ರೈಲು ನಿಲ್ದಾಣದಲ್ಲಿ ಕೋವಿಡ್ ತಪಾಸಣೆ ಹೀಗೇಕೆ?

Update: 2020-08-07 17:20 GMT

ಮಾನ್ಯರೇ,
‘‘ಹೆಂಡತಿಯ ತಾಯಿ ಸೀರಿಯಸ್ ಇದ್ದುದರಿಂದ ಮುಂಬೈಯಿಂದ ಮಂಗಳೂರಿಗೆ ಪ್ರಯಾಣಿಸಬೇಕಾಗಿದೆ. ಅಲ್ಲಿ ಕೋವಿಡ್ ಟೆಸ್ಟ್ ಇದೆಯಾ? ಎಷ್ಟು ದಿನ ಕ್ವಾರಂಟೈನ್?’’ ಇತ್ಯಾದಿ ವಿಷಯಗಳ ಬಗ್ಗೆ ನಾನು ನನ್ನ ಮಂಗಳೂರು ಹಾಗೂ ಉಡುಪಿ ಮಿತ್ರರಿಗೆ ಫೋನಾಯಿಸಿದಾಗ ತಿಳಿದು ಬಂದಿದ್ದು ಇಷ್ಟು!!
ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ರೈಲು ಬರುವ ಹೊತ್ತಿಗೆ ರೈಲ್ವೆ ಪೊಲೀಸರು ಜನರು ಬೇರೆ ಕಡೆಯಿಂದ ಹೊರಹೋಗದೆ ಮುಖ್ಯ ದ್ವಾರದಿಂದಲೇ ಹೊರಹೋಗುವಂತೆ ಮಾಡುತ್ತಾರೆ. ಮುಖ್ಯ ಹೊರ ದಾರಿಯಲ್ಲಿ ಹೆಲ್ತ್ ಡಿಪಾರ್ಟ್‌ಮೆಂಟ್, ಸ್ಥಳೀಯ ಪೊಲೀಸ್ ಹಾಗೂ ಅಬಕಾರಿ ಇಲಾಖೆಯವರು ಇರುತ್ತಾರೆ. ಕೈಗೆ ಬ್ರೇಸ್ಲೆಟ್, ಕುತ್ತಿಗೆಗೆ ಬಂಗಾರ ಇದ್ದರೆ ಆ ಪ್ರಯಾಣಿಕನಿಗೆ ಕೋವಿಡ್-19ರ ಯಾವುದೇ ಕುರುಹು ಇಲ್ಲದಿದ್ದರೂ, ಥರ್ಮಲ್ ಸ್ಕ್ಯಾನಿಂಗ್ ದೇಹದ ಉಷ್ಣಾಂಶವನ್ನು ಕಡಿಮೆ ತೋರಿಸಿದರೂ ಅವರಿಗೆ ಹದಿನಾಲ್ಕು ದಿನ ಹೊಟೇಲ್ ಕ್ವಾರಂಟೈನ್, ಪ್ರಯಾಣಿಕ ಏರ್‌ಕಂಡೀಷನ್ ಬೋಗಿಯಲ್ಲಿ ಬಂದು ಒಳ್ಳೆಯ ದಿರಿಸು ಧರಿಸಿದ್ದರೆ ಅವರಿಗೆ ಹದಿನಾಲ್ಕು ದಿನ ಆಸ್ಪತ್ರೆ ಕ್ವಾರಂಟೈನ್ ಎನ್ನುತ್ತಾರಂತೆ. ಆದರೆ ಜನರಲ್ ಬೋಗಿ ಟಿಕೆಟ್ ಹಿಡಿದು ಸಾಧಾರಣ ಬಟ್ಟೆ ಹಾಕಿ ಮುಂಬೈಯಿಂದ ಬಂದರೆ ಅವರು ಎಷ್ಟೇ ಕೆಮ್ಮಿದರೂ, ಸೀನಿದರೂ ಅಂತಹವರಿಗೆ ಹೋಂ ಕ್ವಾರಂಟೈನ್‌ಗೆ ಕಳಿಸುತ್ತಾರಂತೆೆ.

ಮನುಷ್ಯನ ದೇಹದ ಸಾಮಾನ್ಯ ಉಷ್ಣಾಂಶ 98.6 ಡಿಗ್ರಿ. ಸುರತ್ಕಲ್ ರೈಲು ತಲುಪಿದಾಗ ಒಂದು ಕ್ರೋಸಿನ್ ತೆಗೆದುಕೊಂಡರೆ ಮಂಗಳೂರಲ್ಲಿ ಇಳಿದಾಗ ಉಷ್ಣಾಂಶ ತೊಂಭತ್ತು ಡಿಗ್ರಿ. ಅಂತಹರಿಗೆ ಕ್ವಾರಂಟೈನ್ ಇಲ್ಲ!. ಮಂಗಳೂರಿನವರು ಮುಂಬೈಯಿಂದ ರಿಸರ್ವೇಶನ್ ಟಿಕೆಟ್‌ನಲ್ಲಿ ಬಂದು ಉಡುಪಿ ತಲುಪಿದಾಗ ಅವರ ಮಿತ್ರರು ಪ್ಲಾಟ್‌ಫಾರಂಗೆ ಬಂದು ಅವರಿಗೆ ಉಡುಪಿ-ಮಂಗಳೂರು ಜನರಲ್ ಟಿಕೆಟ್ ಕೊಟ್ಟು ಹೋಗುತ್ತಾರೆ. ಮಂಗಳೂರಲ್ಲಿ ಇಳಿದಾಗ ಅವರು ತಮ್ಮ ರಿಸರ್ವೇಶನ್ ಟಿಕೆಟ್ ತೋರಿಸದೆ ಉಡುಪಿ-ಮಂಗಳೂರು ಜನರಲ್ ಟಿಕೆಟ್ ತೋರಿಸುತ್ತಾರೆ. ಇವರು ಮುಂಬೈಯಿಂದ ಬಂದವರಲ್ಲ, ಉಡುಪಿಯಿಂದ ಎಂದು ತಿಳಿದು ಯಾವುದೇ ಕೋವಿಡ್ ತಪಾಸಣೆ ಇಲ್ಲದೆ ಹೊರಹೋಗಲು ಬಿಡುತ್ತಾರಂತೆ. ಇದರಿಂದಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ ಎಂಬುದು ಮಿತ್ರರ ಹೇಳಿಕೆ. ಇದು ನಿಜವಾಗಿದ್ದರೆ ಕರ್ನಾಟಕ ಕರಾವಳಿಯಲ್ಲಿ ಕೊರೋನ ಹೆಚ್ಚಾಗಲು ಬೇರೆ ಕಾರಣ ಹುಡುಕಬೇಕಿಲ್ಲವಲ್ಲ.
 

Similar News