ಪೊಲೀಸರು ತಮ್ಮ ಕೆಲಸವನ್ನು ನಿರ್ವಹಿಸಲು ಅವಕಾಶ ನೀಡಬೇಕು. ಈ ಹಂತದಲ್ಲಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂಬುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಪ್ರಕರಣಕ್ಕೆ ಸಂಬಂಧಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ ದೂರುದಾರನ ಪರವಾಗಿ ಹಾಜರಾದ ವಕೀಲರಲ್ಲಿ ಹೇಳಿದೆ.

ರಜಪೂತ್ ಅವರು ಬುದ್ಧಿವಂತ. ಅವರು ನಾಸಾಕ್ಕೂ ತೆರಳಿ ತರಬೇತಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳನ್ನು ಕೂಡ ನಾಸಾಕ್ಕೆ ಕಳುಹಿಸಿದ್ದಾರೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು. ‘‘ಈ ಘಟನೆ ನಡೆದಿರುವುದು ಮುಂಬೈಯಲ್ಲಿ. ಆದುದರಿಂದ ಏನಾದರೂ ಹೇಳುವುದಿದ್ದರೆ ದೂರುದಾರರು ಮುಂಬೈ ಉಚ್ಚ ನ್ಯಾಯಾಲಯಕ್ಕೆ ಹೋಗಬೇಕು’’ ಎಂದು ಪೀಠ ಹೇಳಿದೆ. ಪಾಟ್ನಾ ನಿವಾಸಿ ಅಲ್ಕಾ ಪ್ರಿಯಾ ಹಾಗೂ ಇನ್ನೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಮುಂಬೈ ಪೊಲೀಸರ ತನಿಖೆಯ ನ್ಯೂನತೆ ಉಲ್ಲೇಖಿಸಿ ಸಿಬಿಐಗೆ ವರ್ಗಾಯಿಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News