ಪರೀಕ್ಷೆ ಮುಂದೂಡಿ

Update: 2020-08-10 18:02 GMT

ಮಾನ್ಯರೇ,

 ಕರ್ನಾಟಕ ಲೋಕಸೇವಾ ಆಯೋಗದವರು ಈ ಬಾರಿ 106 ಕೆಎಎಸ್ ಪ್ರೊಬೆಷನರಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಗೆಜೆಟೆಡ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 24, 2020ರಂದು ನಡೆಸಲು ತೀರ್ಮಾನಿಸಿದ್ದಾರೆ. ಈ ಪರೀಕ್ಷೆಗೆ ಪ್ರತಿ ಎರಡು ಅಥವಾ ಮೂರು ವರ್ಷಗಳಿಗೆ ಒಮ್ಮೆ ಮಾತ್ರ ಅರ್ಜಿ ಕರೆಯಲಾಗುತ್ತದೆ. ಪ್ರತಿ ಬಾರಿಯೂ ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆಯಲ್ಲಿ ಹಾಜರಾಗುತ್ತಾರೆ. ಆದರೆ ಸರಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಕ್ಟರ್, ನರ್ಸ್, ಪ್ರಥಮ ದರ್ಜೆ ಸಹಾಯಕರು, ಪಿಡಿಒಗಳು, ಆರೋಗ್ಯ ಅಧಿಕಾರಿಗಳು, ಲೆಕ್ಕಾಧಿಕಾರಿಗಳು ಹೀಗೆ ಹಲವಾರು ನೌಕರರು ಈಗ ಕೊರೋನ ಯೋಧರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿದ್ದು ಅವರಿಗೆ ಪ್ರತಿ ಶನಿವಾರ ಹಾಗೂ ರವಿವಾರಗಳಲ್ಲಿ ಕೂಡಾ ರಜೆ ಇರುವುದಿಲ್ಲ. ಇಂತಹ ಶೇ. 20 ನೌಕರರು ಈ ಬಾರಿ ಕೆಎಎಸ್ ಬರೆಯುವ ಆಕಾಂಕ್ಷಿಗಳಾಗಿದ್ದು ಅವರಿಗೆ ಪರೀಕ್ಷೆ ಬರೆಯಲು ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ. ಅಲ್ಲದೆ ಕೆಪಿಎಸ್‌ಸಿ ಕೇವಲ 6 -7 ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿದ್ದು, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸುಮಾರು 200 ಕಿಲೋಮೀಟರು ಅಂತರವಿರುವುದರಿಂದ ಸಮಯಕ್ಕೆ ಸರಿಯಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲು ಸಾಧ್ಯವಾಗುವುದಿಲ್ಲ ಹಾಗೂ ಜಿಲ್ಲಾ ಕೇಂದ್ರದಿಂದ ಕುಗ್ರಾಮದಲ್ಲಿ ಇರುವಂತಹ ಹಲವಾರು ಅಭ್ಯರ್ಥಿಗಳಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೂಡ ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ಹಾಗಾಗಿ ಪರೀಕ್ಷೆ ಬರೆಯುವುದು ಅಸಾಧ್ಯದ ಮಾತಾಗಿದೆ. ಅಲ್ಲದೆ ಕೆಲವು ಅಭ್ಯರ್ಥಿಗಳು ಬೆಂಗಳೂರಿನಲ್ಲಿ ತರಬೇತಿಯನ್ನು ಪಡೆಯುವಾಗ ಬೆಂಗಳೂರನ್ನು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈಗ ಬೆಂಗಳೂರಿನಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವರು ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ಈಗ ಅವರೂ ಬೆಂಗಳೂರಿಗೆ ಬಂದು ನಿಗದಿತ ವೇಳೆಯಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಅಲ್ಲದೆ ಯುಪಿಎಸ್‌ಸಿ ಮಾದರಿಯಲ್ಲಿ ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಕೆಪಿಎಸ್‌ಸಿ ಅವಕಾಶ ನೀಡಿಲ್ಲ. ಇದರಿಂದ ಮಳೆ, ಪ್ರವಾಹ ಇರುವ ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದವರಿಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಲೋಕಸೇವಾ ಆಯೋಗ ಈ ತಿಂಗಳ 24ರಂದು ನಡೆಸಲು ಉದ್ದೇಶಿಸಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಕನಿಷ್ಠ ಒಂದು ಅಥವಾ ಎರಡು ತಿಂಗಳು ಮುಂದೂಡುವುದು ಸಮಯೋಚಿತ ನಿರ್ಧಾರವಾಗಲಿದೆೆ.

Writer - -ಲಕ್ಷ್ಮೀಕಾಂತ್, ತುಮಕೂರು

contributor

Editor - -ಲಕ್ಷ್ಮೀಕಾಂತ್, ತುಮಕೂರು

contributor

Similar News